Advertisement

ಸೈನಿಕರಿಗೆ ಸಲಾಂ; ಕಾರ್ಗಿಲ್‌ ವಿಜಯದ ಉತ್ಸಾಹ ಸೇನೆ ಸೇರಲು ಪ್ರೋತ್ಸಾಹ

12:30 AM Feb 22, 2019 | Team Udayavani |

ಕುಂದಾಪುರ ನಾವಿನ್ನೂ ಹತ್ತನೇ ತರಗತಿಯಲ್ಲಿದ್ದೆವು. ಕಾರ್ಗಿಲ್‌ ಯುದ್ಧದ ಕುರಿತು ಪ್ರತಿದಿನ ಪತ್ರಿಕೆ, ರೇಡಿಯೋ, ಟಿವಿಗಳಲ್ಲಿ ಬರುತ್ತಿತ್ತು. ಸುಮಾರು 60 ದಿನಗಳ ಕಾಲ ಯುದ್ಧದಲ್ಲಿ  527 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು. ಇದನ್ನೆಲ್ಲ ಕೇಳುತ್ತಿದ್ದಾಗ ಮೈಮನಗಳಲ್ಲಿ ಶತ್ರುಗಳ ವಿರುದ್ಧ ಕಿಚ್ಚೇಳುತ್ತಿತ್ತು. ನಮ್ಮ ಸೈನಿಕರನ್ನು ದಾಳಿ ಮಾಡಿ ಕೊಂದ ಪಾಕಿಸ್ಥಾನವನ್ನು ಬಗ್ಗುಬಡಿಯಲು ಆಗಲೇ ಹೊರಡುವಂತಹ ರಣೋ ತ್ಸಾಹ ಉಂಟಾಗುತ್ತಿತ್ತು. ಆಪರೇಶನ್‌ ವಿಜಯ್‌ ಮೂಲಕ ಎಲ್ಲ ಪಾಕಿಸ್ಥಾನೀಯರನ್ನು ಹಿಮ್ಮೆಟ್ಟಿಸಿ ತ್ರಿವರ್ಣ ಧ್ವಜವನ್ನುಹಾರಿಸಿದಂದೇ ನಾನು ಸೇನೆ ಸೇರುವ ಸಂಕಲ್ಪ ಮಾಡಿದೆ.

Advertisement

ಮನೆಯವರು, ಕುಟುಂಬಿಕರು ಯಾರೂ ಸೇನೆಯಲ್ಲಿ ಇಲ್ಲ ದಿದ್ದರೂ ಎಲ್ಲ ಪ್ರಯತ್ನಗಳನ್ನೂ ಮಾಡಿ ಸಫ‌ಲನಾದೆ…ಉಳ್ಳೂರು -74ರ ಎನ್‌. ದಿನಕರ ಶೆಟ್ಟಿ ಹೇಳುವುದು ಹೀಗೆ. ಇವರು ಭಾರತೀಯ ಭೂಸೇನೆಯಲ್ಲಿ ನಾೖಕ್‌/ಎಐಜಿ (ಏರ್‌ ಇಂಟಲಿಜೆನ್ಸ್‌ ಗ್ರೂಪ್‌) ದರ್ಜೆಯಲ್ಲಿದ್ದಾರೆ. ಪ್ರಸ್ತುತ ಕಾಶ್ಮೀರದ ಶ್ರೀನಗರದಲ್ಲಿ ಕರ್ತವ್ಯ. 2003ರಲ್ಲಿ ಸೇನೆಗೆ ಸೇರಿ ದಿಲ್ಲಿಯ ಗುರ್ಗಾಂವ್‌, ಸೂರತ್‌ಗಢ, ಜಾಮ್‌ನಗರ, ಚೆನ್ನೈ, ಬೀದರ್‌, ಒಡಿಶಾ, ಲಕ್ನೋಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಗೋಪಾಲ್‌ಪುರದ ಆರ್ಮಿ ಏರ್‌ ಡಿಫೆನ್ಸ್‌ ಕಾಲೇಜಿನಲ್ಲಿ 6 ವರ್ಷಗಳ ಕಾಲ ಸೇನಾ ತರಬೇತಿಯನ್ನೂ ನೀಡಿದ್ದಾರೆ. 


