Advertisement

ಮೈದುಂಬಿಕೊಳ್ಳುತ್ತಿರುವ ಕಬಿನಿ ಜಲಾಶಯ

11:41 AM Jul 22, 2017 | |

ಎಚ್‌.ಡಿ.ಕೋಟೆ: ಕಳೆದ ವಾರದಿಂದ ತಾಲೂಕಿನ ಕಬಿನಿ ಹಿನ್ನೀರು ವ್ಯಾಪ್ತಿಯಲ್ಲಿ ಹಾಗೂ ಕೇರಳದ ವೈನಾಡು ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಈ ಭಾಗದ ರೈತರ ಜೀವನಾಡಿಯಾಗಿರುವ ಕಬಿನಿ ಜಲಾಶಯಕ್ಕೆ ಹೆಚ್ಚಿನ ಒಳ ಹರಿವು ಬರುತ್ತಿದ್ದು, ಸಾವಿರಾರು ರೈತರಲ್ಲಿ ಮನೆ ಮಾಡಿದ್ದ ಆತಂಕ ದೂರವಾಗಿ, ರೈತರ ಮೊಗದಲ್ಲಿ ಸಂತಸ ಮೂಡಿದೆ.

Advertisement

ವಾಡಿಕೆಯಂತೆ ಜುಲೈ ತಿಂಗಳ ಮೊದಲ ಅಥವಾ ಕೊನೆಯ ವಾರದಲ್ಲಿ ಜಲಾಶಯ ಭರ್ತಿಯಾಗಿ ಸರ್ಕಾರದ ಬಾಗಿನಕ್ಕೆ ಭಾಜನವಾಗುತ್ತಿತ್ತು. ಆದರೆ ಜುಲೈ ತಿಂಗಳು ಪ್ರಾರಂಭವಾಗಿ ಹದಿನೈದು ದಿನಗಳು ಕಳೆದರೂ ಮುಂಗಾರು ನಿರೀಕ್ಷೆಯಂತೆ ಬರದ ಕಾರಣ ಜಲಾಶಯ ತುಂಬದ ಹಿನ್ನೆಲೆ ಜಲಾಶಯದ ನೀರನ್ನೆ ನಂಬಿ ವ್ಯವಸಾಯ ಮಾಡುತ್ತಿದ್ದ ತಾಲೂಕಿನ ಸಾವಿರಾರು ರೈತರ ಕುಟುಂಬಗಳಲ್ಲಿ ಆತಂಕ ಮನೆ ಮಾಡಿತ್ತು.

ಒಳ ಹರಿವು ಹೆಚ್ಚಳ: ಕೊನೆಗೂ ವರುಣನ ಕೃಪೆಯಿಂದಾಗಿ ಕಳೆದ ಒಂದು ವಾರದಿಂದ ಹಂತ ಹಂತವಾಗಿ ತಾಲೂಕು ವ್ಯಾಪ್ತಿ ಹಾಗೂ ಕಬಿನಿ ಜಲಾಶಯದ ಹಿನ್ನೀರು ಪ್ರದೇಶ ಸೇರಿದಂತೆ ಕೇರಳದ ವೈನಾಡಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ನಿತ್ಯವು ಹದಿನೈದು ಸಾವಿರ ಕ್ಯೂಸೆಕ್‌ಗೂ ಹೆಚ್ಚು ಒಳ ಹರಿವು ಬರುತ್ತಿದ್ದು, ಕಳೆದೊಂದು ವಾರದ ಹಿಂದೆ 62 ಅಡಿಗಳಷ್ಟಿದ್ದ ಜಲಾಶಯದ ನೀರಿನ ಮಟ್ಟ ಶುಕ್ರವಾರದ  ಸಂಜೆಗೆ 72 ಅಡಿಗಳಿಗೆ ಏರಿಕೆ ಕಂಡಿದೆ.

