Advertisement

Dakshina Kannada ಜಿಲ್ಲಾದ್ಯಂತ ಜಡಿ ಮಳೆ; ಕೃತಕ ನೆರೆ, ಸಂಪರ್ಕ ಕಡಿತ

01:16 AM Jul 20, 2024 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ದಿನವಿಡೀ ಭಾರೀ ಮಳೆಯಾಗಿದ್ದು, ಹಲವು ಕಡೆ ಹಾನಿ ಉಂಟಾಗಿದೆ. ಕೃತಕ ನೆರೆ ಉಂಟಾದ ಪ್ರದೇಶದ ಮನೆ ಮಂದಿಯನ್ನು ಮುಂಜಾಗ್ರತಾ ಕ್ರಮವಾಗಿ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲು ಕ್ರಮ ವಹಿಸಲಾಗಿದೆ.

Advertisement

ಮುನ್ನೆಚ್ಚರಿಕೆ ಉದ್ದೇಶದಿಂದ ಜು.20 ರಂದು ಜಿಲ್ಲೆಯ ಪಿಯುಸಿವರೆಗಿನ ವಿದ್ಯಾರ್ಥಿಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.

ಬೆಳ್ತಂಗಡಿ ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಬಳಿ ಖಾಸಗಿ ಬಸ್‌ ಮತ್ತು ಲಾರಿ ಹೂತು ಹೋಗಿ ಟ್ರಾಫಿಕ್‌ ಜಾಮ್‌ ಉಂಟಾಗಿದ್ದು, ಸ್ಥಳಕ್ಕೆ ತಹಶೀಲ್ದಾರರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಂದಾರು, ನೆರಿಯ ಬಳಿ ಗುಡ್ಡ ಕುಸಿದಿದೆ. ಚಾರ್ಮಾಡಿಯಲ್ಲಿ ನಿರಂತರ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ನೇತ್ರಾವತಿ ನದಿ ಪಾತ್ರದಲ್ಲಿ ಬೆಳಗ್ಗೆ ವೇಳೆ ನೀರಿನ ಮಟ್ಟ ಏರಿಕೆಯಾಗಿದ್ದು, ಸಂಜೆ ತುಸು ಇಳಿಕೆ ಕಂಡಿತ್ತು.

ಬಂಟ್ವಾಳ ತಾಲೂಕಿನಲ್ಲೂ ದಿನವಿಡೀ ಮಳೆ ಸುರಿದಿದ್ದು, ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ 8.6 ಮೀ.ಗೆ ಏರಿಕೆ ಕಂಡು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಅಜಿಲ ಮೊಗರು ಬಳಿ ನೆರೆ ಆವರಿಸಿ, ಅಜಿಲಮೊಗರು - ಉಪ್ಪಿನಂಗಡಿ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ.

ಸುಬ್ರ ಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ಮುಳುಗಡೆಯಾಗಿದೆ. ದರ್ಪಣ ತೀರ್ಥ ಸೇತುವೆ ಮುಳುಗಡೆಯಾಗಿ ಹೆದ್ದಾರಿಗೆ ನೀರು ನುಗ್ಗಿ ಪಂಜ-ಸುಬ್ರಹ್ಮಣ್ಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಪಂಜ, ಪುಳಿಕುಕ್ಕು ಸಮೀಪ ರಸ್ತೆಗೆ ಮರ ಬಿದ್ದಿದೆ. ಕುಕ್ಕೆ ಕ್ಷೇತ್ರಕ್ಕೆ ಭಕ್ತರ ಸಂಖ್ಯೆ ವಿರಳವಾಗಿತ್ತು. ಉಪ್ಪಿನಂಗಡಿಯಲ್ಲಿ ಕುಮಾರಧಾರಾ ಮತ್ತು ನೇತ್ರಾವತಿ ನೀರಿನ ಮಟ್ಟದಲ್ಲೂ ಏರಿಕೆಯಾಗಿದೆ.