ಸೇನೆಗೆ ಆಯ್ಕೆ
ಉಳ್ಳೂರು -74ರ ಸಂಕಯ್ಯ ಶೆಟ್ಟಿ-ಸುಮತಿ ಶೆಟ್ಟಿ ದಂಪತಿಯ 6 ಮಕ್ಕಳಲ್ಲಿ ದಿನಕರ್‌ ಒಬ್ಬರು. ಅವರು ಎರಡು ವರ್ಷದ ಬಾಲಕನಾಗಿದ್ದಾಗ ತಂದೆಯನ್ನು ಕಳೆದುಕೊಂಡರು. ಹಿರಿಯ ಸಹೋದರ ರಾಜೀವ ಶೆಟ್ಟಿ ಅವರೇ ಮನೆಯ ಯಜಮಾನನಾಗಿ ವಿದ್ಯೆ ಕೊಡಿಸಿದರು. ಅವರಿಗೂ ಸಹೋದರರ ಪೈಕಿ ಒಬ್ಬರಾದರೂ ಸರಕಾರಿ ನೌಕರಿ ಪಡೆಯಬೇಕೆಂದಿತ್ತು. ಕಾರ್ಗಿಲ್‌ ಕದನ ನಡೆದದ್ದು ದಿನಕರ ಶೆಟ್ಟಿಯವರು ಹತ್ತನೇ ತರಗತಿಯಲ್ಲಿದ್ದಾಗ. ಅನಂತರ ಸೇನಾ ನೇಮಕಾತಿ ರ್ಯಾಲಿ ಎಲ್ಲಿ ನಡೆಯುತ್ತದೆ ಎಂದು ಹುಡುಕುವುದೇ ಕಾಯಕ. 

ಉಳ್ಳೂರು-74ರಲ್ಲಿ ಪ್ರಾಥಮಿಕ, ಸಿದ್ದಾಪುರದಲ್ಲಿ ಪ್ರೌಢ ಶಿಕ್ಷಣ ಮುಗಿಸಿ ಶಂಕರನಾರಾಯಣದಲ್ಲಿ ಕಾಲೇಜು ಮೆಟ್ಟಿಲು ಹತ್ತಿದರು. ಮಿಲಿಟರಿ ಆಸೆ ಬೆಳೆಯುತ್ತಿದ್ದಂತೆಯೇ ಬಿಕಾಂ ಪದವಿ ಶಿಕ್ಷಣಕ್ಕೆ ಸೇರಿ ಎರಡೇ ತಿಂಗಳಲ್ಲಿ ಕಾರವಾರದಲ್ಲಿ ನಡೆದ
ಸೇನಾ ಆಯ್ಕೆ ಶಿಬಿರದಲ್ಲಿ ಆಯ್ಕೆಯಾದರು. 

ಮಂಗಳೂರಿನಲ್ಲಿ ಲಿಖೀತ ಪರೀಕ್ಷೆ ಬರೆದು ಮಹಾರಾಷ್ಟ್ರದ ನಾಸಿಕ್‌ನಲ್ಲಿ ತರಬೇತಿ ಪಡೆದರು. ಸೇನೆಗೆ ಸೇರಿದ ಬಳಿಕ ಮೈಸೂರು ಮುಕ್ತ ವಿವಿಯಲ್ಲಿ ಬಿಎ ಪದವಿ ಮಾಡಿದರು. ಸೇನೆ ಸಂಬಂಧಿ ವಿಶೇಷ ಪರೀಕ್ಷೆಗಳಲ್ಲೂ ತೇರ್ಗಡೆಯಾದರು. 


ನೆನಪು ಮಧುರ
ತರಬೇತಿಯಲ್ಲಿದ್ದಾಗ, ಸೇನೆಗೆ ಸೇರಿದ ಬಳಿಕವೂ ಮನೆ ನೆನಪು ಕಾಡಿದ್ದು ಸುಳ್ಳಲ್ಲ. ಮೊಬೈಲ್‌ ಇಲ್ಲದ ದಿನಗಳಲ್ಲಿ ಮನೆಯವರ ಜತೆ ಮಾತನಾಡಲು ಹಾತೊರೆದದ್ದು ಮರೆಯಲಾಗದು. ಆದರೆ ಕರ್ತವ್ಯನಿರತನಾಗಿರುವಾಗ ದೇಶದ ರಕ್ಷಣೆ ಮಾತ್ರವೇ ಮನಸ್ಸಿನಲ್ಲಿ ರುತ್ತದೆ. ಮನೆಗೆ ಬಂದಾಗ ಸೇನಾ ಕಾರ್ಯಾಚರಣೆ ಕುರಿತು ಹೇಳಿದರೆ ಭಯಪಡುತ್ತಾರೆ ಎಂಬ ಕಾರಣದಿಂದ ಹೇಳಿದ್ದಕ್ಕಿಂತ ಹೇಳದಿರುವುದೇ ಹೆಚ್ಚು.

