Advertisement
ವಿಶ್ವ ಆರ್ಥಿಕ ವೇದಿಕೆಯು ಮಾರ್ಚ್ 30ರಂದು ಬಿಡುಗಡೆ ಮಾಡಿರುವ ಜಾಗತಿಕ ಲಿಂಗ ಅಂತರ 2021ರ ವರದಿಯ ಪ್ರಕಾರ ಮಹಿಳೆಯರು ಲಿಂಗ ಸಮಾನತೆಗಾಗಿ ಸರಿಸುಮಾರು ಒಂದೂವರೆ ಶತನಮಾನದಷ್ಟು ಕಾಯಬೇಕಾಗುತ್ತದೆ. ಜಾಗತಿಕ ಲಿಂಗ ಅಂತರ ಸೂಚ್ಯಂಕವು ಆರೋಗ್ಯದ ತುರ್ತುಸ್ಥಿತಿ ಮತ್ತು ಸಂಬಂಧಿತ ಆರ್ಥಿಕ ಕುಸಿತವು ಪುರುಷರಿಗಿಂತ ಮಹಿಳೆಯರ ಮೇಲೆ ಹೆಚ್ಚು ಪರಿಣಾಮ ಬೀರಿದೆ ಎಂದು ಪ್ರಾಥಮಿಕ ಸಾಕ್ಷ್ಯಗಳು ಸೂಚಿಸುತ್ತವೆ.
ಜಾಗತಿಕ ಲಿಂಗ ಅಂತರ ಸೂಚ್ಯಂಕವು ಆರ್ಥಿಕ ಭಾಗವಹಿಸುವಿಕೆ ಮತ್ತು ಅವಕಾಶ, ಶೈಕ್ಷಣಿಕ ಸಾಧನೆ, ಆರೋಗ್ಯ ಮತ್ತು ಬದುಕುಳಿಯುವಿಕೆ ಮತ್ತು ರಾಜಕೀಯ ಸಶಕ್ತೀಕರಣ ಎಂಬ ನಾಲ್ಕು ಪ್ರಮುಖ ಆಯಾಮಗಳಲ್ಲಿ ಲಿಂಗ ಆಧಾರಿತ ಅಂತರಗಳ ವಿಕಾಸವನ್ನು ಮಾನದಂಡವಾಗಿ ಗುರುತಿ ಸುತ್ತದೆ ಮತ್ತು ಕಾಲಾನಂತರದಲ್ಲಿ ಈ ಅಂತರವನ್ನು ಮುಚ್ಚುವ ಪ್ರಗತಿಯನ್ನು ಪತ್ತೆ ಮಾಡುತ್ತದೆ.
Related Articles
Advertisement
ಜಾಗತಿಕ ಮಟ್ಟದಲ್ಲಿ ಕುಸಿದ ಭಾರತದ ಸ್ಥಾನವಿಶ್ವ ಆರ್ಥಿಕ ವೇದಿಕೆಯು ಬಿಡುಗಡೆ ಮಾಡಿದ ಜಾಗತಿಕ ಲಿಂಗ ಅಂತರ ಸೂಚ್ಯಂಕದಲ್ಲಿ 2010ಕ್ಕೆ ಹೋಲಿಸಿದರೆ ಭಾರತವು 28 ಸ್ಥಾನಗಳನ್ನು ಕಳೆದು ಕೊಂಡು 156 ದೇಶಗಳಲ್ಲಿ 140ನೇ ಸ್ಥಾನದಲ್ಲಿದೆ. ಲಿಂಗ ಸಮಾನತೆಯು ಮೂಲಭೂತ ಮಾನವ ಹಕ್ಕು ಮಾತ್ರವಲ್ಲ, ಶಾಂತಿಯುತ, ಸಮೃದ್ಧ ಮತ್ತು ಸುಸ್ಥಿರ ಜಗತ್ತಿಗೆ ಅಗತ್ಯವಾದ ಅಡಿಪಾಯವಾಗಿದೆ. ಸ್ತ್ರೀ-ಪುರುಷ ಸಮಾನತೆಯ ವಿಚಾರದಲ್ಲಿ ಮುಖ್ಯವಾಗಿ ಆರ್ಥಿಕ ಅವಕಾಶಗಳು, ಆರೋಗ್ಯ, ಶಿಕ್ಷಣ, ರಾಜಕೀಯ ಕ್ಷೇತ್ರಗಳಲ್ಲಿ ನಮ್ಮ ಜಾಗತಿಕ ಸ್ಥಾನ ಮೇಲೇರುವ ಬದಲು ಕುಸಿಯುತ್ತಾ ಸಾಗಿರುವುದು ಕಳವಳಕಾರಿ. ರಾಜಕೀಯ ಸಶಕ್ತೀಕರಣದಲ್ಲಿ ಹೆಚ್ಚಿನ ಕುಸಿತ ಸಂಭವಿಸಿದೆ. ಆರ್ಥಿಕ ಭಾಗವಹಿಸುವಿಕೆ ಮತ್ತು ಅವಕಾಶ ಮಾನದಂಡದಲ್ಲಿಯೂ ಕುಸಿತ ಕಂಡು ಬಂದಿದೆ. ಮಹಿಳಾ ಕಾರ್ಮಿಕ ಬಲ ಶೇ. 