Advertisement

ತೀರ್ಪು ಸಂವಿಧಾನ ತತ್ವಗಳಿಗೆ ವಿರುದ್ಧ

11:32 PM Feb 10, 2020 | Team Udayavani |

ಬೆಂಗಳೂರು: ಎಸ್ಸಿ, ಎಸ್ಟಿ ವರ್ಗಗಳಿಗೆ ನೇಮಕಾತಿ ಹಾಗೂ ಬಡ್ತಿಯಲ್ಲಿ ಮೀಸಲಾತಿ ನೀಡುವುದು ರಾಜ್ಯ ಸರ್ಕಾರಗಳ ವಿವೇಚನಾಧಿಕಾರದ ವ್ಯಾಪ್ತಿಗೆ ಬರುವುದಿಲ್ಲ ಹಾಗೂ ಮೀಸಲಾತಿ ಮೂಲಭೂತ ಹಕ್ಕು ಅಲ್ಲ ಎಂದು ಸುಪ್ರೀಂಕೋರ್ಟ್‌ ಹೇಳಿರು ವುದು ಸಂವಿಧಾನದ ಮೂಲ ಆಶಯ ಮತ್ತು ಸಾಮಾಜಿಕ ನ್ಯಾಯದ ತತ್ವಕ್ಕೆ ವಿರುದ್ಧವಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ವಿಧಾನಸೌಧದಲ್ಲಿ ವಿರೋಧಪಕ್ಷದ ನಾಯಕರ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುಪ್ರೀಂಕೋರ್ಟ್‌ನ ಈ ತೀರ್ಪು ಎಸ್ಸಿ, ಎಸ್ಟಿ ಹಾಗೂ ಒಬಿಸಿ ವರ್ಗಗಳಿಗೆ ಆಘಾತ ಉಂಟು ಮಾಡಿದೆ. ಇದರಿಂದ ಸಂವಿಧಾನದ ಮೂಲ ತತ್ವಗಳಿಗೆ ಧಕ್ಕೆ ಬರಲಿದ್ದು, ಸಾಮಾಜಿಕ ಅಸಮಾನತೆ ಇನ್ನೂ ಹೆಚ್ಚುತ್ತದೆ ಎಂದರು.

ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಸುಪ್ರೀಂಕೋರ್ಟ್‌ ತೀರ್ಪು ನೀಡಿರುವುದರಿಂದ ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಮರುಪರಿಶೀಲನಾ ಅರ್ಜಿ ಅಥವಾ ಮೇಲ್ಮನವಿ ಸಲ್ಲಿಸಬೇಕು. ಇದೊಂದು ಸಾಂವಿಧಾನಿಕ ವಿಷಯ ಆಗಿರುವುದರಿಂದ ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠಕ್ಕೆ ಈ ಪ್ರಕರಣ ವರ್ಗಾಯಿಸುವ ಬಗ್ಗೆಯೂ ಕೇಂದ್ರ ಸರ್ಕಾರ ಅಗತ್ಯ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಉತ್ತರಾಖಂಡ ರಾಜ್ಯ ಸರ್ಕಾರದ ದಾವೆಯಲ್ಲಿ ಸುಪ್ರೀಂಕೋರ್ಟ್‌ ಈ ತೀರ್ಪು ನೀಡಿದೆ. ಸರ್ಕಾರದ ಪರ ವಕೀಲರು ಸಮರ್ಥವಾಗಿ ವಾದ ಮಂಡಿಸದ ಕಾರಣ ಈ ರೀತಿಯ ತೀರ್ಪು ಬಂದಿದೆ ಅನ್ನುವುದು ನನ್ನ ಅಭಿಪ್ರಾಯ. ಈಗಾಗಲೇ ಮೀಸಲಾತಿ ಮರುಪರಿಶೀಲನೆ, ಸಂವಿಧಾನ ಬದಲಾವಣೆ ಬಗ್ಗೆ ಬಿಜೆಪಿ ನಾಯಕರು, ಆರೆಸ್ಸೆಸ್‌ ಪ್ರಮುಖರು ಹಲವು ಬಾರಿ ಮಾತನಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌ನಿಂದ ಈ ರೀತಿಯ ತೀರ್ಪು ಬಂದರೆ, ಕೇಂದ್ರ ಸರ್ಕಾರ ಸೇರಿದಂತೆ ಮೀಸಲಾತಿ ಬಗ್ಗೆ ಬದ್ಧತೆ ಇಲ್ಲದ ಬಿಜೆಪಿ ಆಡಳಿತದ ರಾಜ್ಯಗಳು ಅದನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದರು.

ಪ್ರಧಾನಿ ಸರ್ವಪಕ್ಷ ಸಭೆ ಕರೆಯಲಿ: ಬಿಜೆಪಿಗೆ ನಿಜವಾಗಿ ಸಂವಿಧಾನ ಹಾಗೂ ಸಾಮಾಜಿಕ ನ್ಯಾಯದಲ್ಲಿ ಬದ್ಧತೆ ಇದ್ದರೆ ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶ ಮಾಡಬೇಕು. ಕೂಡಲೇ ಪ್ರಧಾನಿಗಳು ಸರ್ವಪಕ್ಷ ಸಭೆ ಕರೆಯಬೇಕು. ಅಲ್ಲದೇ ಎಸ್ಸಿ, ಎಸ್ಟಿ, ಒಬಿಸಿ ಸೇರಿದಂತೆ ಮೀಸಲಾತಿ ವ್ಯಾಪ್ತಿಗೆ ಬರುವ ವರ್ಗಗಳ ಸಂಸದರರ ಜೊತೆಗೆ ಮಾತುಕತೆ ನಡೆಸಬೇಕು. ಮೀಸಲಾತಿ ವ್ಯವಸ್ಥೆಯನ್ನು ಶಿಥಿಲಗೊಳ್ಳಲು ಕಾಂಗ್ರೆಸ್‌ ಪಕ್ಷ ಅವಕಾಶ ನೀಡುವುದಿಲ್ಲ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ನಿರ್ಲಕ್ಷ್ಯ ತೋರಿದರೆ ಕಾಂಗ್ರೆಸ್‌ ಬೀದಿಗಳಿದು ಹೋರಾಟ ಮಾಡಲಿದೆ ಎಂದು ಇದೇ ವೇಳೆ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

