Advertisement

ಜೆಡಿಎಸ್‌-ಕಾಂಗ್ರೆಸ್‌ ಖಾತೆ ತೆರೆಯಲ್ಲ 

10:53 PM Nov 29, 2019 | Team Udayavani |

ಬೆಂಗಳೂರು: ಉಪಚುನಾವಣೆಯಲ್ಲಿ ಬಿಜೆಪಿ 15 ಸ್ಥಾನಗಳನ್ನೂ ಗೆಲ್ಲಲಿದೆ. ಮುಂದಿನ ಮೂರೂವರೆ ವರ್ಷ ಬಿಜೆಪಿ ಸರ್ಕಾರ ಸುಭದ್ರವಾಗಿರಲಿದ್ದು, ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿರಲಿದ್ದಾರೆ. ಕಾಂಗ್ರೆಸ್‌, ಜೆಡಿಎಸ್‌ಗೆ ಒಂದೂ ಸ್ಥಾನ ಗೆಲ್ಲುವ ತಾಕತ್ತಿಲ್ಲ. ಎರಡೂ ಪಕ್ಷ ಖಾತೆಯನ್ನೇ ತೆರೆಯುವುದಿಲ್ಲ. ಫ‌ಲಿತಾಂಶದ ಬಳಿಕ ಕಾಂಗ್ರೆಸ್‌ ಅಡ್ರೆಸ್‌ ಇಲ್ಲದಂತಾಗುತ್ತದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

Advertisement

ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ 12 ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದು, ಎಲ್ಲೆಡೆ ವಾತಾವರಣ ಚೆನ್ನಾಗಿದೆ. ಜನ ಬಿಜೆಪಿ ಪರವಾಗಿದ್ದಾರೆ ಎಂದರು. ಸಿದ್ದರಾಮಯ್ಯ ಅವರು ಕೀಳು ಮಟ್ಟದ ಭಾಷೆಯಲ್ಲಿ ಆರೋಪಿಸುತ್ತಿದ್ದಾರೆ. ಅಂತಹ ಭಾಷೆ ಅವರ ಹಿರಿತನ, ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ. ಅವರು ಕೂಡಲೇ ರಾಜ್ಯದ ಜನರ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ನಲ್ಲಿ ಶಾಮನೂರು ಶಿವಶಂಕರಪ್ಪ, ಎಂ.ಬಿ.ಪಾಟೀಲ್‌, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ್‌, ಡಿ.ಕೆ.ಶಿವಕುಮಾರ್‌ ಹೀಗೆ ಹಲವು ಗುಂಪುಗಳಾಗಿವೆ. ಹಾಗಾಗಿ, ಒಟ್ಟಿಗೆ ಪ್ರಚಾರ ಮಾಡುತ್ತಿಲ್ಲ. ಇದರಿಂದಾಗಿ ಸಿದ್ದರಾಮಯ್ಯ ಹಾಗೂ ಮಾಜಿ ಸ್ಪೀಕರ್‌ ಕೆ.ಆರ್‌.ರಮೇಶ್‌ ಕುಮಾರ್‌ ಅವರು ಆತಂಕಗೊಂಡಂತಿದೆ ಎಂದು ಹೇಳಿದರು.

ಕಣ್ಣೀರು ಯಾಕೆ?: ಎಚ್‌.ಡಿ. ಕುಮಾರಸ್ವಾಮಿ ಅವರು ಯಾಕೆ ಕಣ್ಣೀರು ಹಾಕುತ್ತಾರೋ ಗೊತ್ತಾಗುವುದಿಲ್ಲ. ಕಿರಿಯ ವಯಸ್ಸಿನಲ್ಲೇ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾರೆ, ಸಂಸದರಾಗಿದ್ದಾರೆ. ಜನ ಅವರಿಗೆ ಸಾಕಷ್ಟು ಅವಕಾಶವನ್ನೂ ನೀಡಿದ್ದಾರೆ. ಅವರು ಕಣ್ಣೀರು ಹಾಕುವ ಪ್ರಮೇಯವೇ ಇಲ್ಲ. ಅವರು ಆನಂದವಾಗಿರಬೇಕು. ಯಾವುದೇ ರೀತಿಯಲ್ಲಿ ಒತ್ತಡ ಮಾಡಿಕೊಳ್ಳಬಾರದು ಎಂದರು.