24.8ರಿಂದ 22.3ಕ್ಕೆ ಇಳಿಕೆ ಹಾಗೂ ಮಹಿಳೆಯರ ಅಂದಾಜು ಗಳಿಕೆ ಪುರುಷರ ಗಳಿಕೆಯ ಐದನೇ ಒಂದು ಭಾಗಕ್ಕೆ ಇಳಿದಿರುವುದು ಆಘಾತಕಾರಿ ಅಂಶ. ಇದಕ್ಕೆ ವ್ಯತಿರಿಕ್ತವಾಗಿ ಶೈಕ್ಷಣಿಕವಾಗಿ ಪ್ರಾಥಮಿಕ, ಪ್ರೌಢ ಮತ್ತು ಉನ್ನತ ಶಿಕ್ಷಣದಲ್ಲಿ ಹೆಚ್ಚಿನ ಸಮಾನತೆಯನ್ನು ಸಾಧಿಸಿದರೂ ಸಾಕ್ಷರತೆಯ ದೃಷ್ಟಿಯಿಂದ ಲಿಂಗ ಅಂತರವು ಮುಂದುವರಿದಿದೆ. ಪುರುಷರಲ್ಲಿ ಶೇ. 17.6 ಅನಕ್ಷರಸ್ಥರಿದ್ದರೆ, ಮಹಿಳೆಯರಲ್ಲಿ ಶೇ. 34.2 ಅನಕ್ಷರಸ್ಥರಿದ್ದಾರೆ. ಭಾರತದಲ್ಲಿ ಮನೆಗಳು, ಕೆಲಸದ ಸ್ಥಳಗಳು ಮತ್ತು ಸಾಮಾಜಿಕ ಸ್ತರಗಳಲ್ಲಿ ಲಿಂಗ ಅಸಮಾನತೆಯನ್ನು ಕಾಣಬಹುದಾಗಿದೆ. 2011ರ ಅಂಕಿ ಅಂಶದ ಪ್ರಕಾರ, ಪರಿಣಾಮಕಾರಿ ಸಾಕ್ಷರತೆಯ ಪ್ರಮಾಣ(ವಯಸ್ಸು 7 ಮತ್ತು ಮೇಲ್ಪಟ್ಟವರು) ಪುರುಷರಲ್ಲಿ ಶೇ. 82.14 ಆಗಿದ್ದರೆ ಮಹಿಳೆಯರಲ್ಲಿ ಶೇ. 65.46 ಆಗಿರುತ್ತದೆ. ಮುಂದಿನ ಹೆಜ್ಜೆ
“ಪಕ್ಷಿಗೆ ಹೇಗೆ ಒಂದೇ ರೆಕ್ಕೆಯಿಂದ ಹಾರುವುದು ಅಸಾಧ್ಯವೋ ಹಾಗೆ ಮಹಿಳೆಯರ ಸ್ಥಿತಿಗತಿಗಳು ಉತ್ತಮ ಗೊಳ್ಳದ ಹೊರತು ಜಗತ್ತಿನ ಕಲ್ಯಾಣದ ಬಗ್ಗೆ ಚಿಂತಿಸುವುದು ಅಸಾಧ್ಯ’ ಎಂದು ಸ್ವಾಮಿ ವಿವೇಕಾನಂದರು ಅಭಿಪ್ರಾಯಪಟ್ಟಿದ್ದರು.
ಅಸುರಕ್ಷಿತ ವಾತಾವರಣವು ಖಂಡಿತವಾಗಿಯೂ ಅವರ ಬೆಳವಣಿಗೆಗೆ ಮತ್ತು ಮುಖ್ಯವಾಗಿ ದೇಶದ ಬೆಳವಣಿಗೆಗೆ ಅವರು ನೀಡಬಹುದಾದ ಕೊಡುಗೆಗೆ ಬಹುದೊಡ್ಡ ಅಡ್ಡಿಯೇ ಹೌದು. ಲಿಂಗ ಸಮಾನತೆಯ ಸಮ ಸಮಾಜವನ್ನು ಸೃಷ್ಟಿಸುವ ವಿಚಾರದಲ್ಲಿ ಸರಕಾರಗಳ ಮೇಲೆ ಎಷ್ಟು ಜವಾಬ್ದಾರಿ ಇದೆಯೋ, ಅಷ್ಟೇ ಜವಾಬ್ದಾರಿ ಸಮಾಜದ ಮೇಲೆಯೂ ಇದೆ ಎನ್ನುವುದನ್ನು ಮನಗಾಣಬೇಕಾಗಿದೆ. ಒಂದು ಸಲ ಮಹಿಳೆ ಪ್ರಗತಿಪಥದಲ್ಲಿ ಚಲಿಸಲು ಆರಂಭಿಸಿದರೆ ಇಡೀ ಕುಟುಂಬ, ಹಳ್ಳಿ ಮತ್ತು ಸಂಪೂರ್ಣ ದೇಶ ಪ್ರಗತಿಯಾಗುತ್ತದೆ ಎಂಬುದನ್ನು ತ್ರಿಕರಣಪೂರ್ವಕವಾಗಿ ಒಪ್ಪಿಕೊಂಡು ಮಹಿಳಾ ಸಶಕ್ತೀಕರಣದ ಹೆಜ್ಜೆಗಳನ್ನು ಬಲಗೊಳಿಸಬೇಕಾಗಿದೆ. – ಡಾ| ಎ. ಜಯ ಕುಮಾರ ಶೆಟ್ಟಿ , ಉಜಿರೆ