ತೆಂಗಿನ ಗರಿ ಅಥವಾ ಸೋಗೆಯಿಂದ ಚಪ್ಪರ ನಿರ್ಮಿಸಿ, ಚಪ್ಪರದ ಅಡಿಯಲ್ಲಿ ದೊಡ್ಡ ದೊಡ್ಡ ಗಾತ್ರದ ಬೆಲ್ಲದ ಕೊಪ್ಪರಿಗೆ ಸ್ಥಾಪಿಸಿ, ಕೊಪ್ಪರಿಗೆಯಲ್ಲಿ ಕುದಿಯುತ್ತಿರುವ ಬಿಸಿ ಬಿಸಿ ಬೆಲ್ಲ… ಇದು ಆಲೆಮನೆಗಳಲ್ಲಿ ಕಂಡುಬರುವ ದೃಶ್ಯ. ಅದರ ಇತ್ಯೋಪರಿಯನ್ನು ಲೇಖಕರಿಲ್ಲಿ ಹಂಚಿಕೊಂಡಿದ್ದಾರೆ
ಅದೊಂದು ಕಾಲವಿತ್ತು. ಡಿಸೆಂಬರ್-ಜನವರಿ ತಿಂಗಳು ಸಮೀಪಿಸಿದರೆ ಸಾಕು, ಗ್ರಾಮೀಣ ಭಾಗದಲ್ಲಿ ಜೋನಿ ಬೆಲ್ಲದ ಸುವಾಸನೆ ಬೀರುತ್ತಿದ್ದ “ಆಲೆಮನೆ’ಗಳು ಕಾಣಸಿಗುತ್ತಿದ್ದವು. ಕಬ್ಬಿನ ಗದ್ದೆಯ ಪಾರ್ಶ್ವದಲ್ಲಿ ತೆಂಗಿನ ಗರಿ ಅಥವಾ ಸೋಗೆಯಿಂದ ಚಪ್ಪರ ನಿರ್ಮಿಸಿ, ಚಪ್ಪರದ ಅಡಿಯಲ್ಲಿ ದೊಡ್ಡ ದೊಡ್ಡ ಗಾತ್ರದ ಬೆಲ್ಲದ ಕೊಪ್ಪರಿಗೆ ಸ್ಥಾಪಿಸಿ, ಕೊಪ್ಪರಿಗೆಯಲ್ಲಿ ಕುದಿಯುತ್ತಿರುವ ಬಿಸಿ ಬಿಸಿ ಬೆಲ್ಲ…
ಹೋಯ್ ಹೋಯ್ ಎಂದು ಕೋಣ ಇಲ್ಲವೇ ಎತ್ತುಗಳನ್ನು ಹೊಡೆಯುತ್ತಾ ಕಬ್ಬನ್ನು ಅರೆಯುವ ಮಂಕಿಕಾರರು, ಕಬ್ಬಿನ ರಾಶಿಯ ಹಿಂದೆ ಕಬ್ಬನ್ನು ಸವಿಯುತ್ತಾ ಕುಳಿತಿರುವ ಪುಟ್ಟ ಪುಟ್ಟ ಮಕ್ಕಳು… ಇಂತಹ ಹತ್ತು ಹಲವು ದೃಶ್ಯಗಳು ಪ್ರತಿಹಳ್ಳಿಯಲ್ಲೂ ಕಂಡುಬರುತ್ತಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಆಧುನಿಕತೆಯ ಭರಾಟೆಯಿಂದ ಗ್ರಾಮೀಣ ಭಾಗದ ಇಂತಹ ದೃಶ್ಯಗಳು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿವೆ.
ತಗುಲುವ ವೆಚ್ಚ: ಆಲೆಮನೆ ಕಟ್ಟಲು ತಗಲುವ ವೆಚ್ಚ ಕಡಿಮೆ. ಏಕೆಂದರೆ ಚಪ್ಪರವನ್ನು ಸೋಗೆ ಅಥವಾ ತೆಂಗಿನ ಗರಿಯಿಂದ ನಿರ್ಮಿಸುತ್ತಾರೆ. 2-3 ತಿಂಗಳುಗಳ ಕಾಲ ಈ ಆಲೆಮನೆ ನಡೆಯುತ್ತದೆ. ಕಬ್ಬನ್ನು ಅರೆಯುವವರಿಗೆ, ಕಬ್ಬನ್ನು ಕೊಯ್ಯುವವರಿಗೆ, ಆಲೆಮನೆಯಲ್ಲಿ ಸಿದ್ಧಪಡಿಸಿದ ಬೆಲ್ಲ ಮುಂತಾದ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸುವ ಸಮಯದಲ್ಲಿ ವಾಹನದ ಖರ್ಚು, ಇಂದಿನ ದಿನಗಳಲ್ಲಿ ಗ್ಯಾಸ್ ದೀಪ ಅಥವಾ ಚಿಮಣಿ ದೀಪಗಳು ಕಡಿಮೆಯಾಗಿರುವುದರಿಂದ ರಾತ್ರಿಯ ಸಮಯದಲ್ಲಿ ವಿದ್ಯುತ್ ಬೆಳಕು ಅನಿವಾರ್ಯ. ಹಾಗಾಗಿ ವಿದ್ಯುತ್ ಬಿಲ್ ಇವು ಆಲೆಮನೆಯ ಮುಖ್ಯ ಖರ್ಚಾಗಿವೆ. ಇವು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿದೆ.
