Advertisement

ದಿ ಕೇರಳ ಸ್ಟೋರಿ: ನಾಳೆ ಸುಪ್ರೀಂಕೋರ್ಟ್‌ ವಿಚಾರಣೆ

08:51 PM May 10, 2023 | Team Udayavani |

ತಿರುವನಂತಪುರಂ: ವಿವಾದಿತ ಸಿನಿಮಾ “ದಿ ಕೇರಳ ಸ್ಟೋರಿ’ ಪ್ರದರ್ಶನವನ್ನು ಪಶ್ಚಿಮಬಂಗಾಳದಲ್ಲಿ ನಿಷೇಧಿಸಿರುವ ರಾಜ್ಯಸರ್ಕಾರದ ನಿರ್ಣಯ ಪ್ರಶ್ನಿಸಿ, ಸಿನಿಮಾದ ನಿರ್ಮಾಪಕರು ಸಲ್ಲಿಸಿರುವ ಅರ್ಜಿಯನ್ನು ಮೇ 12ರಂದು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್‌ ಸಮ್ಮತಿಸಿದೆ. ನಿಷೇಧದಿಂದಾಗಿ ತಂಡಕ್ಕೆ ಅಪಾರ ಹಣಕಾಸು ನಷ್ಟವಾಗುತ್ತಿರುವ ಹಿನ್ನೆಲೆ ಅರ್ಜಿಯನ್ನು ತುರ್ತು ವಿಚಾರಣೆಗೆ ಪರಿಗಣಿಸುವಂತೆ ಹಿರಿಯ ವಕೀಲ ಹರೀಶ್‌ ಸಾಳ್ವೆ ಮನವಿ ಮಾಡಿದ್ದರು.

Advertisement

ಈ ಹಿನ್ನೆಲೆ ಸುಪ್ರೀಂಕೋರ್ಟ್‌ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ನ್ಯಾಯಪೀಠ, ಶುಕ್ರವಾರ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸುವುದಾಗಿ ತಿಳಿಸಿದೆ. ಅರ್ಜಿಯಲ್ಲಿ ಬಂಗಾಳ ಸರ್ಕಾರದ ನಿಷೇಧ ಪ್ರಶ್ನಿಸಿರುವುದಲ್ಲದೇ, ತಮಿಳುನಾಡಿನಲ್ಲಿ ಸಿನಿಮಾ ಪ್ರದರ್ಶನಕ್ಕ ಎದುರಾಗಿರುವ ಅಡಚಣೆ ಬಗ್ಗೆಯೂ ಪ್ರಸ್ತಾಪಿಸಲಾಗಿದೆ.

ಸಿನಿಮಾ ಕೋಮುವಾದವಲ್ಲ:
ಕೇರಳದ ಕ್ಯಾಥೋಲಿಕ್‌ ಬಿಷಪ್ಸ್‌ ಕೌನ್ಸಿಲ್‌ ಸಿನಿಮಾಗೆ ಬೆಂಬಲ ವ್ಯಕ್ತಪಡಿಸಿದ್ದು, ಇದೊಂದು ಕಲೆ ಅಷ್ಟೇ ಎಂದಿದೆ. ಕೌನ್ಸಿಲ್‌ನ ವಕ್ತಾರರಾದ ಫಾದರ್‌ ಜಾಕೋಬ್‌ ಪಾಲಪಿಲ್ಲಿ ಮಾತನಾಡಿ” ಸಿನಿಮಾ, ಇಸ್ಲಾಮಿಕ್‌ ಸ್ಟೇಟ್‌ನಿಂದ ಆಗಿರುವ ದೌರ್ಜನ್ಯಗಳನ್ನು ಬಯಲಿಗೆಳೆದಿದೆ. ಇದನ್ನು ನೀವು ಕೋಮುವಾದ ಎಂದು ಬಿಂಬಿಸಲು ಸಾಧ್ಯವಿಲ್ಲ. ಐಸಿಸ್‌ಗೆ ಮಹಿಳೆಯರನ್ನು ನಿಯೋಜಿಸುತ್ತಿರುವುದು, ಮತಾಂತರಿಸುತ್ತಿರುವುದು, ಲವ್‌ ಜಿಹಾದ್‌ ಎಂಬುದು ನಿಜವಾದ ಸಂಗತಿ. ಸಿನಿಮಾದಲ್ಲಿ ಐಸಿಸ್‌ ದೌರ್ಜನ್ಯವಿದೆಯೇ ವಿನಾ, ಐಸಿಸ್‌ ಅನ್ನು ಇಸ್ಲಾಂ ಎನ್ನಲಾಗಿಲ್ಲ. ಇದನ್ನು ನಿಷೇಧಿಸುವುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ.