ನಾಲೆಗಳಿಗೆ ನೀರು ಬಿಡಿ: ವಾರದಿಂದ ಒಳ ಹರಿವು ಕುಂಠಿತಗೊಂಡು ಜಲಾಶಯಕ್ಕೆ ನೀರು ಹರಿದು ಬರದೆ ಕೇವಲ 62 ಅಡಿಗಳಿಗೆ ಸೀಮಿತವಾಗಿದ್ದ ನೀರನ್ನು ಯಾವುದೇ ಕಾರಣಕ್ಕೂ ನಾಲೆಗಳಿಗೆ ಬಿಡಲು ಆಗದಂತಹ ಪರಿಸ್ಥಿತಿ ನಿರ್ಮಾಣಗೊಂಡಿದ್ದರಿಂದ ರೈತರಲ್ಲಿ ಆತಂಕ ಮನೆ ಮಾಡಿತ್ತು. ಆದರೆ ಈಗ ಜಲಾಶಯಕ್ಕೆ ಹೆಚ್ಚಿನ ಳ ಹರಿವು ಬಂದಿದ್ದು, ಈ ಬಾರಿ ಅಚ್ಚುಕಟ್ಟು ಪ್ರದೇಶದ ಬೆಳೆಗಳಿಗೆ ನೀರು ಹರಿಸುವುದು ಖಚಿತವಾಗಿದೆ. ರೈತರು ಕೂಡ ಈ ಬಾರಿ ಜಲಾಶಯದ ನಾಲೆಯ ನೀರನ್ನು ಬಳಸಿಕೊಂಡು ಉತ್ತಮ ಬೆಳೆ ಬೆಳೆಯುವ ಉತ್ಸಾಹದಲ್ಲಿದ್ದಾರೆ.

ಅಭಿವೃದ್ಧಿ ಹೆಸರಲ್ಲಿ ಜಲಾಶಯ ಬರಿದು ಮಾಡಿದ್ದರು, ಕಳೆದ ಎರಡು ವರ್ಷಗಳಿಂದ ಜಲಾಶಯದಲ್ಲಿ ಅಲ್ಪ ಸ್ವಲ್ಪ ನೀರಿದ್ದರೂ ಬೆಳೆಗಳಿಗೆ ನೀರು ಹರಿಸದೆ ನಾಲೆಗಳ ದುರಸ್ತಿ ಕಾರ್ಯ ನೆಪದಲ್ಲಿ ನೆರೆ ರಾಜ್ಯ ತಮಿಳುನಾಡಿಗೆ ನೀರು ಬಿಟ್ಟ ಹಿನ್ನೆಲೆ ಜಲಾಶಯ ಇತಿಹಾಸದಲ್ಲಿ ಕೇವಲ 42 ಅಡಿಗಳಿಗೆ ಕುಸಿತ ಕಂಡು ಬಾಗಿನ ಭಾಗ್ಯದಿಂದಲೂ ವಂಚಿತವಾಗಿತ್ತು,

Advertisement

ಆಗಸ್ಟ್‌ ಮೊದಲ ವಾರದಲ್ಲಿ ಜಲಾಶಯ ಭರ್ತಿ ಸಾಧ್ಯತೆ: ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಜಲಾಶಯವು ಜೂನ್‌ ಮತ್ತು ಜು.15ರ ಒಳಗೆ ಉತ್ತಮ ಮಳೆಯಾಗಿ ಭರ್ತಿಯಾಗುತ್ತದೆ ಎಂದು ಧೃಡ ನಿರ್ಧಾರ ಕೈಗೊಂಡಿದ್ದರು, ಮುಂಗಾರು ಯಾರು ಊಹಿಸದಂತಹ ಮಟ್ಟದಲ್ಲಿ ತಾಲೂಕು ಮತ್ತು ಕೇರಳ ಪ್ರದೇಶದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಎಲ್ಲರಲ್ಲೂ ಅಘಾತ ಉಂಟಾಗಿತ್ತು. ಈಗ ಉತ್ತಮ ಮಳೆ ಆಗುತ್ತಿರುವುದರಿಂದ ಜಲಾಶಯಕ್ಕೆ ಒಳ ಹರಿವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಮುಂದಿನ ತಿಂಗಳ ಮೊದಲ ವಾರದಲ್ಲೇ ಜಲಾಶಯ ಗರಿಷ್ಠ  ಮಟ್ಟ 84 ಅಡಿಗಳಿಗೆ ತಲುಪುವ ಸಾಧ್ಯತೆಗಳು ಹೆಚ್ಚಾಗಿದೆ.