ಇಲ್ಲಿನ ಖಾದ್ಯಗಳಿಗೆ ಬೇಡಿಕೆ: ಗ್ರಾಮೀಣ ಭಾಗದ ಜನರು ಕಬ್ಬಿನ ಹಾಲಿನಿಂದ ಬಗೆ ಬಗೆಯ ಖಾದ್ಯಗಳನ್ನು ಸಿದ್ಧಪಡಿಸಲು ಎತ್ತಿದ ಕೈ. ಹಳ್ಳಿಗಳಲ್ಲಿ ಆಲೆಮನೆ ಪ್ರಾರಂಭವಾದ ತಕ್ಷಣ ಮಹಿಳೆಯರು ಆಲೆಮನೆಗೆ ತೆರಳಿ ಪಾತ್ರೆಯಲ್ಲಿ ಹಾಲನ್ನು ತುಂಬಿಕೊಂಡು ಬರುವುದಲ್ಲದೇ ಹಾಲಿನಿಂದ ವಿವಿಧ ತಿನಿಸುಗಳನ್ನು ಸಿದ್ಧಪಡಿಸುತ್ತಾರೆ.
ಈ ಸಮಯದಲ್ಲಿ ಗ್ರಾಮೀಣ ಭಾಗದ ಬಹುತೇಕರ ಮನೆಗಳಲ್ಲಿ ಆಲೆಮನೆ ಪ್ರಾರಂಭವಾದಾಗಿನಿಂದ ಮುಕ್ತಾಯದ ತನಕವೂ ಪ್ರತಿನಿತ್ಯ ಬೆಳಗ್ಗೆ ಉಪಹಾರಕ್ಕೆ ಕಬ್ಬಿನ ಹಾಲಿನ ದೋಸೆ, ಇಡ್ಲಿ, ತೊಡದೇವು ಇಂತಹ ತಿಂಡಿಗಳೇ ಆಗಿರುತ್ತದೆ. ಕಬ್ಬಿನ ಹಾಲಿನ ಖಾದ್ಯಗಳಿಗೆ ಪಟ್ಟಣಗಳಲ್ಲೂ ಉತ್ತಮ ಬೇಡಿಕೆ ಇದ್ದು ಸೂಕ್ತ ಮಾರುಕಟ್ಟೆ ದೊರೆಯಬೇಕಿದೆ. ಅಲ್ಲದೆ ಜೋನಿ ಬೆಲ್ಲದಲ್ಲಿ ಬಾಳೆಯ ದಿಂಡನ್ನು ಶೇಖರಿಸಿಡುವ ಪದ್ಧತಿ ಕೂಡ ಇದೆ.
ಇಲ್ಲಿ ಮುಖ್ಯವಾಗಿ ಬೆಲ್ಲದ ಅಚ್ಚು, ಜೋನಿ ಬೆಲ್ಲ ಸಿದ್ಧಪಡಿಸುತ್ತಾರೆ. ಇವುಗಳನ್ನು ಕೆಲವು ವ್ಯಾಪಾರಸ್ಥರು ನೇರವಾಗಿ ಆಲೆಮನೆ ಸ್ಥಳಕ್ಕೆ ಬಂದು ಖರೀದಿಸಿದರೆ, ಕೆಲವು ವ್ಯಾಪಾರಿಗಳಿಗೆ ಆಲೆಮನೆಯ ಮಾಲೀಕರು ತಲುಪಿಸುತ್ತಾರೆ. ಇವುಗಳಿಗೆ ವರ್ಷದಿಂದ ವರ್ಷಕ್ಕೆ ಬೇಡಿಕೆ ಏರುಗತಿಯಲ್ಲಿದೆ. ಅಲ್ಲದೆ ಕೆಲವು ಕಾರ್ಖಾನೆಗಳಲ್ಲಿ ಬೆಲ್ಲಕ್ಕೆ ಸಕ್ಕರೆ ಬೆರೆಸುವುದರಿಂದ 25 ಕೆ.ಜಿ. ತೂಕದ ಒಂದು ಕ್ಯಾನ್ ಆಲೆಮನೆ ಬೆಲ್ಲಕ್ಕೆ ರೂ.900 ರಿಂದ 2000 ರೂ. ತನಕವೂ ದರವಿದೆ.
* ಎಂ. ಎಸ್. ಶೋಭಿತ್