Advertisement

ಕೋರ್ಟ್‌ ಆವರಣದಲ್ಲೇ ಕಣ್ಣೀರಿಟ್ಟ ಎಚ್‌.ಡಿ. ರೇವಣ್ಣ

11:29 PM May 08, 2024 | Team Udayavani |

ಬೆಂಗಳೂರು: ಅಪಹರಣ ಪ್ರಕರಣದ ಸಂಬಂಧ ಎಸ್‌ಐಟಿಯಿಂದ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಎಚ್‌.ಡಿ. ರೇವಣ್ಣ ಅವರನ್ನು ಕೋರ್ಟ್‌ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುತ್ತಿದ್ದಂತೆ ಅವರು ಕಣ್ಣೀರು ಹಾಕಿದರು.

Advertisement

4 ದಿನಗಳಿಂದ ಎಸ್‌ಐಟಿ ವಶದಲ್ಲಿದ್ದ ರೇವಣ್ಣ ಮಾನಸಿಕವಾಗಿ ನೊಂದಿದ್ದು,ಮತ್ತೊಂದೆಡೆ ಅನಾರೋಗ್ಯದಿಂದಲೂ ಬಳಲಿದ್ದಾರೆ. ಎಸ್‌ಐಟಿ ಅಧಿಕಾರಿಗಳು ಪ್ರಕರಣದ ಸಂಬಂಧ ಪ್ರಶ್ನೆಗಳ ಸುರಿಮಳೆಗಳನ್ನೇ ಕೇಳಿರುವ ಹಿನ್ನೆಲೆಯಲ್ಲಿ ಜರ್ಝರಿತರಾಗಿದ್ದಾರೆ.

ಇದೆಲ್ಲದರಿಂದ ಕುಗ್ಗಿ ಹೋಗಿದ್ದ ಅವರನ್ನು 17ನೇ ಎಸಿಎಂಎಂ ನ್ಯಾಯಾ ಲಯ ಬುಧವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುತ್ತಿದ್ದಂತೆ ಕಣ್ಣೀರು ಹಾಕಿ ಭಾವುಕರಾದರು.

ಕೋರ್ಟ್‌ ಕಟ್ಟಡದಿಂದ ಎಸ್‌ಐಟಿ ಅಧಿಕಾರಿಗಳು ಕರೆ ತರುವ ವೇಳೆ ರೇವಣ್ಣ ಕಣ್ಣೀರು ಹಾಕುತ್ತ ಹೊರ ಬಂದರು. ಇತ್ತ ಅವರನ್ನು ಕೋರ್ಟ್‌ ಆವರಣದಿಂದ ಕರೆದು ಕೊಂಡು ಹೋಗುತ್ತಿದ್ದಾಗ ಕೋರ್ಟ್‌ ಕಟ್ಟಡದ ಸುತ್ತಲೂ ಇಲ್ಲಿನ ಸಿಬಂದಿ ಕಿಕ್ಕಿರಿದು ನಿಂತು ನೋಡುತ್ತಿದ್ದರು. ಪೊಲೀಸ್‌ ವಾಹನದಲ್ಲಿ ಕರೆದೊಯ್ಯುವವರೆಗೂ ಕೋರ್ಟ್‌ ಆವರಣದಲ್ಲಿ ನೆರೆದಿದ್ದವರು ಕುತೂಹಲದಿಂದ ವೀಕ್ಷಿಸಿದರು.

3 ದಿನಗಳಿಂದ ನಿದ್ದೆ ಮಾಡಿಲ್ಲ
ನ್ಯಾಯಾಧೀಶರು ರೇವಣ್ಣ ಬಳಿ ನಿಮಗೆ ಪೊಲೀಸರಿಂದ ತೊಂದರೆ ಆಗಿದೆಯಾ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ರೇವಣ್ಣ, ನಾನು ಮೂರು ದಿನಗಳಿಂದ ಸರಿಯಾಗಿ ನಿದ್ದೆ ಮಾಡಲಿಲ್ಲ. ನನಗೆ ಆರೋಗ್ಯ ಸಮಸ್ಯೆ ಇದೆ. ಎಸ್‌ಐಟಿಯವರು 3 ದಿನದಿಂದ ವಿಚಾರಣೆ ನಡೆಸುತ್ತಿದ್ದಾರೆ. ಅನಾರೋಗ್ಯ ಇದ್ದರೂ ವಿಚಾರಣೆಗೆ ಸಹಕರಿಸಿದ್ದೇನೆ. ನನಗೆ ಎಷ್ಟು ಸಾಧ್ಯವೋ ಅಷ್ಟು ಸಹಕಾರ ನೀಡಿದ್ದೇನೆ. ಮೂರು ರಾತ್ರಿ ನಿದ್ರೆ ಮಾಡಲು ಬಿಟ್ಟಿಲ್ಲ. ನಾನು ಎಲ್ಲೂ ಹೋಗಿರಲಿಲ್ಲ. ನಮ್ಮ ತಂದೆ ಮನೆಯಲ್ಲೇ ಇದ್ದೆ. ನನಗೆ ಈ ಕೇಸ್‌ ಬಗ್ಗೆ ಏನೂ ಗೊತ್ತಿಲ್ಲ. ಪ್ರಕರಣ ದಾಖಲಾಗಿದ್ದೂ ಗೊತ್ತಿಲ್ಲ. ನನ್ನದೇನೂ ತಪ್ಪಿಲ್ಲ ಎಂದು ನ್ಯಾಯಾಧೀಶರ ಮುಂದೆ ರೇವಣ್ಣ ಹೇಳಿದರು.

Advertisement

ಚಿಕಿತ್ಸೆ ಬಗ್ಗೆ ಕೇಳಿದ ಪ್ರಶ್ನೆಗೆ, ಮಂಗಳವಾರ ಚಿಕಿತ್ಸೆ ನಡೆದಿದೆ. ಇವತ್ತು ವೈದ್ಯರು ಕರೆದಿದ್ದಾರೆ. ತುಂಬ ಹೊಟ್ಟೆ ನೋವು ಇದೆ ಸರ್‌. ಈ ಬಗ್ಗೆ ವೈದ್ಯರಿಗೆ ಹೇಳಿದ್ದೇನೆ. ಹುಷಾರಿಲ್ಲ ಎಂದರೂ ವಿಚಾರಣೆ ಮಾಡುತ್ತಿದ್ದಾರೆ. ನನಗೆ ಹೊಟ್ಟೆ ಉರಿ ಇದೆ. ಆಸ್ಪತ್ರೆಗೆ ಸೇರಿಸುತ್ತಿಲ್ಲ. ತಪ್ಪೇ ಮಾಡಿಲ್ಲ ಅಂದರೂ ಹೇಗೆ ಒಪ್ಪಿಕೊಳ್ಳಲಿ. ನನ್ನ 25 ವರ್ಷದ ಅವಧಿಯಲ್ಲಿ ಯಾವುದೇ ತಪ್ಪು ಮಾಡಿಲ್ಲ. ನನ್ನ ವಿರುದ್ಧ ಒಂದೇ ಒಂದು ಕೇಸಿಲ್ಲ. ಬೇಕು ಎಂದೇ ನನ್ನ ಮೇಲೆ ಈ ರೀತಿ ಮಾಡುತ್ತಿದ್ದಾರೆ ಎಂದು ರೇವಣ್ಣ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next