Advertisement

ಗೊತ್ತು ಗುರಿ ಇಲ್ಲದ ಪಯಣ

05:40 PM Aug 31, 2018 | |

ಮನೆಯಲ್ಲಿ ಫೋನ್‌ ರಿಂಗಾಗುತ್ತದೆ. ದೇವರ ಕೋಣೆಯಲ್ಲಿದ್ದ ತಂದೆ, “ಶರತ್‌’ ಎಂದು ಕೂಗುತ್ತಾರೆ. ಕಟ್‌ ಮಾಡಿದರೆ ಕ್ಯಾಮರಾ ಹೀರೋ ಕಾಲಿಗೆ ಫೋಕಸ್‌ ಆಗುತ್ತದೆ. ಹಾಗೆ ಮೇಲಕ್ಕೆ ಬಂದು ಹೀರೋ ಮುಖಪಕ್ಕ ಬಂದು ನಿಲ್ಲುತ್ತದೆ. ಅತ್ಯಾಚಾರವೆಸಗಲು ಮುಂದಾಗಿದ್ದ ಗ್ಯಾಂಗ್‌ವೊಂದನ್ನು ನಾಯಕ ಎರ್ರಾಬಿರ್ರಿ ಹೊಡೆದು ಪಟಪಟನೇ ನಾಲ್ಕು ಡೈಲಾಗ್‌ ಉದುರಿಸುತ್ತಾನೆ. “ನನ್ನ ಹಿಂದೆ ಇಡೀ ದೇಶದ ಅಮ್ಮಂದಿರು, ಅಕ್ಕಂದಿರು ಇದ್ದಾರೆ’ ಎನ್ನುವಲ್ಲಿಗೆ ಫೈಟ್‌ ಮುಕ್ತಾಯ.

Advertisement

ಇದು “ಆರೋಹಣ’ ಸಿನಿಮಾದ ನಾಯಕನ ಇಂಟ್ರೋಡಕ್ಷನ್‌. ಇಷ್ಟು ಹೇಳಿದ ಮೇಲೆ ಮುಂದಿನ ಇಡೀ ಸಿನಿಮಾವನ್ನು ಊಹಿಸಿಕೊಳ್ಳೋದು ನಿಮಗೆ ಕಷ್ಟದ ಕೆಲಸವೇನಲ್ಲ. “ಆರೋಹಣ’ ಚಿತ್ರದ ಮೂಲಕ ಸುಶೀಲ್‌ ಹೀರೋ ಆಗಿದ್ದಾರೆ. ಅವರಿಗೆ ಮೊದಲ ಚಿತ್ರದಲ್ಲಿ ಎಲ್ಲಾ ರೀತಿಯಲ್ಲೂ ಮಿಂಚಬೇಕೆಂಬ ಅದಮ್ಯ ಆಸೆ. ಆ ಕಡೆ ಫೈಟ್‌ ಮಾಡಬೇಕು, ಈ ಕಡೆ ಡ್ಯಾನ್ಸ್‌ ಮಾಡಬೇಕು, ಲವ್‌, ಸೆಂಟಿಮೆಂಟ್‌, ಹಾರರ್‌ ಫೀಲ್‌ … ಎಲ್ಲವನ್ನು ಒಂದೇ ಚಿತ್ರದಲ್ಲಿ ಪ್ರೇಕ್ಷಕರಿಗೆ ದಯಪಾಲಿಸಬೇಕೆಂಬ ಅವರ ಉತ್ಸಾಹದ ಪರಿಣಾಮ ಚಿತ್ರ ಗಾಳಿಪಟದಂತಾಗಿದೆ.

ನಾಯಕನ ಉತ್ಸಾಹಕ್ಕೆ ಸ್ಪರ್ಧೆಯೊಡ್ಡುವ ಮಟ್ಟಿಗೆ ಚಿತ್ರದಲ್ಲಿ “ಕುಣಿ’ದಾಡಿದವರು, ಜನ ನಗಬಹುದೆಂಬ ವಿಶ್ವಾಸದೊಂದಿಗೆ ಕಾಮಿಡಿ ಮಾಡಿದವರು ಚಿತ್ರದ ನಿರ್ದೇಶಕ ಶ್ರೀಧರ್‌ ಶೆಟ್ಟಿ. ಕಾಮಿಡಿಯಲ್ಲಿನ ಅವರ ಉತ್ಸಾಹವನ್ನು ಮೆಚ್ಚಲೇಬೇಕು. ಅದೇ ಉತ್ಸಾಹ ಕಥೆ, ನಿರೂಪಣೆಯಲ್ಲಿ ತೋರಿದ್ದರೆ “ಆರೋಹಣ’ಕ್ಕೊಂದು ಒಳ್ಳೆಯ ರೂಪ ಸಿಗುತ್ತಿತ್ತು. ಆದರೆ, ಅವರ ತೆರೆಮುಂದೆ ಬಿಝಿಯಾದ ಕಾರಣ, ತೆರೆಹಿಂದಿನ ಕೆಲಸಗಳು ಸತ್ವ ಕಳೆದುಕೊಂಡಿವೆ.