Advertisement

ಮಂಗಳೂರು ನಗರದಲ್ಲಿ ಧಾರಾಕಾರ ಮಳೆಯಾಗಿದ್ದು, ಕೆಲವು ತಗ್ಗು ಪ್ರದೇಶಗಳಲ್ಲಿ, ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರಿಗೆ ಸಮಸ್ಯೆ ಉಂಟಾಯಿತು. ಬೆಂಗ್ರೆ ಭಾಗದಲ್ಲಿ ಕೃತಕ ನೆರೆ ಆವರಿಸಿ, ಸಮಸ್ಯೆ ಸೃಷ್ಟಿಸಿತ್ತು. ಸುರತ್ಕಲ್‌ನ ಕೃಷ್ಣಾಪುರದಲ್ಲಿ ವಿದ್ಯುತ್‌ ಕಂಬ-ಮರ ಧರೆಗುರುಳಿದೆ. ಪಣಂಬೂರು, ಹೊಸಬೆಟ್ಟು, ಸುರತ್ಕಲ್‌ ಪ್ರದೇಶದಲ್ಲಿ ಕಡಲಬ್ಬರ ಮುಂದುವರಿದಿದೆ. ಕೆಂಜಾರು- ಅದ್ಯಪಾಡಿ ರಸ್ತೆಯ ಸಂಕೇಶ ಎಂಬಲ್ಲಿ ಗುಡ್ಡ ಜರಿದು ರಸ್ತೆಗೆ ಮಣ್ಣು ಬಿದ್ದಿದೆ. ಲೋಕೋಪಯೋಗಿ ಇಲಾಖೆಯಿಂದ ಮಣ್ಣು ತೆರವು ಮಾಡಲಾಗಿದೆ. ಸಂಕೇಶದಲ್ಲಿ 10 ಮಂದಿಗೆ ಮನೆಗೆ ಹೋಗುವ ರಸ್ತೆ ಕಡಿತಗೊಂಡಿದೆ. ಇದೇ ಭಾಗದ ಮನೆಯ ಆವರಣ ಗೋಡೆ ಕುಸಿದಿದೆ.


ಪಾವೂರು ವ್ಯಾಪ್ತಿಯಲ್ಲಿ ನೇತ್ರಾವತಿ ನದಿ ತೀರದ 10 ಮನೆಗಳು ಜಲಾವೃತಗೊಂಡಿವೆ. ಬಟಪ್ಪಾಡಿ, ಉಚ್ಚಿಲದಲ್ಲಿ ಕಡಲಬ್ಬರ ಹೆಚ್ಚಾಗಿದೆ. ತುಂಬೆಯಲ್ಲಿ ಸಂಜೆ ವೇಳೆಗೆ 7.40 ಮೀ. ನೀರಿನ ಮಟ್ಟ ಇದ್ದು, ಅಣೆಕಟ್ಟಿನ ಎಲ್ಲ ಗೇಟ್‌ಗಳನ್ನು ತೆರೆಯಲಾಗಿದೆ. ಅದ್ಯಪಾಡಿಯಲ್ಲಿ ಕೃತಕ ನೆರೆಗೆ ಹಲವು ಮನೆಗಳು ಅಪಾಯದ ಸ್ಥಿತಿಯಲ್ಲಿದ್ದು, ಜಿಲ್ಲಾಧಿಕಾರಿ ಭೇಟಿ ನೀಡಿದರು. ಮೂಡುಬಿದಿರೆ ಹೊಸಬೆಟ್ಟು ಗ್ರಾಮದ ಪುಚ್ಚೆಮೊಗರು ಹಾಗೂ ಪುತ್ತಿಗೆ ಗುಡ್ಡೆಯಂಗಡಿಯಲ್ಲಿ ಮನೆಗೆ ಹಾನಿಯಾಗಿದೆ. ನಂತೂರಿನಲ್ಲಿ ಸರಕಾರಿ ಬಸ್ಸಿಗೆ ಮರದ ಗೆಲ್ಲು ಬಿದ್ದಿದ್ದು, ಯಾರಿಗೂ ಗಾಯವಾಗಿಲ್ಲ.

ಇಂದು “ರೆಡ್‌ ಅಲರ್ಟ್‌’
ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಜು.20ರಂದು ಕರಾವಳಿ ಭಾಗದಲ್ಲಿ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ಈ ವೇಳೆ ಸುಮಾರು 204.5 ಮಿ.ಮೀ.ಗೂ ಅಧಿಕ ಮಳೆ ಸುರಿಯುವ ನಿರೀಕ್ಷೆ ಇದೆ. ಮಳೆಯ ಜತೆ ಗಾಳಿ, ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿರುವ ಸಾಧ್ಯತೆ ಇದೆ. ಇಂಡಿಯನ್‌ ನ್ಯಾಷನಲ್‌ ಸೆಂಟರ್‌ ಫಾರ್‌ ಓಷಿಯನ್‌ ಇನಾ#ರ್ಮೆಶನ್‌ ಸರ್ವೀಸ್‌ ಮುನ್ಸೂಚನೆಯ ಪ್ರಕಾರ ದ.ಕ. ಜಿಲ್ಲೆಯಲ್ಲಿ 3.2 ಮೀ. ನಿಂದ 3.4 ಮೀ.ವರೆಗೆ ಎತ್ತರದ ಅಲೆಗಳು ದಡಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ. ಉಡುಪಿ ಜಿಲ್ಲೆಯಲ್ಲಿ 3.5 ಮೀ. ನಿಂದ 3.7 ಮೀ.ವರೆಗೆ ಅಲೆಗಳ ಅಪ್ಪಳಿಸುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದೆ.

 

Advertisement

Udayavani is now on Telegram. Click here to join our channel and stay updated with the latest news.

Next