ಬೆಂಗಳೂರು: ಅಯೋಧ್ಯೆ ಕುರಿತ ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಿರುವುದನ್ನು ರಾಜ್ಯದ ಜನ ಜಾತಿ-ಮತ ಲೆಕ್ಕಾಚಾರವಿಲ್ಲದೆ ಸ್ವಾಗತಿಸಿ ತೀರ್ಪಿಗೆ ಗೌರವ ಸೂಚಿಸಿದ್ದಾರೆ. ಪ್ರಾದೇಶಿಕ ಹಾಗೂ ರಾಷ್ಟ್ರೀಯ ಪಕ್ಷಗಳ ಮುಖಂಡರು ಸಹ ಸುಪ್ರೀಂ ಕೋರ್ಟ್ ಯಾವುದೇ ರೀತಿಯ ತೀರ್ಪು ನೀಡಿದರೂ, ಅದನ್ನು ಗೌರವಿಸಬೇಕು ಎಂದು ರಾಜ್ಯದ ಜನತೆಗೆ ಮನವಿ ಮಾಡಿದ್ದರು.
ಮುನ್ನೆಚ್ಚರಿಕೆ ಕ್ರಮವಾಗಿ ಶನಿವಾರ ರಾಜ್ಯಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಇದರೊಂದಿಗೆ ರಾಜ್ಯ ಪೊಲೀಸ್ ಇಲಾಖೆ ಸಹ ರಾಜ್ಯದ ಎಲ್ಲ ಸೂಕ್ಷ್ಮ, ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ನಿಯೋಜಿಸಿದ್ದು, ನಿಗಾವಹಿಸಲಾಗಿತ್ತು. ಜತೆಗೆ ಹಿಂದೂ-ಮುಸ್ಲಿಂ ಸಮುದಾಯ ಮುಖಂಡರ ಜತೆ ನಿರಂತರವಾಗಿ ಶಾಂತಿ ಸಭೆ ನಡೆಸಲಾಗಿತ್ತು. ಈ ಮಧ್ಯೆ ರಾಜ್ಯದಲ್ಲಿ 144 ಸೆಕ್ಷನ್ ಜಾರಿ ಮತ್ತು ಮದ್ಯ ಮಾರಾಟ ನಿಷೇಧಿಸಲಾಗಿತ್ತು.
ಇದರೊಂದಿಗೆ ಆಯಾ ಕಮಿಷನರೇಟ್, ವಲಯ ಐಜಿಪಿ, ಜಿಲ್ಲಾ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಭದ್ರತೆ ಕೈಗೊಂಡಿದ್ದು, ಯಾವುದೇ ಅನಾಹುತಕ್ಕೆ ಅವಕಾಶ ನೀಡಿಲ್ಲ ಎಂದು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು. ಈ ಮಧ್ಯೆ ಗುರುವಾರವೇ ರಾಜ್ಯ ಪೊಲೀಸ್ ಇಲಾಖೆ ಕೆಲ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿತ್ತಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಅಕ್ಷೇಪಾರ್ಹ ಹೇಳಿಕೆ, ವಿಡಿಯೋಗಳನ್ನು ಹರಿಬಿಟ್ಟು ಅಶಾಂತಿಗೆ ಪ್ರೋತ್ಸಾಹ ನೀಡದಂತೆ ಮನವಿ ಮಾಡಿತ್ತು.
ಮುಂಜಾನೆಯೇ ಪಥಸಂಚಲನ: ಮುನ್ನೆಚ್ಚರಿಕಾ ಕ್ರಮವಾಗಿ ಸಿಆರ್‌ಪಿಎಫ್, ಆರ್‌ಪಿಎಫ್ ತುಕಡಿಗಳನ್ನು ಕಮಿಷನರೇಟ್ ಸೇರಿ ಕೆಲ ಸೂಕ್ಷ್ಮ ಜಿಲ್ಲೆಗಳಲ್ಲಿ ನಿಯೋಜಿಸಲಾಗಿತ್ತು. ಜತೆಗೆ ರಾಜ್ಯದ ಕೆಎಸ್‌ಆರ್‌ಪಿ, ಸಿಎಆರ್, ಡಿ-ಸ್ವಾಟ್, ಗರುಡ ಪಡೆಗಳು ಹಾಗೂ ಸ್ಥಳೀಯ ಪೊಲೀಸರು ಆಯಾ ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಮುಂಜಾನೆ ಆರು ಗಂಟೆಯಿಂದಲೇ ಪಥಸಂಚಲನ ನಡೆಸಿದ್ದು, ಸಾರ್ವಜನಿಕರಲ್ಲಿ ಧೈರ್ಯ ತುಂಬಿದವು.
ಸಂಭ್ರಮಾಚರಣೆ: ತೀರ್ಪು ಪ್ರಕಟವಾಗುತ್ತಿದ್ದಂತೆ ಹಿಂದೂ ಸಂಘ, ಸಂಸ್ಥೆಗಳ ಸದಸ್ಯರು ನಾನಾ ಪ್ರದೇಶಗಳಲ್ಲಿ ಶ್ರೀರಾಮನ ಫೋಟೋ ಇಟ್ಟು, ಸಿಹಿ ಹಂಚಿ ಸಂಭ್ರಮಿಸಿದರು. ಅಲ್ಲದೆ, ದೇವಾಲಯಗಳ ಮುಂಭಾಗ ಕಾಯಿ ಒಡೆದು ವಿಶೇಷ ಪೂಜೆ ಸಲ್ಲಿಸಿ, ಪ್ರಸಾದ ವಿತರಿಸಿದರು. ಮಾಹಿತಿ ಅರಿತ ಸ್ಥಳೀಯ ಪೊಲೀಸರು ಸ್ಥಳದಲ್ಲಿದ್ದು, ಸಂಭ್ರಮಾಚರಣೆ ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡಬಾರದು, ಪಟಾಕಿ ಸಿಡಿಸಿ ಪ್ರಚೋದನೆ ನೀಡಬಾರದು ಎಂದು ಸೂಚಿಸಿದ್ದು ಕಂಡು ಬಂತು.