Advertisement

ಶಾಂತಿಗಾಗಿ ಕುದುರೆ ಏರಿದ ರಾಜ

10:04 AM Apr 26, 2019 | Hari Prasad |

ರಾಜ ಬಾಯಾರಿದ್ದ. ದೂರದಲ್ಲಿ ಒಂದು ದೊಡ್ಡ ಸರೋವರ ಕಂಡಿತು. ಅಲ್ಲಿ ಕಾಲಿಡಲೂ ಭಯವಾಗುವಂತಿತ್ತು. ಭಯಂಕರ ಶಾರ್ಕ್‌ಗಳೂ, ಭಾರಿ ತಿಮಿಂಗಿಲಗಳೂ ಈಜಾಡುತ್ತಿದ್ದವು.

Advertisement

ಹರಪನಹಳ್ಳಿ ಎಂಬುದೊಂದು ಊರು. ಗುಣವಂತ ಅಲ್ಲಿಯ ದೊರೆ. ಗೋಂದ ಸಾಬು ಅವನ ಮಂತ್ರಿ. ಒಂದು ನಡುರಾತ್ರಿ ಕೋಳಿ ಕೊಕ್ಕೊಕ್ಕೋ… ಎಂದು ತಾರಕಸ್ವರದಲ್ಲಿ ಕೂಗಿತು. ತಕ್ಷಣ ರಾಜ ದಡಬಡಿಸಿ ಎದ್ದ. ಅದೇನೋ ಕಸಿವಿಸಿ, ಏನೋ ಅತೃಪ್ತಿ. ಮನಸ್ಸು ಗೊಂದಲದ ಗೂಡಾಗಿತ್ತು. ಅವನಿಗೆ ಶಾಂತಿಯ ಅಗತ್ಯವಿದೆ ಎನಿಸಿತು. ತಕ್ಷಣ ಮಂತ್ರಿ ಗೋಂದ ಸಾಬುನನ್ನು ಕರೆಸಿ, ತನಗೆ ಶಾಂತಿ ಬೇಕು ಎಂದ!

ಮಂತ್ರಿಗೆ ಏನೊಂದೂ ಅರ್ಥವಾಗದೆ ತಲೆ ಕೆರೆದುಕೊಂಡ. ಉಪಾಯ ಹೊಳೆಯದೆ “ಪ್ರಭು, ಅದು ನನ್ನ ಬಳಿಯಿಲ್ಲ. ನಮ್ಮ ಅರಮನೆಯಲ್ಲಿಯೂ ಇಲ್ಲ. ನಮ್ಮ ಪ್ರಜೆಗಳಲ್ಲಿ ಯಾರ ಬಳಿಯಲ್ಲಾದರೂ ದೊರೆಯಬಹುದು, ತಪಾಸಣೆ ನಡೆಸೋಣವೇ?’ ಎಂದ.

ರಾಜನಿಗೆ ಅದೇ ಸರಿ ಕಂಡಿತು. ಕುದುರೆಯನ್ನೇರಿ ಗುಣವಂತ ಊರಿನೊಳಗೆ ದೌಡಾಯಿಸಿದ. ಮಾರ್ಗ ಮಧ್ಯದಲ್ಲಿ ಒಬ್ಬ ಭಿಕ್ಷುಕ ಇವನನ್ನು ತಡೆದು ನಿಲ್ಲಿಸಿ “ಅಯ್ನಾ… ನಾನೊಬ್ಬ ಕುರುಡ. ನನ್ನನ್ನು ಮಾತಾಡಿಸದೇ ಹೋಗುತ್ತಿರುವೆಯಲ್ಲ?’ ಎಂದು ಕೇಳಿದ. ರಾಜ ಶಾಂತಿಯ ಕುರಿತು ಅವನಲ್ಲಿ ವಿಚಾರಿಸಿದ. ಭಿಕ್ಷುಕ ತನ್ನಲ್ಲಿಲ್ಲವೆಂದು ತಲೆಯಾಡಿಸಿದ. ರಾಜ ಮುಂದೆ ಸಾಗಿದ.

ಸಣ್ಣಗೆ ಮಳೆ ಜಿನುಗುತ್ತಿತ್ತು. ತಡೆಯಲಾರದ ಚಳಿ ಬೇರೆ. ಕುದುರೆ ಬಾಯಾರಿಕೆಯಿಂದ ಬಳಲಿತ್ತು. ರಾಜನೂ ಬಾಯಾರಿದ್ದ, ನೀರಿಗಾಗಿ ಅತ್ತಿತ್ತ ನೋಡಲು, ಅನತಿ ದೂರದಲ್ಲಿ ಒಂದು ದೊಡ್ಡ ಸರೋವರ ಕಂಡಿತು. ಅಲ್ಲಿ ಕಾಲಿಡಲೂ ಭಯವಾಗುವಂತಿತ್ತು. ಭಯಂಕರ ಶಾರ್ಕ್‌ಗಳೂ, ಭಾರಿ ತಿಮಿಂಗಿಲಗಳೂ ಎಲ್ಲೆಡೆ ಈಜಾಡುತ್ತಿದ್ದವು. ಮೊಸಳೆಗಳು ದಂಡೆಯುದ್ದಕ್ಕೂ ಸ್ವಚ್ಛಂದವಾಗಿ ಬಿಸಿಲು ಕಾಯಿಸುತ್ತ ಮಲಗಿದ್ದವು.

