ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರದ ಬೆಳ್ಳಿಹಬ್ಬ ಕಾರ್ಯಕ್ರಮ ಆಗಸ್ಟ್ 29ರಂದು ನಡೆಯಲಿದೆ ಎಂದು ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಹೇಳಿದ್ದಾರೆ. ಕನ್ನಡ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 11 ಗಂಟೆಗೆ ನಯನ ಸಭಾಂಗಣದಲ್ಲಿ ಆಯೋಜಿಸಿರುವ ಸಮಾರಂಭವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಡಾ.ಜಯಮಾಲಾ ಉದ್ಘಾಟಿಸುವರು.
ಮುಖ್ಯಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್ ಸೇರಿ ಹಲವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಬೆಳ್ಳಿ ಹಬ್ಬವನ್ನು ಅವಿಸ್ಮರಣೀಯಗೊಳಿಸುವ ಸಂಬಂಧ ಅಂಧರಿಗಾಗಿ “ಪಂಪ ಭಾರತದ ಆಯ್ದ ಪ್ರಸಂಗಗಳನ್ನು’ ದ್ವನಿ ಹೊತ್ತಿಗೆ ರೂಪದಲ್ಲಿ ಹೊರತರಲಾಗಿದೆ.
ಪ್ರಾಧಿಕಾರದ ಹಿಂದಿನ ಅಧ್ಯಕ್ಷರ ಸಾಧನೆ ಕುರಿತು ಸಾಕ್ಷ್ಯಚಿತ್ರ ನಿರ್ಮಿಸಲಾಗಿದೆ. ಗುಲ್ವಾಡಿ ವೆಂಕಟರಾಯರ “ಇಂದಿರಾಬಾಯಿ’, ಕಾದಂಬರಿಯನ್ನು ಇ-ಪುಸ್ತಕಕ್ಕೆ ಅಳವಡಿಸಿದ್ದು, ಇದರ ಬಿಡುಗಡೆ ಜತೆಗೆ 300 ಪೋಸ್ಟಲ್ ಸ್ಟಾಂಪ್ ಕವರ್ ಮತ್ತು 2 ಸಾವಿರ ಪೋಸ್ಟಲ್ ಕವರ್‌ಗಳ ಲೋಕಾರ್ಪಣೆ ಕಾರ್ಯ ಕೂಡ ನಡೆಯಲಿದೆ ಎಂದರು.
ಇದೇ ವೇಳೆ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಡಾ.ಸಿದ್ದಲಿಂಗಯ್ಯ, ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಸೇರಿದಂತೆ ಹಲವು ಲೇಖಕರ 30 ಪುಸ್ತಕಗಳ ಬಿಡಗಡೆ, 50 ಯುವ ಬರಹಗಾರ ಚೊಚ್ಚಲ ಕೃತಿಗಳಿಗೆ ಪ್ರೋತ್ಸಾಹ ಧನ ವಿತರಣೆ ಸಹ ನಡೆಯಲಿದೆ ಎಂದರು.
ಪ್ರೋತ್ಸಾಹ ಧನದ ಮೊತ್ತ ಏರಿಕೆ: ಈ ಹಿಂದೆ ಯುವ ಬರಹಗಾರರ ಚೊಚ್ಚಲ ಕೃತಿಗೆ 10 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುತ್ತಿತ್ತು. ಇದೀಗ ಆ ಮೊತ್ತವನ್ನು 15 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ಬೆಳ್ಳಿ ಹಬ್ಬದ ಅಂಗವಾಗಿ ಪ್ರಾಧಿಕಾರ, ಮನೆ ಮನೆಗೂ ಪುಸ್ತಕ ಕಾರ್ಯಕ್ರಮ ರೂಪಿಸಿದೆ.
ಓದುಗರಲ್ಲಿ ಸಾಹಿತ್ಯದ ಅಭಿರುಚಿ ವೃದ್ಧಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದ್ದು, ಆರಂಭಿಕ ಹಂತದಲ್ಲಿ ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಆ ನಂತರ ರಾಜ್ಯದ 25 ಕಡೆಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ವಸುಂಧರಾ ಭೂಪತಿ ಮಾಹಿತಿ ನೀಡಿದರು.