ಕಾರ್ಯಾಚರಣೆ
ಕಾಶ್ಮೀರದ ಬಾರಾಮುಲ್ಲಾದಲ್ಲಿ ಒಮ್ಮೆ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆದಾಗ ಜತೆಗಿದ್ದ ಯೋಧರು ಗಾಯಗೊಂಡರು. ದಿನಕರ ಶೆಟ್ಟರು ಅವರನ್ನು ಮಿಲಿಟರಿ ಆಸ್ಪತ್ರೆಗೆ ಸಾಗಿಸಿ ಯುದ್ಧರಂಗಕ್ಕೆ ಮರಳಿದರು. ತನ್ನ ಪಾಳಯದಲ್ಲಿ ಹಾನಿ ಉಂಟು ಮಾಡಿದ ಮೂವರು ಉಗ್ರರನ್ನು ವಧಿಸುವ ಮೂಲಕ ಮುಯ್ಯಿ ತೀರಿಸಿಕೊಂಡರು. ಗೌಪ್ಯತೆಯನ್ನು ಕಾಪಾಡಿಕೊಳ್ಳುವ ಸೇನಾ ನಿಯಮಗಳಿಗೆ ಗೌರವ ಸೂಚಿಸಿ ಹೇಳಲಾಗದ ಇಂಥ ಇನ್ನೆಷ್ಟೋ ಸ್ಮತಿಗಳು ಶೆಟ್ಟರಲ್ಲಿವೆ. ಮಡದಿ ಅಶ್ವಿ‌ನಿ ಶೆಟ್ಟಿ, 6 ತಿಂಗಳ ಪುತ್ರ ಅದ್ವಿಕ್‌. “ಸೌದಿಯಲ್ಲಿ ಇರುವ ರಾಘವೇಂದ್ರ ನನ್ನ ಜೀವದ ಗೆಳೆಯ. ನಾನು ಊರಿಗೆ ಬಂದಾಗೆಲ್ಲ ಸೌದಿಯಿಂದ ನನ್ನನ್ನು ನೋಡಲು, ಮಾತನಾಡಲು ರಜೆ ಹಾಕಿ ಬರುವ ಭಾವಜೀವಿ’ ಎನ್ನುತ್ತಾರೆ ದಿನಕರ ಶೆಟ್ಟರು.


ಡೇಂಜರ್‌ ಶೆಟ್ಟಿ
ಕಾಶ್ಮೀರದಂತಹ ಹಿಮ ಪ್ರದೇಶದಲ್ಲಿ ದಿನಕರ್‌ ಅವರು ನೂರಾರು ಕಾರ್ಯಾಚರಣೆಗಳಲ್ಲಿ  ಪಾಲ್ಗೊಂಡಿದ್ದಾರೆ. ಯೋಧರಿಗೆ  ಕಲ್ಲು ಹೊಡೆಯುವ ಜನರಿರುವ ಅಲ್ಲಿ ದಿನಕರ್‌ ಶೆಟ್ಟರಿಗೆ ಸ‌§ಳೀಯರು “ಡೇಂಜರ್‌ ಶೆಟ್ಟಿ’ ಎಂದೇ ಕರೆಯುವಷ್ಟು ಇವರು ನಿಷ್ಠುರವಾದಿ, ಖಡಕ್‌. ಕರಾಟೆಯಲ್ಲಿ ಹಳದಿ ಬೆಲ್ಟ್ ಪಡೆದ ಶೆಟ್ಟರು ಎನ್‌ಎಸ್‌ಜಿ ಕಮಾಂಡೋ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಝೆಡ್‌ ಭದ್ರತೆ ಒದಗಿಸುವ ತಂಡದ ಸದಸ್ಯರಾಗಿ ಬೇರೆ ಬೇರೆ ಕಡೆ ಕರ್ತವ್ಯ ನಿರ್ವಹಿಸಿದ್ದಾರೆ. 

Advertisement

ದಿನಕರ ಶೆಟ್ಟರು ಸೇನೆಗೆ ಸೇರುವಾಗ ಕೆಲವು ಕಾಗದ ಪತ್ರಗಳಿಗೆ  ಸಾಕ್ಷಿ ಹಾಕಿದ್ದೆ. ನಮ್ಮ ಊರಿನ ಯೋಧ ನಮ್ಮ ಹೆಮ್ಮೆ. ದೇಶಕ್ಕೆ ಹೆಸರು ತರುವ  ಕಾರ್ಯ ಅವರು ಮಾಡುತ್ತಿದ್ದಾರೆ.  
– ಚಿಟ್ಟೆ ರಾಜಗೋಪಾಲ ಹೆಗ್ಡೆ, ಉಳ್ಳೂರು-74 

ಊರ ಜನರ ಪ್ರೀತಿ ಅನನ್ಯ. ತಂದೆಯ ಸ್ಥಾನದಲ್ಲಿ ನಿಂತು ನಮ್ಮನ್ನು ಮುನ್ನಡೆಸಿದ ಹಿರಿಯಣ್ಣ ರಾಜೀವ ಶೆಟ್ಟರು ನಮಗೆ ಆದರ್ಶ. ಸೈನಿಕನಾದ ಕುರಿತು ಸದಾ ಹೆಮ್ಮೆಯಿದೆ. 
– ಎನ್‌. ದಿನಕರ ಶೆಟ್ಟಿ, ಯೋಧ

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next