Advertisement

ರಾಜ ಬೆದರಲಿಲ್ಲ, ಮೊಸಳೆಗಳ ಬೆನ್ನ ಮೇಲೆ ಸಾಗಿ ಹಳ್ಳದಲ್ಲಿಳಿದು ತಿಮಿಂಗಿಲಗಳನ್ನು, ಶಾರ್ಕ್‌ ಗಳನ್ನು ಅತ್ತಿತ್ತ ತಳ್ಳಿ ಮನಸಾರೆ ನೀರನ್ನು ಕುಡಿದ. ಕುದುರೆಗೂ ಹೊಟ್ಟೆ ಬಿರಿಯುವಷ್ಟು ಕುಡಿಸಿದ. ನೀರು ಕುಡಿದು ಕುದುರೆಗೆ ಭಾರೀ ಶಕ್ತಿ ಬಂದಿತು. ಬಹಳ ವೇಗವಾಗಿ ಕುದುರೆ ಮುನ್ನುಗ್ಗಿತು.
ದಾರಿಯಲ್ಲಿ ಒಬ್ಬ ವ್ಯಕ್ತಿ ಹಾಲು ಕರೆಯುತ್ತಾ ಕುಳಿತಿದ್ದ. ರಾಜ ಅವನ ಬಳಿ ಸಾಗಿ “ಅಯ್ಯಾ, ನನಗೆ ಶಾಂತಿ ಬೇಕಾಗಿದೆ, ನೀನು ಕೊಡಬಲ್ಲೆಯಾ?’ ಎಂದು ಕೇಳಿದ. ಆತ ನಕ್ಕು “ಬೇಕಾದರೆ ನಾನು ಹಾಲು ನೀಡಬಲ್ಲೆ. ಆದರೆ ಶಾಂತಿ ನೀಡಲಾರೆ’ ಎಂದು ಹೇಳಿದ. ಅವನ ಮನೆಯಲ್ಲಿ ಹಾಲು. ಮೊಟ್ಟೆ ತಿಂದು ರಾಜ ಢರ್ರೆಂದು ತೇಗಿದ. ಕೊಂಚ ವಿಶ್ರಾಂತಿ ಪಡೆದು ಪುನಃ ಕುದುರೆಯೇರಿ ಸಾಗಿದ.

ರಾಜನಿಗೆ ಆಗಲೇ ನಿರಾಸೆಯಾಗ­ಲಾರಂಭಿಸಿತ್ತು. ಅಷ್ಟರಲ್ಲಿ ಅವನಿಗೊಂದು ಬೃಹದಾಕಾರದ ಗುಡಿಸಲು ಕಂಡಿತು. ಗುಡಿಸಲಿನ ಹೊರಗೊಬ್ಬ ಮುದುಕ ಕುಳಿತಿದ್ದ. ಸುಮಾರು 70 ವರ್ಷದವನಿರಬೇಕು. ತಲೆ ತುಂಬಾ ಬಿಳಿಕೂದಲು, ಗೋಲಿ ಆಡುತ್ತಾ ಕುಳಿತಿದ್ದ. ರಾಜ ಅವನ ಬಳಿ ಕೇಳಿದ “ಅಯ್ಯಾ, ನನಗೆ ಶಾಂತಿ ಬೇಕಾಗಿದೆ, ಕೊಡಬಲ್ಲೆಯಾ?’ ಮುದುಕ ಸಣ್ಣಗೆ ನಕ್ಕು ಒಳಹೋದ. ಕ್ಷಣಾರ್ಧದಲ್ಲಿ ಒಬ್ಬ ಹುಡುಗಿಯನ್ನು ಕರೆತಂದ. ಅವಳು ಮುದುಕನ ಮೊಮ್ಮಗಳಾಗಿದ್ದಳು. ರಾಜ ಅವಳ ಸೌಂದರ್ಯರಾಶಿಗೆ ಮರುಳಾಗಿಬಿಟ್ಟ.

ಮುದುಕ ಹೇಳಿದ “ರಾಜನ್‌ ಇವಳು ನನ್ನ ಮೊಮ್ಮಗಳು ಶಾಂತಿ. ಇವಳನ್ನು ಹುಡುಕಿಕೊಂಡು ರಾಜ ಬರುತ್ತಾನೆ. ಆತನೇ ಅವಳನ್ನು ಮದುವೆಯಾಗುತ್ತಾನೆ ಎಂದು ಕಿನ್ನರನೊಬ್ಬ ಹೇಳಿದ್ದ. ಅದು ಇಂದು ನಿಜವಾಯಿತು.’ ಎಂದ. ಅಷ್ಟು ದಿನ ರಾಜ ಅನುಭವಿಸುತ್ತಿದ್ದ ಕಸಿವಿಸಿ, ಹಪಾಹಪಿ ಎಲ್ಲವೂ ಮಾಯವಾಯಿತು. ಮನದಲ್ಲಿ ಶಾಂತಿ ನೆಲೆಸಿತು. ಅವಳನ್ನು ಕುದುರೆ ಮೇಲೆ ಕೂರಿಸಿಕೊಂಡ ರಾಜ ಅರಮನೆಯತ್ತ ಪಯಣಿಸಿದ.

— ಕೆ. ಶ್ರೀನಿವಾಸರಾವ್‌

Advertisement

Udayavani is now on Telegram. Click here to join our channel and stay updated with the latest news.

Next