Advertisement

ಶಶಿ ಪಟ್ಟದ ಕನಸಿಗೆ ಪರಪ್ಪನ ಪೆಟ್ಟು

03:35 AM Feb 15, 2017 | Team Udayavani |

ಚೆನ್ನೈ/ಹೊಸದಿಲ್ಲಿ: ತಮಿಳುನಾಡಿನ ಮುಖ್ಯಮಂತ್ರಿಯಾಗಬೇಕು ಎಂಬ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್‌ ಅವರ ಕನಸು ನುಚ್ಚುನೂರಾಗಿದೆ. ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳಬೇಕಿದ್ದ ಶಶಿಕಲಾ ಇದೀಗ ಪರಪ್ಪನ ಅಗ್ರಹಾರ ಜೈಲಿನ ಕಂಬಿ ಎಣಿಸುವಂತಾಗಿದೆ.

Advertisement

19 ವರ್ಷಗಳ ಹಿಂದಿನ ಅಕ್ರಮ ಆಸ್ತಿ ಪ್ರಕರಣ ದಲ್ಲಿ ಶಶಿಕಲಾ ಅವರು ಅಪರಾಧಿ ಎಂಬ ಕರ್ನಾಟಕದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಸುಪ್ರೀಂ ಕೋರ್ಟ್‌ ಮಂಗಳ ವಾರ ಎತ್ತಿಹಿಡಿದಿದ್ದು, ಹೈಕೋರ್ಟ್‌ ಆದೇಶ ವನ್ನು ತಳ್ಳಿಹಾಕಿದೆ. ಶಶಿಕಲಾ ಮತ್ತು ಅವರ ಸಂಬಂಧಿಗಳಾದ ವಿ.ಎನ್‌. ಸುಧಾಕರನ್‌ ಹಾಗೂ ಇಳವರಸಿ ಅವರನ್ನು ಅಪರಾಧಿಗಳೆಂದು ಘೋಷಿಸಿದೆ.

ಮೂವರು ಅಪರಾಧಿಗಳು ತಲಾ 10 ಕೋಟಿ ರೂ. ದಂಡ ಪಾವತಿಸಿ, 4 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕು ಎಂದು ನ್ಯಾ| ಪಿ ಸಿ. ಘೋಷ್‌ ಹಾಗೂ ನ್ಯಾ| ಅಮಿತಾವ ರಾಯ್‌ ಅವರನ್ನೊಳಗೊಂಡ ಪೀಠ ಆದೇಶಿಸಿದೆ. 

ಈ ಮಹತ್ವದ ತೀರ್ಪಿನಿಂದಾಗಿ ಶಶಿಕಲಾ ಜೈಲು ಸೇರಲಿದ್ದು, ಮುಂದಿನ 10 ವರ್ಷ ಯಾವುದೇ ಚುನಾವಣೆ ಎದುರಿಸಲೂ ಅವರಿಗೆ ಅವಕಾಶವಿರುವುದಿಲ್ಲ. ಒಟ್ಟಿನಲ್ಲಿ, ಸಿಎಂ ಗಾದಿಗೆ ಏರಲು ಹವಣಿಸಿ, ಹಲವು ರಾಜಕೀಯ ಕಸರತ್ತು ನಡೆಸಿದ್ದ ಶಶಿಕಲಾ ಅವರ ರಾಜಕೀಯ ಜೀವನವೇ ಈಗ ಸಮಾಪ್ತಿಯಾದಂತಾಗಿದೆ.

