Advertisement

ಬಾನಂಗಳದಿ ಡ್ರೋನ್‍ಗಳ ಜೂಟಾಟ

06:23 AM Feb 22, 2019 | |

ಬೆಂಗಳೂರು: ಲೋಹದ ಹಕ್ಕಿಗಳು ಹಾರಾಡುವ ಜಾಗದಲ್ಲಿ ಗುರುವಾರ ಬರೀ “ಗುಂಗಿಯ ಹುಳು’ಗಳ ಗುಂಗು ಇತ್ತು. ಇದರಲ್ಲಿ ಕೆಲವು ನಾಲ್ಕೈದು ಗುಂಪಾಗಿ ಆಗಸಕ್ಕೆ ನುಗ್ಗಿ ಆಟದಲ್ಲಿ ತೊಡಗುತ್ತಿದ್ದವು. ಇವುಗಳಿಗೆ ತಮ್ಮಲ್ಲಿಯೇ ಒಬ್ಬ ಲೀಡರ್‌ ಕೂಡ ಇರುತ್ತಿದ್ದ. ಆತ ಹೇಳಿದಂತೆ ಉಳಿದವು ಕೇಳುತ್ತಿದ್ದವು. ಈ ಚಿನ್ನಾಟ ಪ್ರೇಕ್ಷಕರಿಗೆ ಕಣ್ಣುಗಳಿಗೆ ರಸದೌತಣ ಉಣಬಡಿಸಿತು.  

Advertisement

ವೈಮಾನಿಕ ಪ್ರದರ್ಶನದಲ್ಲಿ ಇದೇ ಮೊದಲ ಬಾರಿಗೆ ಹಮ್ಮಿಕೊಂಡಿದ್ದ ಡ್ರೋಣ್‌ ಒಲಿಂಪಿಕ್‌ನಲ್ಲಿ ಕಂಡುಬಂದ ದೃಶ್ಯಗಳಿವು. ಈ ಬಾರಿ ಕೇವಲ ಎರಡು ಏರೋಬಾಟಿಕ್‌ ತಂಡಗಳು ಭಾಗವಹಿಸಿದ್ದರಿಂದ ಪ್ರದರ್ಶನ ತುಸು ನೀರಸವಾಗಿದೆ ಎಂಬ ಬೇಸರ ಇತ್ತು. ಆ ಕೊರತೆಯನ್ನೂ ಡ್ರೋಣ್‌ಗಳು ನೀಗಿಸಿತು.

ದೇಶದ ನಾನಾ ಭಾಗಗಳಿಂದ ಹತ್ತಾರು ನಮೂನೆಯ ಡ್ರೋಣ್‌ಗಳು ಈ ಪ್ರದರ್ಶನದಲ್ಲಿ ಭಾವಹಿಸಿದ್ದವು. ಒಂದಕ್ಕಿಂತ ಒಂದು ಪ್ರದರ್ಶನ ನೀಡಿದ ಆ ಡ್ರೋಣ್‌ಗಳು ಕೇವಲ ಎರಡು ತಾಸುಗಳಲ್ಲಿ 33.5 ಲಕ್ಷ ರೂ. ಗಳಿಸಿದವು. ದೆಹಲಿ ತಂಡ ಐದು ಲಕ್ಷ ರೂ. ಬಹುಮಾನ ಬಾಚಿಕೊಂಡಿತು. 

17 ತಂಡಗಳು; 9 ಗೆಲುವು: ಒಟ್ಟಾರೆ 57 ಡ್ರೋಣ್‌ ತಂಡಗಳು ಈ ಒಲಿಂಪಿಕ್‌ ಹಾಗೂ ಮಾದರಿ ವಿಮಾನಗಳ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಈ ಪೈಕಿ 17 ತಂಡಗಳು ಅಂತಿಮ ಸುತ್ತಿಗೆ ಅರ್ಹತೆ ಪಡೆದಿದ್ದವು. ಅಂತಿಮವಾಗಿ 9 ತಂಡಗಳು ವಿವಿಧ ವಿಭಾಗಗಳಲ್ಲಿ ಬಹುಮಾನ ಗಳಿಸಿದವು.

ಗಡಿಗಳಲ್ಲಿ ಕಣ್ಗಾವಲು ನಡೆಸುವ ಡ್ರೋಣ್‌ಗಳು, ಲಂಬವಾಗಿ ಟೇಕ್‌ ಆಫ್ ಮತ್ತು ಲ್ಯಾಂಡ್‌ ಆಗುವ ಡ್ರೋಣ್‌, ಶತ್ರುಗಳನ್ನು ಗುರಿಯಾಗಿಸುವ ಮತ್ತು ಅತ್ಯಂತ ಹಗುರವಾದ ಹಾಗೂ ಅತಿ ವೇಗವಾಗಿ ಚಿಮ್ಮುವುದು, ಇನ್ನು ಕೆಲವು ಔಷಧಿಯ ಕಿಟ್‌ಗಳನ್ನು ಕೊಂಡೊಯ್ಯುವ, ಅಗತ್ಯ ವಸ್ತುಗಳನ್ನು ಹೊತ್ತೂಯ್ಯುವುದು ಸೇರಿದಂತೆ ಹಲವು ಪ್ರಕಾರಗಳ ಡ್ರೋಣ್‌ಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು.