ಹೊಸಪೇಟೆಯಲ್ಲಿ ಸಿದ್ದರಾಮಯ್ಯ ಅವರು ಆನಂದ್‌ ಸಿಂಗ್‌ ಮಾರಾಟವಾಗಿದ್ದಾರೆ ಎಂದಿದ್ದಾರೆ. ಹಾಗಾದರೆ, ಸಿದ್ದರಾಮಯ್ಯ ಅವರು ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದಾಗ ಅವರನ್ನು ಯಾರು ಖರೀದಿಸಿದ್ದರು ಎಂಬ ಪ್ರಶ್ನೆ ಮೂಡುತ್ತದೆ. 30- 40 ಕೋಟಿ ರೂ. ನೀಡಿದ್ದಾರೆ ಎಂದು ಸಿದ್ದಾರಾಮಯ್ಯ ಅವರು ದೂರುತ್ತಾರೆ. ಯಾರು, ಯಾರಿಗೆ ಹಣ ಕೊಟ್ಟರು ಎಂದು ಹೇಳಬೇಕಲ್ಲ. ಹಾಗಾದರೆ ಮೈತ್ರಿ ಸರ್ಕಾರದ 15 ತಿಂಗಳ ಆಡಳಿತದಲ್ಲೂ ಅವರು ಕೊಟ್ಟು -ತೆಗೆದುಕೊಳ್ಳುವುದನ್ನು ಮಾಡಿದ್ದಾರೆಯೇ ಎಂದು ಪ್ರಶ್ನಿಸಬೇಕಾಗುತ್ತದೆ ಎಂದರು.

Advertisement

ರಮೇಶ್‌ ಕುಮಾರ್‌ ಹೇಳಿಕೆ ತರವಲ್ಲ: ರಮೇಶ್‌ ಕುಮಾರ್‌ ಅವರು ಅನರ್ಹರನ್ನು ಪಾದರಕ್ಷೆಗೆ ಹೋಲಿಕೆ ಮಾಡಿ ಮಾತನಾಡಿರುವುದು ಸರಿಯಲ್ಲ. ರಾಜಕೀಯದಲ್ಲಿ ಯಾರೂ ಪರಿಶುದ್ಧರಲ್ಲ. ರಮೇಶ್‌ ಕುಮಾರ್‌ರಂತಹವರು ಹೀಗೆ ಮಾತನಾಡುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಹೇಳಿದರು. ಚುನಾವಣಾ ಸಮೀಕ್ಷೆಯಲ್ಲಿ ಪಕ್ಷಕ್ಕೆ ತುಸು ಹಿನ್ನಡೆಯಾಗುವ ಸಾಧ್ಯತೆ ಕುರಿತಾದ ಪಕ್ಷದ ಆಂತರಿಕ ಸಮೀಕ್ಷಾ ಮಾಹಿತಿ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಾರಜೋಳ, ನಮಗೆ ಯಾವುದೇ ಆತಂಕವಿಲ್ಲ. 15 ಸ್ಥಾನವನ್ನೂ ಗೆಲ್ಲುತ್ತೇವೆ.

ಹಿಂದೆಲ್ಲಾ ಬಿಜೆಪಿ ಮೇಲ್ವರ್ಗದವರ, ವ್ಯಾಪಾರಿಗಳ, ಬ್ರಾಹ್ಮಣರ ಪಕ್ಷ ಎಂಬಂತ್ತಿತ್ತು. ಇಂದು ದಲಿತ ಸಮುದಾಯದ ವಿದ್ಯಾವಂತರಿಗೆ ಕಾಂಗ್ರೆಸ್‌ನ ಮೋಸ ಗೊತ್ತಾಗಿದೆ. ಹಾಗಾಗಿ ಹಿಂದುಳಿದವರು, ದಲಿತರು ಕಾಂಗ್ರೆಸ್‌ನಿಂದ ದೂರ ಸರಿದಿದ್ದಾರೆ. ಅಲ್ಪಸಂಖ್ಯಾತರು ಕ್ರಮೇಣ ಹಿಂದೆ ಸರಿಯುತ್ತಿದ್ದಾರೆ. ಹಾಗಾಗಿ ಬಿಜೆಪಿ ಎಲ್ಲರನ್ನು ಒಳಗೊಂಡು ಯಶಸ್ಸು ಕಾಣುತ್ತಿದೆ ಎಂದು ತಿಳಿಸಿದರು. ಸಂಸದ ಎ.ನಾರಾಯಣಸ್ವಾಮಿ, ಶಾಸಕ ಎಂ.ಪಿ.ಕುಮಾರಸ್ವಾಮಿ, ರಾಜ್ಯ ಬಿಜೆಪಿ ಮಾಧ್ಯಮ ಸಂಚಾಲಕ ಎ.ಎಚ್‌.ಆನಂದ್‌ ಉಪಸ್ಥಿತರಿದ್ದರು.

ನಾನು ಹಣ ಹಂಚಿ ಶಾಸಕನಾದವನಲ್ಲ. ಅಥಣಿಯಲ್ಲಿ ಪ್ರಚಾರ ಮುಗಿಸಿ ಕಾಗವಾಡಕ್ಕೆ ಹೋಗಲು ಕಾರಿಗೆ ಡೀಸೆಲ್‌ ಹಾಕಿಸಿಕೊಂಡು ಬರು ವಂತೆ ಹಣ ಕೊಟ್ಟಿದ್ದೆ. ಅದನ್ನೇ ಬೇರೆ ರೀತಿ ಬಿಂಬಿಸಲಾಯಿತು. ಚುನಾವಣಾ ಆಯೋಗವಾಗಲಿ, ದೇಶದ ಯಾವುದೇ ಸಂಸ್ಥೆಯಿಂದ ತನಿಖೆ ನಡೆಸಿದರೂ ಸ್ವಾಗತಿಸುತ್ತೇನೆ.
-ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next