ಅನುರಾಗ್‌ ಕಶ್ಯಪ್‌ ಬೆಂಬಲ
ದಿ ಕೇರಳ ಸ್ಟೋರಿ ಸಿನಿಮಾ ತಂಡಕ್ಕೆ ಖ್ಯಾತ ನಿರ್ದೇಶಕ ಅನುರಾಗ್‌ ಕಶ್ಯಪ್‌ ಬೆಂಬಲ ಸೂಚಿಸಿದ್ದಾರೆ. ಖ್ಯಾತ ಫ್ರೆಂಚ್‌ ಬರಹಗಾರರಾದ ವೊಲ್ಟೆರ್‌ ಅವರ “ನೀವು ಮಂಡಿಸಲು ಬಯಸುವ ವಿಚಾರವನ್ನು ನಾನು ಒಪ್ಪದೇ ಇರಬಹುದು. ಆದರೆ, ವಿಚಾರ ಮಂಡಿಸುವ ನಿಮ್ಮ ಹಕ್ಕನ್ನು ಕೊನೆಯ ಉಸಿರಿರುವವರೆಗೂ ಒಪ್ಪುತ್ತೇನೆ’ ಎನ್ನುವ ನುಡಿಯನ್ನು ಕಶ್ಯಪ್‌ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ, ನೀವು ಒಪ್ಪಿ ಅಥವಾ ಬಿಡಿ, ಸಿನಿಮಾ ಪ್ರಚಾರಕ್ಕಾಗಿ ಮಾಡಿರಲಿ, ಬೇರೇನಕ್ಕಾದರೂ ಮಾಡಿರಲಿ, ಅದನ್ನು ನಿಷೇಧಿಸುವುದು ತಪ್ಪು ಎಂದಿದ್ದಾರೆ.

37 ದೇಶಗಳಲ್ಲಿ ಕೇರಳಸ್ಟೋರಿ ಬಿಡುಗಡೆ
ದೇಶದಲ್ಲಿ ಸಿನಿಮಾಗೆ ಅಡೆತಡೆಗಳು ಎದುರಾಗುತ್ತಿರುವ ನಡುವೆಯೇ, ವಿಶ್ವಾದ್ಯಂತ ಸಿನಿಮಾ ಬಿಡುಗಡೆಗೆ ಸಿನಿ ತಂಡ ಹೆಜ್ಜೆ ಇಟ್ಟಿದೆ. ಮೇ 12ರಂದು 37 ರಾಷ್ಟ್ರಗಳಲ್ಲಿ ಸಿನಿಮಾ ಪ್ರದರ್ಶನಗೊಳ್ಳಲಿದೆ ಎಂದು ನಟಿ ಅಧಾ ಶರ್ಮಾ ತಿಳಿಸಿದ್ದಾರೆ. ಈಗಾಗಲೇ 56 ಕೋಟಿ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಗಳಿಸಿರುವ ಕುರಿತು, ಪ್ರೇಕ್ಷಕರಿಗೆ ನಟಿ ಧನ್ಯವಾದ ಸಲ್ಲಿಸಿದ್ದಾರೆ. ಇದೇ ವೇಳೆ ವಾರಾಂತ್ಯದಲ್ಲಿ 37 ದೇಶಗಳಲ್ಲಿ ಸಿನಿಮಾ ತೆರೆಕಾಣುತ್ತಿರುವ ಸುದ್ದಿ ಹಂಚಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next