Advertisement

ಯುಎಎಸ್‌-ಡಿಟಿಯು (ಮಾನವರಹಿತ ಏರ್‌ ಸಿಸ್ಟ್‌ಂ-ದೆಹಲಿ ತಾಂತ್ರಿಕ ವಿವಿ) ವಿದ್ಯಾರ್ಥಿಗಳು ನೀಡಿದ ಫಾರ್ಮೇಷನ್‌ ವಿಭಾಗ (ನಾಲ್ಕೈದು ಡ್ರೋಣ್‌ಗಳು ಸೇರಿ ಪರಸ್ಪರ ಸಮನ್ವಯದಿಂದ ಹಾರಾಟ ನಡೆಸುವುದು)ದಲ್ಲಿನ ಪ್ರದರ್ಶನಕ್ಕೆ ಐದು ಲಕ್ಷ ರೂ. ಬಹುಮಾನ ಸಿಕ್ಕಿತು.

ಬಹುಮಾನ ಸ್ವೀಕರಿಸಿ ಮಾತನಾಡಿದ ತಂಡದ ಪ್ರಂಜಲ್‌ ಶಿವ, ನಮ್ಮ ಶ್ರಮಕ್ಕೆ ಸಿಕ್ಕ ಪ್ರತಿಫ‌ಲ ಇದು. ನಮಗೆ ಅಮೆರಿಕ ಮೂಲದ ಲಾಕ್‌ಹೀದ್‌ ಮಾರ್ಟಿನ್‌ ಕಂಪನಿ ತರಬೇತಿ ನೀಡಿತ್ತು. ಸ್ಪರ್ಧೆಗೋಸ್ಕರ ಸಾಕಷ್ಟು ಪೂರ್ವಸಿದ್ಧತೆ ಮಾಡಿಕೊಂಡಿದ್ದೆವು. ಈ ಡ್ರೋಣ್‌ ಅಭಿವೃದ್ಧಿಪಡಿಸಲು 2ರಿಂದ 3 ಲಕ್ಷ ರೂ. ಖರ್ಚಾಗಿದೆ’ ಎಂದು ಹೇಳಿದರು.

ಈ ಮಧ್ಯೆ ಸಣ್ಣ ಗಾತ್ರದ ರನ್‌ವೇ ಪಕ್ಕದಲ್ಲೇ ಅಂತಾರಾಷ್ಟ್ರೀಯ ಮಟ್ಟದ ಡ್ರೋಣ್‌ ರೇಸ್‌ ಲೀಗ್‌ ಕೂಡ ನಡೆಯುತ್ತಿತ್ತು. ಇದರಲ್ಲಿ ದೆಹಲಿ ಪಬ್ಲಿಕ್‌ ಸ್ಕೂಲ್‌ನ 15 ವರ್ಷದ ಬಾಲಕ ಮೊದಲ ಬಹುಮಾನ ಗಳಿಸಿದ. ಸ್ವತಃ ಆರಾಧ್ಯ ಅಭಿವೃದ್ಧಿಪಡಿಸಿದ್ದ ಡ್ರೋಣ್‌, ಕೇವಲ 32 ಸೆಕೆಂಡ್‌ಗಳಲ್ಲಿ 3 ಟ್ರ್ಯಾಕ್‌ಗಳನ್ನು ಅನಾಯಾಸವಾಗಿ ಸುತ್ತು ಹಾಕಿತು. 

ಸುದ್ದಿಗಾರರೊಂದಿಗೆ ಮಾತನಾಡಿದ ಆರಾಧ್ಯ, “ಕಳೆದ ಎರಡು ವರ್ಷಗಳ ಹಿಂದೆ ದುಬೈನಲ್ಲಿ ಡ್ರೋಣ್‌ ಪೈಲಟ್‌ ನೋಡಿದ ನಂತರ ನನಗೆ ಇದರ ಹುಚ್ಚು ಹಿಡಿಯಿತು. ನಾನು ಸ್ವತಃ ಎಂಟು ಡ್ರೋಣ್‌ಗಳನ್ನು ತಯಾರಿಸಿದ್ದೇನೆ. ಈಚೆಗೆ ನಡೆದ ಬೆಂಗಳೂರು ಟೆಕ್‌ ಸಮಿಟ್‌ನಲ್ಲಿ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ್ದೇನೆ. ಸಾಮಾನ್ಯವಾಗಿ ಇದರ ರೇಸ್‌ನಲ್ಲಿ ಶೇ. 70ರಷ್ಟು ಕೆಲಸ ಅದನ್ನು ಹಾರಾಟ ನಡೆಸುವವನ ಕೈಚಳಕವನ್ನು ಅವಲಂಬಿಸಿರುತ್ತದೆ. ಡ್ರೋಣ್‌ ಪಾತ್ರ ಕೇವಲ ಶೇ. 30ರಷ್ಟು ಎಂದು ಹೇಳಿದರು.