ಕುತೂಹಲಕ್ಕೆ ತೆರೆ: ತೀರ್ಪು ಪ್ರಕಟವಾ ಗುತ್ತದೆ ಎಂಬ ವಿಚಾರ ಸೋಮವಾರ ಗೊತ್ತಾಗುತ್ತಿದ್ದಂತೆಯೇ ರಾತ್ರಿಯೇ ಶಾಸಕರಿದ್ದ 
ರೆಸಾರ್ಟ್‌ಗೆ ತೆರಳಿದ್ದ ಶಶಿಕಲಾ, ಅಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದರು.   ಮಂಗಳವಾರ ಬೆಳಗ್ಗೆ 10.30ರ ವೇಳೆಗೆ ಸುಪ್ರೀಂನ ಇಬ್ಬರು ನ್ಯಾಯಮೂರ್ತಿಗಳು ತಮ್ಮ ತೀರ್ಪನ್ನು ಪ್ರಕಟಿಸಿದರು. 1991ರಿಂದ 1996ರಲ್ಲಿ ಮೊದಲ ಬಾರಿ ಸಿಎಂ ಆಗಿದ್ದ ಅವಧಿಯಲ್ಲಿ ಜಯಲಲಿತಾ ಹಾಗೂ ಶಶಿಕಲಾ, ಸುಧಾಕರನ್‌ ಮತ್ತು ಇಳವರಸಿ ಅವರು ತಮ್ಮ ಆದಾಯಕ್ಕೆ ಮೀರಿ 66.65 ಕೋಟಿ ಅಕ್ರಮ ಆಸ್ತಿ ಸಂಪಾದಿಸಿದ್ದು ಹೌದು ಎಂದು ನ್ಯಾಯಮೂರ್ತಿಗಳು ತೀರ್ಪು ನೀಡಿದರು. ಜತೆಗೆ, ಆರೋಪಿಗಳನ್ನು ಖುಲಾಸೆ ಗೊಳಿಸಿ ಕರ್ನಾಟಕ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ವಜಾ ಮಾಡಿ, ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದರು. ಈ ಮೂಲಕ, ಶಶಿಕಲಾ ಭವಿಷ್ಯದ ಕುರಿತು ಮೂಡಿದ್ದ ಎಲ್ಲ ಕುತೂಹಲಗಳಿಗೂ ತೆರೆ ಎಳೆದರು.

Advertisement

ನ್ಯಾ| ಅಮಿತಾವ ರಾಯ್‌ ಅವರು, “ಸಮಾಜದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ ಪಿಡುಗಿನ’ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದೂ ಕಂಡುಬಂತು. ಪ್ರಮುಖ ಆರೋಪಿ ಜಯಲಲಿತಾ ಅವರು ನಿಧನ ಹೊಂದಿರುವ ಹಿನ್ನೆಲೆಯಲ್ಲಿ, ಅವರ ವಿರುದ್ಧದ ವಿಚಾರಣೆಯನ್ನು ಕೈಬಿಡುತ್ತಿರುವುದಾಗಿಯೂ ನ್ಯಾಯಪೀಠ ಹೇಳಿತು. ಈ ಹಿಂದೆ ವಿಚಾರಣಾ ನ್ಯಾಯಾಲಯವು ಜಯಲಲಿತಾಗೆ 4 ವರ್ಷಗಳ ಜೈಲುಶಿಕ್ಷೆ ಹಾಗೂ 100 ಕೋಟಿ ರೂ. ದಂಡ ವಿಧಿಸಿ ತೀರ್ಪು ನೀಡಿತ್ತು.

ಶರಣಾಗತಿಗೆ ಕಾಲಾವಕಾಶ ಕೋರಿಕೆ?
ಸದ್ಯ ಚೆನ್ನೈನ ರೆಸಾರ್ಟ್‌ನಲ್ಲಿರುವ ಶಶಿಕಲಾ ಅವರು ಮಂಗಳವಾರ  ನ್ಯಾಯಾಲಯಕ್ಕೆ ಶರಣಾಗಿಲ್ಲ. ಜತೆಗೆ, ಯಾವಾಗ ಶರಣಾಗುತ್ತಾರೆ ಎಂಬ ಮಾಹಿತಿಯೂ ಸಿಕ್ಕಿಲ್ಲ. ಆದರೆ,  ಸುಪ್ರೀಂ ತೀರ್ಪು 570 ಪುಟಗಳಿದ್ದು, ಅದನ್ನು ಓದಿ ಪರಿಶೀಲನೆ ನಡೆಸಲು ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ ಎಂದು ಅವರ ಕಾನೂನು ತಂಡ ತಿಳಿಸಿದೆ.

ಧರ್ಮ ಗೆದ್ದೇ ಗೆಲ್ಲುತ್ತದೆ ಎಂದ ಶಶಿಕಲಾ: ಸುಪ್ರೀಂ ಕೋರ್ಟ್‌ ತೀರ್ಪು ಶಶಿಕಲಾ ಕಣ್ಣಲ್ಲಿ ನೀರು ತರಿಸಿದರೂ, ಸ್ವಲ್ಪ ಹೊತ್ತಲ್ಲೇ ಸಾವರಿಸಿಕೊಂಡ ಅವರು, “”ಈ ಹಿಂದೆ ಅಮ್ಮಾ ಸಂಕಷ್ಟದಲ್ಲಿ ಸಿಲುಕಿದಾಗ, ನಾನೂ ಕಷ್ಟಪಟ್ಟಿದ್ದೇನೆ. ಈ ಬಾರಿಯೂ ನಾನೇ ಎಲ್ಲವನ್ನೂ ಅನುಭವಿಸುತ್ತೇನೆ. ಧರ್ಮವು ಗೆದ್ದೇ ಗೆಲ್ಲುತ್ತದೆ,” ಎಂದರು. ಇನ್ನೊಂದೆಡೆ, ತೀರ್ಪಿನ ಬೆನ್ನಲ್ಲೇ ಎಐಎಡಿಎಂಕೆ ಅಧಿಕೃತ ಟ್ವಿಟರ್‌ ಖಾತೆಯಲ್ಲಿ, “ದ್ರೋಹಿಗಳು ಅಮ್ಮನ ಆತ್ಮಕ್ಕೆ ಅವಮಾನ ಮಾಡಿದರು. ಆದರೂ, ಅಮ್ಮಾ ಗೆಲ್ಲುತ್ತಾರೆ’ ಎಂಬ ಟ್ವೀಟ್‌ ಪ್ರತ್ಯಕ್ಷಗೊಂಡಿತು.

