ಬೆಂಗಳೂರು: “ಆದಾಯ ತೆರಿಗೆ ಇಲಾಖೆ ವಿರುದ್ಧ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಟೀಕೆಗಳು ಕೇಳಿಬರುತ್ತಿವೆ. ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿದೆ ಎಂದೂ ಆರೋಪಿಸಲಾಗುತ್ತಿದೆ. ಆದರೆ, ಇದರಲ್ಲಿ ಯಾವುದೇ ಹುರುಳಿಲ್ಲ. ನಾವು ಯಾವತ್ತೂ ಯಾವೊಂದು ಪಕ್ಷದ ಪರವಾಗಿ ಕೆಲಸ ಮಾಡಿಲ್ಲ ಹಾಗೂ ಮಾಡುವುದೂ ಇಲ್ಲ’ ಎಂದು ಆದಾಯ ತೆರಿಗೆ ಇಲಾಖೆ (ತನಿಖೆ) ಕರ್ನಾಟಕ ಮತ್ತು ಗೋವಾ ಪ್ರಾದೇಶಿಕ ಮಹಾನಿರ್ದೇಶಕ ಹಾಗೂ ಪ್ರಧಾನ ಮುಖ್ಯ ಆಯುಕ್ತ ಬಿ.ಆರ್. ಬಾಲಕೃಷ್ಣನ್ ಸ್ಪಷ್ಟಪಡಿಸಿದರು.
ನಗರದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಮಹಾಸಂಸ್ಥೆ (ಎಫ್ಕೆಸಿಸಿಐ)ಯಲ್ಲಿ ಕರ್ನಾಟಕ ರಾಜ್ಯ ಚಾರ್ಟರ್ಡ್ ಅಕೌಂಟ್ಸ್ ಅಸೋಸಿಯೇಷನ್ ಹಾಗೂ ಐಸಿಎಐ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಒಂದು ರಾಜಕೀಯ ಪಕ್ಷದ ಪರವಾಗಿ ಕೆಲಸ ಮಾಡುತ್ತದೆ ಎನ್ನುವುದು ಸೇರಿದಂತೆ ಹಲವು ಟೀಕೆಗಳನ್ನು ಇಲಾಖೆ ಎದುರಿಸುತ್ತಿದೆ.
ಆದರೆ, ನಿಯಮಬಾಹಿರವಾಗಿ ಆಸ್ತಿ ಗಳಿಸಿದ ವ್ಯಕ್ತಿಯ ವಿರುದ್ಧ ಪಕ್ಷಾತೀತವಾಗಿ ಇಲಾಖೆ ಕಾನೂನು ಕ್ರಮ ಕೈಗೊಂಡಿದೆ. ಅಂತಹವರ ದೊಡ್ಡ ಪಟ್ಟಿಯೇ ಇಲಾಖೆ ಬಳಿ ಇದೆ. ಆದರೆ, ಗೌಪ್ಯತೆ ಕಾಪಾಡಬೇಕಾಗಿರುವುದರಿಂದ ಆ ಪಟ್ಟಿಯನ್ನು ನಾನು ಬಹಿರಂಗಗೊಳಿಸಲು ಆಗುವುದಿಲ್ಲ ಎಂದು ತೀಕ್ಷ್ಣವಾಗಿ ಹೇಳಿದರು.
