ಕಟಪಾಡಿ: ಆತ್ಮ ರಕ್ಷಣೆ, ಏಕಾಗ್ರತೆಯ ಕರಾಟೆ ಕಲೆ ಕರಗತವಾದಲ್ಲಿ ಶಿಸ್ತುಬದ್ಧ ಜೀವನಕ್ಕೆ ನಾಂದಿ. ಮಕ್ಕಳನ್ನು ಮೊಬೈಲಿನಿಂದ ದೂರವಿರಿಸಲು ಸಹಕಾರಿಯಾಗುವ ಇಂತಹ ತರಬೇತಿ ಶಿಬಿರಗಳಲ್ಲಿ ಮಕ್ಕಳನ್ನು ಹೆಚ್ಚು ತೊಡಗಿಸಿಕೊಂಡಲ್ಲಿ ಮೆದುಳಿನ ಚಿಂತನಾ ಶಕ್ತಿ ಗುಂದಿಸುವ ಮೊಬೈಲ್ ಬಳಕೆಯಿಂದ ದೂರವಿರಿಸಲೂ ಸಹಕಾರಿ ಎಂದು ಕೋಟೆ ಗ್ರಾ.ಪಂ. ಉಪಾಧ್ಯಕ್ಷ ಗಣೇಶ್ ಕುಮಾರ್ ಮಟ್ಟು ಹೇಳಿದರು.
ಅವರು ಮಂಗಳವಾರ ಮಟ್ಟು ಬೀಚ್‌ನಲ್ಲಿ ಕೊಬುಡೋ ಬುಡೋ ಕಾನ್ ಕರಾಟೆ ಅಸೋಸಿಯೇಶನ್ ಕರ್ನಾಟಕ ಇದರ ವತಿಯಿಂದ ಆಯೋಜಿಸಲಾಗಿದ್ದ 3ನೇ ವರ್ಷದ ಕರಾಟೆ ಬೀಚ್ ಟ್ರೈನಿಂಗ್‌ನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣಕ್ಕೆ ಪೂರಕವಾಗಬಲ್ಲ ಕರಾಟೆ ತರಬೇತಿಯಿಂದ ಸಾಧಕರಾಗುವ ಮೂಲಕ ಭದ್ರ ಭವಿಷ್ಯ ರೂಪಿಸಲು ಸಹಕಾರಿ. ಅಂತಹ ಕರಾಟೆಯ ಬಗ್ಗೆ ವಿಶಿಷ್ಟವಾದ ಸಮುದ್ರದ ಪರಿಸರದಲ್ಲಿ ಕರಾಟೆ ವಿವಿಧ ಮಜಲುಗಳನ್ನು ತರ ಬೇತಿಯ ಮೂಲಕ ಕಲಿಸುವ ಅಪರೂಪದ ವಿಶೇಷ ಶಿಬಿರ ಇದಾಗಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಕೊಬುಡೋ ಬುಡೋಕಾನ್ ಕರಾಟೆ ಮುಖ್ಯ ಶಿಕ್ಷಕ ರವಿ ಕುಮಾರ್ ಸಮ್ಮಾನ ಸ್ವೀಕರಿಸಿ ಮಾತನಾಡಿ, ರಾಜ್ಯದಾದ್ಯಂತ 100 ಶಾಖೆಗಳನ್ನು ಹೊಂದಿದೆ. ನಿಮ್ಮ ಕರಾಟೆ ಕಲೆ ನಿಂತ ನೀರಾಗದೆ ಹರಿಯುವ ನೀರಾಗಿರಬೇಕೆಂಬ ಸದುದ್ದೇಶದಿಂದ ವಿಶೇಷವಾಗಿ ಕರಾಟೆ ಕಲಿಕೆಗೆ ಒತ್ತು ನೀಡಲಾಗುತ್ತಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಸಾಧಕರಾಗಿ ಮೂಡಿ ಬರಲು ವಿಫುಲ ಅವಕಾಶ ಇದೆ ಎಂದರು.
ಈ ಸಂದರ್ಭ ಪೆರ್ಣಂಕಿಲ ಗ್ರಾಮಾಭಿವೃದ್ಧಿ ಯೋಜನೆಯ ವಲಯಾಧ್ಯಕ್ಷ ರಾಘವೇಂದ್ರ ನಾಯಕ್, ಮಟ್ಟು ಶ್ರೀ ಸತ್ಯಾನಂದ ಭಜನ ಮಂದಿರದ ಶಂಕರ ಕೋಟ್ಯಾನ್, ಆಯೋಜಕ, ಮಟ್ಟು ಡೋಜೋ ಶಿಕ್ಷಕ ಸೋಮನಾಥ ಮಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕರಾಟೆ ಶಿಕ್ಷಕಿ ವಿಜಯಲಕ್ಷ್ಮೀ ಸ್ವಾಗತಿಸಿ, ಸೌಂದರ್ಯಾ ವಂದಿಸಿ, ಯಶೋದಾ ಶೆಟ್ಟಿ ಹಿರಿಯಡ್ಕ ನಿರೂಪಿಸಿದರು.
ಪಾಲ್ಗೊಂಡಿದ್ದ ಸುಮಾರು 75 ರಷ್ಟು ಕರಾಟೆ ಪಟುಗಳಿಗೆ ಮಟ್ಟು ಬೀಚ್‌ನಲ್ಲಿ ಕರಾಟೆ ಬೀಚ್ ಟ್ರೈನಿಂಗ್ ನೀಡಲಾಯಿತು.