ಮೂರೂವರೆ ವರ್ಷ ಜೈಲು
ಶಶಿಕಲಾ ಹಾಗೂ ಇತರ ಅಪರಾಧಿಗಳು ಕೂಡಲೇ ವಿಚಾರಣಾ ನ್ಯಾಯಾಲಯದ ಮುಂದೆ ಶರಣಾಗಿ, ತಮ್ಮ ಜೈಲುಶಿಕ್ಷೆಯ ಉಳಿದ ಅವಧಿ ಯನ್ನು ಪೂರ್ಣಗೊಳಿಸುವಂತೆ ನ್ಯಾಯಪೀಠ ಸೂಚಿಸಿತು. ಈ ಹಿಂದೆ ಜಯಲಲಿತಾ ಅವರು ಪರಪ್ಪನ ಅಗ್ರಹಾರ ಜೈಲು ಸೇರಿದ್ದಾಗ (2014ರಲ್ಲಿ), ಶಶಿಕಲಾ ಅವರೂ 6 ತಿಂಗಳ ಜೈಲುಶಿಕ್ಷೆಯನ್ನು ಅನುಭವಿಸಿದ್ದರು. ಅನಂತರ, ಜಾಮೀನು ಪಡೆದು ಹೊರಬಂದಿದ್ದರು. ಹೀಗಾಗಿ, ಉಳಿದ ಅವಧಿಯನ್ನು ಅಂದರೆ, 4 ವರ್ಷಗಳ ಶಿಕ್ಷೆಯ ಪೈಕಿ ಮೂರು ವರ್ಷ ಆರು ತಿಂಗಳ ಶಿಕ್ಷೆಯನ್ನು ಅವರು ಪೂರ್ಣಗೊಳಿಸಬೇಕಿದೆ.

ತಮಿಳುನಾಡಿನ ಸಿಎಂ ಯಾರಾಗುತ್ತಾರೆ?
ಶಶಿಕಲಾ ಅವರು ಆಗಲು ಸಾಧ್ಯವೇ ಇಲ್ಲ. ಇನ್ನು ಪನ್ನೀರ್‌ಸೆಲ್ವಂ ಅಥವಾ ಪಳನಿಸ್ವಾಮಿ ಪೈಕಿ ಯಾರು ಬಹುಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗುತ್ತಾರೋ, ಅವರು ಸಿಎಂ ಆಗುತ್ತಾರೆ. ರಾಜಕೀಯ ಬಿಕ್ಕಟ್ಟು ಒಂದು ಹಂತಕ್ಕೆ ತಲುಪುವವರೆಗೆ ರಾಷ್ಟ್ರಪತಿ ಆಳ್ವಿಕೆಗೆ ರಾಜ್ಯಪಾಲರು ಶಿಫಾರಸು ಮಾಡುವ ಮತ್ತೂಂದು ಸಾಧ್ಯತೆಯೂ ಇದೆ.

ಇಲ್ಲಿಗೆ ಎಐಎಡಿಎಂಕೆ ಬಿಕ್ಕಟ್ಟು ಮುಗಿಯಿತೇ?
ಖಂಡಿತ ಇಲ್ಲ. ಪನ್ನೀರ್‌ಸೆಲ್ವಂ ಅವರು ಎಲ್ಲ ಶಾಸಕರ ಮನವೊಲಿಸುವಲ್ಲಿ ಯಶಸ್ವಿಯಾದರೆ ಎಐಎಡಿಎಂಕೆ ಪಕ್ಷ ಉಳಿಯಬಹುದು. ಇಲ್ಲದಿದ್ದರೆ, ಅದು ಎರಡು ಹೋಳಾಗುವುದು ಖಚಿತ.

Advertisement

Udayavani is now on Telegram. Click here to join our channel and stay updated with the latest news.

Next