ಸ್ಪಧೆಯಲ್ಲಿ ಗೆದ್ದವರ ವಿವರ
ವಿಭಾಗ    ತೂಕ    ಗೆದ್ದ ಕಂಪೆನಿ

-ಕಣ್ಗಾವಲು    4 ಕೆಜಿಗಿಂತ ಕಡಿಮೆ    ಸಾಗರ ಡಿಫೆನ್ಸ್‌ ಮುಂಬೈ
-ಕಣ್ಗಾವಲು    4 ಕೆಜಿಗಿಂತ ಹೆಚ್ಚು    ಡ್ರೊವೆಂಜರ್ ಕ್ವಾಡ್‌
-ಕಣ್ಗಾವಲು    ಹೈಬ್ರಿಡ್‌ ಡಿಸೈನ್‌ 4-20 ಕೆಜಿ ಒಳಗಿನ    ದಕ್ಷ ಟೀಮ್‌ ಮದ್ರಾಸ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜೀಸ್‌
-ವೇಟ್‌ಡ್ರಾಪ್‌ ಚಾಲೆಂಜ್‌    –    ಥಾನೋಸ್‌ ಹೈದರಾಬಾದ್‌
-ಫ್ಲೈಯಿಂಗ್‌ ಫಾರ್ಮೇಷನ್‌    –    ಯುಎಎಸ್‌-ಡಿಟಿಯು

ವೃತ್ತಿಯಾಗಿ ವಿಮಾನ ಅಭಿವೃದ್ಧಿ: ಜಯನಗರದ ಮಾಡರ್ನ್ ಏವಿಯೇಷನ್‌ನ ಆದರ್ಶ ಎಂಬುವರು ನೀಡಿದ ಮಾದರಿ ವಿಮಾನ ಪ್ರದರ್ಶನ ಹೆಚ್ಚು ಗಮನಸೆಳೆಯಿತು. ಸುಮಾರು 20 ನಿಮಿಷಗಳ ಕಾಲ ಹಾರಾಟ ನಡೆಸಿದ ಈ ಮಾನವರಹಿತ ವಿಮಾನವು ಆಗಸದಲ್ಲಿ ಚಿತ್ತಾರಗಳನ್ನು ಮೂಡಿಸಿದ್ದಲ್ಲದೆ, ನೆಗೆದು ಹೆಚ್ಚು ಚಪ್ಪಾಳೆ ಗಿಟ್ಟಿಸಿತು. ಅಂದಹಾಗೆ ಆದರ್ಶ, 21 ವರ್ಷಗಳ ಹಿಂದೆ ಇದನ್ನು ಪ್ರವೃತ್ತಿಯಾಗಿ ಶುರು ಮಾಡಿದರು. ಈಗ ವಿಮಾನಗಳನ್ನು ಅಭಿವೃದ್ಧಿಪಡಿಸುವುದು ವೃತ್ತಿಯಾಗಿ ಮಾಡಿಕೊಂಡಿದ್ದಾರೆ.

ಈ ಸ್ಪರ್ಧೆಯ ಉದ್ದೇಶ ಮಾನವ ರಹಿತ ವಿಮಾನ ಕ್ಷೇತ್ರವನ್ನು ಪ್ರೋತ್ಸಾಹಿಸುವುದು. ಇದು ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌ ಸೇರಿದಂತೆ ಹಲವು ತಂತ್ರಜ್ಞಾನಗಳ ಮೂಲಕ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಸದೃಢಗೊಳಿಸಲಿದ್ದು, ರಾಷ್ಟ್ರೀಯ ಭದ್ರತೆಯ ದಿಕ್ಕುಬದಲಿಸಲಿದೆ. 
-ಸಂಜಯ್‌ ಜಾಜು, ಜಂಟಿ ಕಾರ್ಯದರ್ಶಿ, ರಕ್ಷಣಾ ಇಲಾಖೆ ಉತ್ಪನ್ನಗಳ ವಿಭಾಗ.

Advertisement

Udayavani is now on Telegram. Click here to join our channel and stay updated with the latest news.

Next