ಜಮೀನುಗಳಿಗೆ ನೀರು ಹರಿಸಿ: ಹಾಗಾಗಿ ಈಗಲಾದರೂ ಸಂಸದ ಆರ್‌.ಧ್ರುವನಾರಾಯಣ್‌, ಶಾಸಕ ಎಸ್‌.ಚಿಕ್ಕಮಾದು ಮತ್ತು ಅಧಿಕಾರಿಗಳು ತಕ್ಷಣ ಜಾಗೃತಗೊಂಡು ಕಬಿನಿ ಜಲಾಶಯದ ಎಡದಂಡೆ ಮತ್ತು ಬಲದಂಡೆ ನಾಲೆಗಳ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದ ರೈತರ ಜಮೀನುಗಳಿಗೆ ನೀರು ಹರಿಸುವ ಕಾರ್ಯಕ್ಕೆ ಮುಂದಾಗಬೇಕಿದೆ.

ಹಾಗೆಯೇ ಏತ ನೀರಾವರಿ ನೀರವಾರಿಯ ಮೂಲಕ ತಾರಕ ಜಲಾಶಯಕ್ಕೆ ನೀರು ತುಂಬಿಸುವ ಕೆಲಸಕ್ಕೆ ಮುಂದಾದರೆ ಮಾತ್ರ ಕೋಟ್ಯಂತರ ರೂ.ಗಳ ವೆಚ್ಚದಲ್ಲಿ ನಾಲೆಗಳ ಆಧುನಿಕರ ಕಾಮಗಾರಿ ನಡೆಸಿರುವುದ್ದಕ್ಕೂ ಸಾರ್ಥಕತೆ ಬಂದಂತಾಗಲಿದ್ದು, ಈ ಭಾಗದ ಸುಮಾರು ಸಾವಿರಾರು ಹೆಕ್ಟೇರ್‌ ಭೂಮಿ ಗದ್ದೆಗಳಾಗಿ ಮಾರ್ಪಡಾಗಲಿದೆ.

ಕಬಿನಿ ಜಲಾಶಯದ ಹಿನ್ನೀರು ವ್ಯಾಪ್ತಿ ಹಾಗೂ ಕೇರಳದ ವೈನಾಡು ಪ್ರದೇಶದಲ್ಲಿ ಉತ್ತಮವಾಗಿ ಮಳೆಯಾಗುತ್ತಿರುವುದರಿಂದ ಸುಮಾರು 13 ಸಾವಿರ ಕ್ಯೂಸೆಕ್‌ ನೀರು ಹರಿದು ಬರುತ್ತಿರುವುದರಿಂದ ಜಲಾಶಯ ಬೇಗ ಭರ್ತಿಯಾಗುವುದು. ನಾಲೆಗಳಿಗೆ ನೀರು ಹರಿಸುವ ಸಂಬಂಧ ಈಗಾಗಲೇ ನಾಲೆಗಳ ಸಣ್ಣ ಪುಟ್ಟ ಕೆಲಸಗಳನ್ನು ಶೀಘ್ರ ಮುಗಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ.
-ಕೃಷ್ಣಯ್ಯ, ಎಇಇ, ಕಬಿನಿ ಜಲಾಶಯ

* ನಿಂಗಣ್ಣಕೋಟೆ

Advertisement

Udayavani is now on Telegram. Click here to join our channel and stay updated with the latest news.

Next