Advertisement

ದರಿದ್ರ ಸರ್ಕಾರ ಹೇಳಿಕೆ: ಸಮರ್ಥನೆ
ಬೆಂಗಳೂರು: ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದ “ದರಿದ್ರ ಸರ್ಕಾರ’ ಎಂಬ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ನನ್ನದು ಮಾನಹಾನಿಕಾರಕ ಹೇಳಿಕೆ ಎಂದಾದರೆ ಯಡಿಯೂರಪ್ಪನವರು ನನ್ನ ಮೇಲೆ ಕೇಸ್‌ ಹಾಕಲಿ ಎಂದು ಸವಾಲು ಹಾಕಿದ್ದಾರೆ. ವಿಧಾನಸೌಧದಲ್ಲಿ ಸೋಮವಾರ ಸುದ್ದಿ ಗಾರರೊಂದಿಗೆ ಮಾತನಾಡಿ, ಶಾಸಕರ ಅನುದಾನದ ಮೂರು ಕಂತಿನ ಹಣ ಬಿಡುಗಡೆ ಆಗಿಲ್ಲ, ಶಿಕ್ಷಕರಿಗೆ ವೇತನ ಸಿಕ್ಕಿಲ್ಲ, ಫೆ.15ರಿಂದ ಖಜಾನೆ ಯಿಂದ ಹಣ ಡ್ರಾ ಮಾಡಿಕೊಳ್ಳಲು ಅವಕಾಶವಿಲ್ಲ.

ಇಂತಹ ಪರಿಸ್ಥಿತಿ ಇರುವಾಗ ಇದನ್ನು ದರಿದ್ರ ಸರ್ಕಾರವಲ್ಲದೆ ಇನ್ನೇನು ಹೇಳಬೇಕು? ಖಜಾನೆ ತುಂಬಿ ತುಳುಕುತ್ತಿದೆ, ಬಿಎಸ್‌ವೈ ನೇತೃತ್ವದಲ್ಲಿ ಸಮೃದ್ಧ ಸರ್ಕಾರ ನಡಿತಿದೆ ಎಂದು ಕರೆಯಬೇಕಾ ಎಂದು ವ್ಯಂಗ್ಯವಾಡಿದರು. ಪ್ರವಾಹ ಸಂತ್ರಸ್ತರಿಗೆ ಪೂರ್ಣ ಪರಿಹಾರ ನೀಡಿಲ್ಲ. ನರೇಗಾ ಯೋಜನೆ ಅನುದಾನ ಕಡಿತಗೊಳಿಸಲಾಗಿದೆ. ಕೇಂದ್ರದ ಬಾಕಿ ಬಂದಿಲ್ಲ. ಈ ಬಗ್ಗೆ ಯಡಿಯೂರಪ್ಪ ಎಂದಾದರೂ ಮಾತನಾಡಿ ದ್ದಾರಾ? ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರಾ? ರಾಜ್ಯದ 25 ಸಂಸದರು ಪ್ರಯತ್ನಿಸಿದ್ದಾರಾ?

ತಮ್ಮದು ದರಿದ್ರ ಸರ್ಕಾರ ಅಲ್ಲದಿದ್ದರೆ, ಹಣಕಾಸು ಪರಿಸ್ಥಿತಿ ಹೇಗಿದೆ ಎಂದು ಯಡಿಯೂ ರಪ್ಪನ ವರು ಸ್ಪಷ್ಟಪಡಿಸಲಿ. ಅದು ಬಿಟ್ಟು ಬುರುಡೆ ಹೊಡ್ಕೊಂಡು ಸುತ್ತಾಡ್ತಾ ಇದ್ದಾರೆ ಎಂದು ವಾಗ್ಧಾಳಿ ನಡೆಸಿದರು. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಹಣಕಾಸಿನ ಪರಿಸ್ಥಿತಿ ಚೆನ್ನಾಗಿತ್ತು. ಯಾವ ಯೋಜನೆಗಳನ್ನು ತಡೆ ಹಿಡಿದಿರಲಿಲ್ಲ. ಬಜೆಟ್‌ನಲ್ಲಿ ಮೀಸಲಿಟ್ಟ ಅಷ್ಟೂ ಹಣವನ್ನು ಬಿಡುಗಡೆ ಮಾಡಲಾಗಿದೆ. ನಮ್ಮ ಸರ್ಕಾರ ವಿತ್ತೀಯ ಶಿಸ್ತು ಕಾಪಾಡಿಕೊಂಡಿತ್ತು. ಆದರೆ, ಈಗಿನ ಸರ್ಕಾರದಲ್ಲಿ ಪರಿಸ್ಥಿತಿ ಹಾಗಿಲ್ಲ. ಬಜೆಟ್‌ ಅಧಿವೇಶನದಲ್ಲಿ ಈ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next