ಎಲ್ಲಾ ಓಕೆ, “ಆರೋಹಣ’ದ ಕಥೆ ಏನು, ನಿರ್ದೇಶಕರು ಏನು ಹೇಳಲು ಹೊರಟಿದ್ದಾರೆಂದು ನೀವು ಕೇಳಬಹುದು. ಇಡೀ ಸಿನಿಮಾವನ್ನು ಒನ್‌ಲೈನ್‌ನಲ್ಲಿ ವಿವರಿಸೋದು ತುಂಬಾ ಕಷ್ಟದ ಕೆಲಸ. ಇಲ್ಲಿ ಕಥೆ ಯಾವುದೇ ಒಂದು ಅಂಶದ ಮೇಲೆ ಫೋಕಸ್‌ ಆಗಿಲ್ಲ. ಅತ್ತ ಕಡೆ ಲವ್‌, ಇತ್ತ ಕಡೆ ಹಾರರ್‌, ಮತ್ತೂಂದು ಕಡೆ ನಾಯಕನ ಫ್ಲ್ಯಾಶ್‌ಬ್ಯಾಕ್‌ … ಹೀಗೆ ಹಲವು ವಿಷಯಗಳನ್ನು ಒಟ್ಟಿಗೆ ಸೇರಿಸಿ ಚಿತ್ರ ಮಾಡಿದ್ದಾರೆ. ಹಾಗಾಗಿಯೇ ಇಲ್ಲಿ ಯಾವುದೇ ಒಂದು ನಿರ್ದಿಷ್ಟ ಅಂಶ ಗಮನ ಸೆಳೆಯುವುದಿಲ್ಲ.

ಚಿತ್ರದ ಕೆಲವು ಸನ್ನಿವೇಶಗಳಿಗೆ ಲಾಜಿಕ್‌ ಹುಡುಕಲು ಹೋಗದಿರುವುದೇ ಒಳಿತು. ಅದಕ್ಕಿಂತ ಹೆಚ್ಚಾಗಿ ಇಡೀ ಸಿನಿಮಾವನ್ನು ಮನೆಯೊಂದರಲ್ಲಿ ಕಟ್ಟಿಕೊಡಲಾಗಿದೆ. ಹಾಗಾಗಿ, ನಿಮಗೆ ಇಲ್ಲಿ ಹೊಸ “ಲೊಕೇಶನ್‌ ಭಾಗ್ಯ’ವೂ ಇಲ್ಲ. ಹೊಸ ನಟ-ನಟಿಯರಿಂದ ನಟನೆ ತೆಗೆಸುವ ಜವಾಬ್ದಾರಿ ನಿರ್ದೇಶಕರಿಗಿರುತ್ತದೆ. ಆದರೆ, ಆ ವಿಷಯದಲ್ಲಿ ನಿರ್ದೇಶಕರು ವಿಫ‌ಲವಾಗಿದ್ದಾರೆ. ನಿರ್ದೇಶಕರ ಕಾಮಿಡಿ ಪ್ರೀತಿ ಹೆಚ್ಚಾಗಿ, ಕಥೆಯನ್ನು ಬದಿಗೆ ಸರಿಸಿ ಕಾಮಿಡಿ ದೃಶ್ಯಗಳು ನಲಿದಾಡುತ್ತವೆ. 

Advertisement

ಮೊದಲ ಬಾರಿಗೆ ನಾಯಕರಾಗಿ ನಟಿಸಿರುವ ಸುಶೀಲ್‌ಗೆ ತಕ್ಕಮಟ್ಟಿಗೆ ನಟಿಸಲು ಪ್ರಯತ್ನಿಸಿದ್ದಾರೆ. ಒಂದೇ ಚಿತ್ರದಲ್ಲಿ ಎಲ್ಲವನ್ನು ಮೈಮೇಲೆ ಎಳೆದುಕೊಂಡ ಪರಿಣಾಮ, ಸಹಜವಾಗಿಯೇ ಅವರ ಮುಖದ ಗೊಂದಲ ಎದ್ದು ಕಾಣುತ್ತದೆ. ಅದರ ಬದಲು ಯಾವುದಾದರೂ ಒಂದು ಅಂಶದ ಬಗ್ಗೆ ಗಮನಹರಿಸಿದರೆ ಒಳ್ಳೆಯದು. ಉಳಿದಂತೆ ನಾಯಕಿ ಪ್ರೀತಿ ಸೇರಿದಂತೆ ಇತರರು ಚಿತ್ರದಲ್ಲಿದ್ದಾರೆ.

ಚಿತ್ರ: ಆರೋಹಣ
ನಿರ್ಮಾಣ: ಸುಶೀಲ್‌ ಕುಮಾರ್‌
ನಿರ್ದೇಶನ: ಶ್ರೀಧರ್‌ ಶೆಟ್ಟಿ
ತಾರಾಗಣ: ಸುಶೀಲ್‌ ಕುಮಾರ್‌, ರೋಹಿತ್‌ ಶೆಟ್ಟಿ, ಪ್ರೀತಿ, ಶ್ರೀಧರ್‌ ಶೆಟ್ಟಿ, ರುದ್ರೇಗೌಡ, ಉಮೇಶ್‌ ಪುಂಗ ಮತ್ತಿತರರು.

* ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next