“ಚುನಾವಣೆಯಲ್ಲಿ ಐಟಿ ಅತ್ಯುತ್ತಮ ಕೆಲಸ’: ರಾಜ್ಯದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮ ಹಣದ ಹರಿವಿಗೆ ಸಾಕಷ್ಟು ಕಡಿವಾಣ ಹಾಕುವಲ್ಲಿ ಇಲಾಖೆ ಸಿಬ್ಬಂದಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದೆ. ಚುನಾವಣೆ ಸಂದರ್ಭದಲ್ಲಿ ಯಾರಿಂದ ಹೇಗೆ ಹಣ ಸಾಗಣೆ ಆಗುತ್ತಿತ್ತು ಎಂಬುದರ ಮಾಹಿತಿಯನ್ನೂ ಇಲಾಖೆ ಕಲೆಹಾಕಿತ್ತು. ಅಷ್ಟೇ ಅಲ್ಲ, ಎಷ್ಟೋ ಗುತ್ತಿಗೆದಾರರಿಂದ ಹಣ ಕೂಡ ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆ ಜಿಲ್ಲಾ ಮಟ್ಟದಲ್ಲಿ ರಚಿಸಿದ್ದ ಐಟಿ ತಂಡಗಳು ತುಂಬಾ ವ್ಯವಸ್ಥಿತವಾಗಿ ಕೆಲಸ ಮಾಡಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ದಂಡ ವಿಧಿಸುವುದು ಹಾಗೂ ವಿಚಾರಣೆಗೊಳಪಡಿಸುವುದರಿಂದ ನಮಗೇನೂ ಖುಷಿ ಸಿಗುವುದಿಲ್ಲ. ಆದರೆ, ತೆರಿಗೆ ವಂಚಿತರ ವಿರುದ್ಧ ಕಾರ್ಯಾಚರಣೆ ಮಾಡುವುದು ನಮ್ಮ ಕೆಲಸ. ದೇಶದ ಐಕ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಈ ಇಲಾಖೆ ಕೆಲಸ ಮಾಡುತ್ತಿದೆ. ಹಾಗಾಗಿ, ಯಾರನ್ನೂ “ಟಾರ್ಗೆಟ್’ ಮಾಡುವ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದರು.
ಎಫ್ಕೆಸಿಸಿಐ ಅಧ್ಯಕ್ಷ ಕೆ. ರವಿ, ಜಿಎಸ್‌ಟಿ ತಂಡದ ಅಧ್ಯಕ್ಷ ಐ.ಎಸ್. ಪ್ರಸಾದ್, ಹಿರಿಯ ಉಪಾಧ್ಯಕ್ಷ ಸಿ.ಆರ್. ಜನಾರ್ದನ್, ದಕ್ಷಿಣ ಭಾರತದ ಪ್ರಾದೇಶಿಕ ಪರಿಷತ್ತಿನ ಭಾರತೀಯ ಲೆಕ್ಕಪರಿಶೋಧಕರ ಸಂಘದ ಬೆಂಗಳೂರು ಶಾಖೆ ಅಧ್ಯಕ್ಷ ಶ್ರವಣ್ ಗುಡತೂರ್, ರಾಜ್ಯ ಲೆಕ್ಕಪರಿಶೋಧಕರ ಸಂಘದ ಅಧ್ಯಕ್ಷ ಟಿ.ಎನ್. ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.
ಪ್ರಸಕ್ತ ಸಾಲಿನಲ್ಲಿ ಕರ್ನಾಟಕದಲ್ಲಿ 1.23 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹ ಗುರಿ ಇದ್ದು, ಈ ಪೈಕಿ ಕಳೆದ ಎರಡು ತಿಂಗಳಲ್ಲಿ 12 ಸಾವಿರ ಕೋಟಿ ರೂ. ಸಂಗ್ರಹ ಆಗಿದೆ. ಇಲ್ಲಿನ ತೆರಿಗೆ ಸಂಗ್ರಹ ತೃಪ್ತಿಕರವಾಗಿದೆ. ದೇಶದ ಒಟ್ಟಾರೆ ತೆರಿಗೆ ಸಂಗ್ರಹ 11.50 ಲಕ್ಷ ಕೋಟಿ ರೂ. ಇದೆ.
-ಬಿ.ಆರ್. ಬಾಲಕೃಷ್ಣನ್, ಪ್ರಧಾನ ಮುಖ್ಯ ಆಯುಕ್ತ