ಮುಂಬಯಿ: ಈ ವರ್ಷದ ದೊಡ್ಡ ಹಿಟ್ ಸಾಲಿನಲ್ಲಿ ಸೇರಿರುವ ʼದಿ ಕೇರಳ ಸ್ಟೋರಿʼ ಸಿನಿಮಾ ರಿಲೀಸ್ ಆಗಿ ತಿಂಗಳಿಗೂ ಅಧಿಕ ದಿನಗಳು ಕಳೆದಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಸಿನಿಮಾ ಓಟಿಟಿಯಲ್ಲಿ ರಿಲೀಸ್ ಆಗಬೇಕಿತ್ತು. ಆದರೆ ಇದುವರೆಗೆ ಸಿನಿಮಾ ಓಟಿಟಿಯಲ್ಲಿ ರಿಲೀಸ್ ಆಗಿಲ್ಲ.
ಸುದೀಪ್ತೋ ಸೇನ್ ನಿರ್ದೇಶನದ ʼದಿ ಕೇರಳ ಸ್ಟೋರಿʼ ಮೇ.5 ರಂದು ಎಲ್ಲೆಡೆ ರಿಲೀಸ್ ಆಗಿತ್ತು. ಬ್ಯಾನ್, ವಿವಾದದ ಬಿಸಿ ತಟ್ಟಿದ ಸಿನಿಮಾಕ್ಕೆ ಪಾಸಿಟಿವ್ – ನೆಗೆಟಿವ್ ವಿಮರ್ಶೆಗಳು ಕೇಳಿ ಬಂದಿತ್ತು. ಪಶ್ಚಿಮ ಬಂಗಾಳದಲ್ಲಿ ಆರಂಭದಲ್ಲಿ ಸಿನಿಮಾವನ್ನು ಬ್ಯಾನ್ ಮಾಡಲಾಗಿತ್ತು. ತಮಿಳುನಾಡಿನಲ್ಲಿ ಸಿನಿಮಾ ಪ್ರದರ್ಶನಕ್ಕೆ ತಡೆ ನೀಡಲಾಗಿತ್ತು. ಈ ಎಲ್ಲದರ ನಡುವೆ ಮಧ್ಯ ಪ್ರದೇಶ, ಉತ್ತರ ಪ್ರದೇಶದಲ್ಲಿ ಸಿನಿಮಾವನ್ನು ತೆರಿಗೆ ವಿನಾಯಿತಿ ಮಾಡಲಾಗಿತ್ತು. ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ 200 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು.
ಚಿತ್ರದಲ್ಲಿ ಕೇರಳದ ಹಿಂದೂ ಹುಡುಗಿಯ ಪಾತ್ರದಲ್ಲಿ ನಟಿ ಅದಾ ಶರ್ಮಾ ನಟಿಸಿದ್ದಾರೆ. ಕಥೆಗೆ ತಕ್ಕ ಹಾಗೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ಮುಸ್ಲಿಂ ಯುವತಿಯಾಗಿಯೂ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಅವರಿಗೆ ಸೇರಿದಂತೆ ಸಿನಿಮಾದ ಇತರ ಸದಸ್ಯರಿಗೆ ಬೆದರಿಕೆಗಳು ಬಂದಿತ್ತು.
ಸದ್ಯ ಈ ಎಲ್ಲಾ ವಿವಾದಗಳು ತಣ್ಣನೆ ಆಗಿದ್ದು, ಸಿನಿಮಾ ಓಟಿಟಿ ರಿಲೀಸ್ ಬಗ್ಗೆ ಚರ್ಚೆ ಆರಂಭವಾಗಿದೆ. ಆದರೆ ಇದುವರೆಗೂ ಯಾವ ಓಟಿಟಿದವರು ಕೂಡ ಸಿನಿಮಾ ಖರೀದಿಗೆ ಮುಂದೆ ಬಂದಿಲ್ಲ. ಈ ಬಗ್ಗೆ ಸ್ವತಃ ನಿರ್ದೇಶಕ ಸುದೀಪ್ತೋ ಸೇನ್ “ಬಾಲಿವುಡ್ ಹಂಗಾಮಾ” ಜೊತೆ ಮಾತನಾಡಿದ್ದಾರೆ.
“ʼದಿ ಕೇರಳ ಸ್ಟೋರಿʼಗೆ ಇದುವರೆಗೆ ಯಾವುದೇ ಓಟಿಟಿ ಪ್ಲಾಟ್‌ಫಾರ್ಮ್‌ನಿಂದ ಸೂಕ್ತ ಆಫರ್ ಗಳು ಬಂದಿಲ್ಲ. ನಾವು ಈಗಲೂ ಸಿನಿಮಾದ ಓಟಿಟಿ ಖರೀದಿಯ ಒಪ್ಪಂದಕ್ಕಾಗಿ ಕಾಯುತ್ತಿದ್ದೇವೆ. ಸಿನಿಮಾರಂಗದ ಎಲ್ಲರೂ ನಮ್ಮ ವಿರುದ್ದ ಗುಂಪುಗೂಡಿದೆ ಎಂದು ನನಗೆ ಅನ್ನಿಸುತ್ತದೆ” ಎಂದಿದ್ದಾರೆ.
“ನಮ್ಮ ಬಾಕ್ಸ್ ಆಫೀಸ್ ಯಶಸ್ಸು ಚಿತ್ರರಂಗದ ಹಲವು ವಿಭಾಗಗಳನ್ನು ಕೆರಳಿಸಿದೆ. ನಮ್ಮ ಯಶಸ್ಸಿಗೆ ನಮ್ಮನ್ನು ಶಿಕ್ಷಿಸಲು ಮನರಂಜನಾ ಉದ್ಯಮದ ಒಂದು ವಿಭಾಗವು ಒಗ್ಗೂಡಿದೆ ಎಂದು ನನಗೆ ಅನ್ನಿಸುತ್ತದೆ” ಎಂದಿದ್ದಾರೆ.