ಬೆಂಗಳೂರು: ಕಳವು ಮಾಡಿದ ಹಣದ ಹಂಚಿಕೆ ವಿಚಾರದಲ್ಲಿ ಮೂವರು ಜೇಬುಗಳ್ಳರ ನಡುವೆ ನಡೆದ ಮಾರಾಮಾರಿ ಒಬ್ಬನ ಕೊಲೆಯಲ್ಲಿ ಅಂತ್ಯವಾದ ಘಟನೆ ನಡೆದಿದೆ. ಫ್ಲಲರ್ ಗಾರ್ಡ್‌ನ್ ನಿವಾಸಿ ಅಜಿತ್ (19) ಕೊಲೆಯಾದವ. ಗುರುವಾರ ತಡರಾತ್ರಿ ಮೂವರ ನಡುವೆ ಗಲಾಟೆಯಾಗಿದ್ದು, ಈ ವೇಳೆ ಅರವಿಂದ್ ಎಂಬಾತ ಬ್ಲೇಡ್‌ನಿಂದ ಅಜಿತ್‌ನ ಕಾಲಿನ ನರ ಕತ್ತರಿಸಿದ್ದಾನೆ.
ತೀವ್ರ ರಕ್ತಸ್ರಾವದಿಂದ ಅಜಿತ್ ಸಾವನ್ನಪ್ಪಿದ್ದಾನೆ. ಈ ಸಂಬಂಧ ಅರವಿಂದ್ ಮತ್ತು ಈತನ ಸ್ನೇಹಿತ ಗುಂಡ ಎಂಬಾತನಿಗೆ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಜಿತ್, ಅರವಿಂದ್ ಹಾಗೂ ಗುಂಡ ಸ್ನೇಹಿತರಾಗಿದ್ದು, ಯಾವುದೇ ಕೆಲಸಕ್ಕೆ ಹೋಗದೆ ಉಪ್ಪಾರಪೇಟೆ, ಕಾಟನ್‌ಪೇಟೆ ಠಾಣೆ ವ್ಯಾಪ್ತಿಯಲ್ಲಿ ಜೇಬುಗಳ್ಳತನ ಮಾಡುತ್ತಿದ್ದರು.
ಜೈಲಿಗೂ ಹೋಗಿ ಜಾಮೀನು ಪಡೆದು ಹೊರಬಂದಿದ್ದಾರೆ. ಇತ್ತೀಚೆಗೆ ಮೂವರು ಕಳ್ಳತನ ಬಿಟ್ಟು ಗಾರೆ ಹಾಗೂ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಇಲ್ಲಿನ ನಿರ್ಮಾಣ ಹಂತದ ಕಟ್ಟಡಗಳಲ್ಲಿಯೇ ಮಲಗುತ್ತಿದ್ದರು. ಆದರೆ, ತಮ್ಮ ಮೋಜಿನ ಜೀವನಕ್ಕಾಗಿ ಹಣ ಹೊಂದಿಸಲು ಸಾಧ್ಯವಾಗದೆ, ಕಾಟನ್‌ಪೇಟೆ ವ್ಯಾಪ್ತಿಯಲ್ಲಿ ಜೇಬುಗಳ್ಳತನ ಮಾಡಿದ್ದರು.
ಈ ಹಣ ಹಂಚಿಕೆ ವಿಚಾರದಲ್ಲಿ ಶುಕ್ರವಾರ ಬೆಳಗ್ಗೆ ಮೂವರ ನಡುವೆ ಮಾರಾಮಾರಿ ನಡೆದಿದೆ. ಆಗ ಅರವಿಂದ್ ತನ್ನ ಬಳಿಯಿದ್ದ ಬ್ಲೇಡ್‌ನಿಂದ ಅಜಿತ್ ಕಾಲಿನ ಮಂಡಿ ಚಿಪ್ಪಿನ ಹಿಂಭಾಗದ ಕೆಳಗೆ ಇರಿದಿದ್ದು, ಬ್ಲೇಡ್ ಅಳಕ್ಕಿಳಿದು ನರ ಕಟ್ ಆಗಿದೆ. ತೀವ್ರ ರಕ್ತ ಸ್ರಾವದಿಂದ ಕೆಳಗೆ ಬಿದ್ದು ಅಜಿತ್ ನರಳಾಡಿದ್ದಾನೆ. ಗಾಬರಿಗೊಂಡ ಸ್ನೇಹಿತರು ಕೂಡಲೇ ರಕ್ತಸ್ರಾವ ತಡೆಯಲು ಮುಂದಾಗಿದ್ದಾರೆ.
ಆದರೆ, ಸಾಧ್ಯವಾಗಿಲ್ಲ. ಬಳಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ನೀಡಿದ ವೈದ್ಯರು ಕಾಲಿನಲ್ಲಿರುವ ರಕ್ತನಾಳ ತುಂಟಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಹೇಳುತ್ತಿದ್ದಂತೆ ಆರೋಪಿಗಳಿಬ್ಬರು ಪರಾರಿಯಾಗಿದ್ದಾರೆ. ಆರೋಪಿಗಳ ಬಗ್ಗೆ ಮಾಹಿತಿ ಇದ್ದು, ಸದ್ಯದಲ್ಲೇ ಬಂಧಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.