ಕನಕಪುರ: ಭಾರತದ ಮಹಾನ್ ಗ್ರಂಥಗಳಲ್ಲಿ ಒಂದಾದ ಶ್ರೀರಾಮಾಯಣ ದರ್ಶನಂ ರಚಿಸಲು ರಾಷ್ಟ್ರಕವಿ ಕುವೆಂಪು 10 ವರ್ಷ ವ್ಯಯಿಸಿ, 24 ಸಾವಿರ ಸಹಸ್ರಸಾಲುಗಳ ಬೃಹತ್ ಕಾವ್ಯವನ್ನು ಛಂದಸ್ಸುಗಳ ಮೂಲಕ ಬರೆದು ನಾಡಿನ ಹೆಮ್ಮೆಯ ಕವಿಯಾಗಿ ಇಂದಿಗೂ ನಮ್ಮಲ್ಲಿ ಉಳಿದುಕೊಂಡಿದ್ದಾರೆ ಎಂದು ನಿವೃತ್ತ ಪ್ರಾಧ್ಯಾಪಕ ಕೆ.ಬಿ.ಶ್ರೀಕಾಂತ್ ಹೇಳಿದರು.
ನಗರದ ರೂರಲ್ ಪದವಿ ಕಾಲೇಜಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಸಹೃದಯ ಬಳಗ ಆಯೋಜಿಸಿದ್ದ ಕನ್ನಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಬದುಕು-ಬರಹ- ಚಿಂತನ ಮಾಲೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಉಪನ್ಯಾಸ ನೀಡಿದರು.
ರಾಷ್ಟ್ರಕವಿ ಕುವೆಂಪು ಅವರ ಓದುವ ಸಮಯದಲ್ಲಿದ್ದ ಟಿ.ಎಸ್.ವೆಂಕಣ್ಣಯ್ಯ, ಬಿ.ಎಂ.ಶ್ರೀ., ಎ.ಆರ್.ಕೃಷ್ಣಶಾಸ್ತ್ರಿಗಳು ಗುರುಗಳಾಗಿ, ಕಾವ್ಯ ಪರಂಪರೆಯನ್ನು ತಮ್ಮ ವಿದ್ಯಾರ್ಥಿಗಳಿಗೆ ಅಂದಿನಿಂದಲೇ ಬೋಧಿಸುತ್ತಿದ್ದರು. ಅಂತಹ ಗುರುಗಳಿಂದ ಶಿಕ್ಷಣ ಪಡೆದ ಕುವೆಂಪು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಕೊಡುಗೆ ನೀಡುವ ಮೂಲಕ ಪ್ರಕೃತಿಯ ಕವಿಯಾಗಿ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದರು ಎಂದರು.
ಯುವಪೀಳಿಗೆಗೆ ಪರಿಚಯಿಸುತ್ತಿದೆ: ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಸಿಂ.ಲಿಂ.ನಾಗರಾಜು ಮಾತನಾಡಿ, ನಮ್ಮ ನಾಡು ನುಡಿ ಮತ್ತು ಮಾತೃಭಾಷೆಯಲ್ಲಿ ದೇಶದ ಅತಿ ಹೆಚ್ಚು ಜ್ಞಾನ ಪೀಠಪ್ರಶಸ್ತಿಗಳನ್ನು ಪಡೆದು ಶ್ರೀಮಂತಗೊಳಿಸಿದ ಕವಿವರ್ಯರನ್ನು ಇಂದಿನ ಪೀಳಿಗೆಗೆ ಅವರ ಜೀವನದ ಯಶೋಗಾಥೆ ಪರಿಚಯಿಸುವ ಮೂಲಕ ಕನ್ನಡ ನಾಡಿನ ಕವಿಗಳು ದೇಶದ ಸಾಹಿತ್ಯ ಕ್ಷೇತ್ರಕ್ಕೆ ಮಾದರಿಯಾಗಿದ್ದರು ಎಂಬುದನ್ನು ಯುವ ಪೀಳಿಗೆಗೆ ಪರಿಚಯಿಸುವ ಕಾಯಕವನ್ನು ಕನ್ನಡ ಸಾಹಿತ್ಯ ಪರಿಷತ್ ಮಾಡುತ್ತಿದೆ ಎಂದರು.
ಜಿಲ್ಲೆಯ ನಾಲ್ಕು ತಾಲೂಕುಗಳ ಕವಿಗಳ ಬದುಕು- ಬರಹ ಸೇರಿದಂತೆ ಅವರ ಜೀವನ ಚರಿತ್ರೆಯನ್ನು ಇಂದಿನ ಭಾವಿ ಪ್ರಜೆಗಳಿಗೆ ತಿಳಿಸಿ ನಾಡಿನ ಮಾತೃಭಾಷೆಯನ್ನು ಉಳಿಸಿ ಬೆಳೆಸುವಂತೆ ಪ್ರೇರೇಪಿಸುವುದು ಆದ್ಯ ಕರ್ತವ್ಯ ಎಂದು ಹೇಳಿದರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಶಿವಕುಮಾರ್ ಆಶಯ ಭಾಷಣ ಮಾಡಿದರು. ಕಸಾಪ ತಾಲೂಕು ಅಧ್ಯಕ್ಷ ಆರ್.ವಿ.ನಾರಾಯಣ್, ರೂರಲ್ ಪದವಿ ಕಾಲೇಜಿನ ಪ್ರಾಂಶುಪಾಲ ವಿಕ್ರಂ, ವಿದ್ಯಾಸಂಸ್ಥೆಯ ಸಿ.ರಮೇಶ್, ಜಿಲ್ಲಾ ಲೇಖಕರ ವೇದಿಕೆ ಅಧ್ಯಕ್ಷ ಕೂ.ಗಿ.ಗಿರಿಯಪ್ಪ, ಎಲ್ಲೇಗೌಡ ಬೆಸಗರಹಳ್ಳಿ ಉಪಸ್ಥಿತರಿದ್ದರು.