ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಹನಿ ಹನಿ ನೀರಿಗೂ ಹಾಹಾಕಾರ ಎದುರಾಗಿದೆ. ಬೇಸಿಗೆಗೂ ಮೊದಲೇ ನಾವು ಆತಂಕದ ಕ್ಷಣಗಳನ್ನು ಎದುರಿಸುತ್ತಿದ್ದೇವೆ. ಸರ್ಕಾರ ಜಿಲ್ಲೆಗೆ ರೂಪಿಸಿರುವ ನೀರಾವರಿ ಯೋಜನೆಗಳ ಬಗ್ಗೆ ನಿರ್ಲಕ್ಷ್ಯ ತೋರದೆ ಎತ್ತಿನಹೊಳೆ ಯೋಜನೆಗೆ ಹೆಚ್ಚಿನ ಅನುದಾನ ಒದಗಿಸಬೇಕು ಎಂದು ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಆಗ್ರಹಿಸಿದರು.
ನಗರದ ಪಿಕಾರ್ಡ್ ಬ್ಯಾಂಕ್ ಆವರಣದಲ್ಲಿ ಗುರುವಾರ ಕಂದಾಯ ಇಲಾಖೆ, ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕ ಸಾಧನಗಳು ಹಾಗೂ ಭೂ ಮಂಜೂರಾಗಿ ಹಕ್ಕು ಪತ್ರಗಳನ್ನು ವಿತರಿಸಿ ಮಾತನಾಡಿದ ಅವರು, ಅನುದಾನ ನೀಡಿದಿದ್ದರೆ ಸರ್ಕಾರದ ಕಣ್ಣು ತೆರೆಸುವ ಕೆಲಸವನ್ನು ಈ ಭಾಗದ ರೈತಾಪಿ ಜನರೊಂದಿಗೆ ಸೇರಿ ಮಾಡುತ್ತೇವೆ ಎಂದು ಎಚ್ಚರಿಸಿದರು.
ಹಾಹಾಕಾರ: ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿಯೇ 70 ರಿಂದ 80 ಹಳ್ಳಿಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ. ಕ್ಷೇತ್ರದಲ್ಲಿ 10 ಬೋರ್‌ವೆಲ್ ಕೊರೆದರೆ 4 ರಲ್ಲಿ ಮಾತ್ರ ನೀರು ಸಿಗುತ್ತಿದೆ. ಉಳಿದ 6 ಕೊಳವೆ ಬಾವಿಗಳಲ್ಲಿ ನೀರು ಸಿಗುತ್ತಿಲ್ಲ ಎಂದರು. ಜಿಲ್ಲೆಗೆ ರೂಪಿಸಿರುವ ಎತ್ತಿನಹೊಳೆ ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುತ್ತಿಲ್ಲ.
ಅಗತ್ಯ ಅನುದಾನವನ್ನು ಕೊಡುತ್ತಿಲ್ಲ. ಹಿಂದೆ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಎತ್ತಿನಹೊಳೆಗೆ 3 ಸಾವಿರ ಕೋಟಿ ರೂ. ಅನುದಾನ ನೀಡಿದರು. ಈ ಭಾಗದ ಹೆಬ್ಟಾಳ ನಾಗವಾರ ನೀರಾವರಿ ಯೋಜನೆಗೆ 2 ಸಾವಿರ ಕೋಟಿ ಅನುದಾನ ಕೊಟ್ಟರು. ಈ ಸರ್ಕಾರ ಕನಿಷ್ಠ 2 ಸಾವಿರ ಕೋಟಿ ಅನುದಾನ ನೀಡಿ ಕಾಮಗಾರಿಯನ್ನು ಮುಗಿಸಬೇಕೆಂದು ಆಗ್ರಹಿಸಿದರು.
ವಿವಿಧ ಸೌಲಭ್ಯಗಳ ವಿತರಣೆ: ಕಾರ್ಯಕ್ರಮದಲ್ಲಿ 68 ಜನರಿಗೆ ಬಗರ್‌ಹುಕುಂ ಕಾರ್ಯಕ್ರಮದಡಿ ಸಾಗುವಳಿ ಚೀಟಿ ವಿತರಿಸಲಾಯಿತು. 148 ಜನರಿಗೆ 94ಸಿಸಿ ಹಕ್ಕುಪತ್ರ, 267 ಜನರಿಗೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿಯಲ್ಲಿ ಪಿಂಚಣಿ ಆದೇಶ ಪ್ರತಿ ಹಾಗೂ 460 ಜನರಿಗೆ ಉಚಿತ ಅನಿಲ ಸಂಪರ್ಕ ಸೇರಿದಂತೆ ಸುಮಾರು 950 ಜನ ಫಲಾನುಭವಿಗಳಿಗೆ ವಿವಿಧ ಸರ್ಕಾರದ ಸೌಲಭ್ಯಗಳನ್ನು ವಿತರಿಸಿದರು.
ತಾಪಂ ಅಧ್ಯಕ್ಷ ಬಿ.ಎಂ.ರಾಮುಸ್ವಾಮಿ, ನಗರಸಭೆ ಅಧ್ಯಕ್ಷ ಎಂ.ಮುನಿಕೃಷ್ಣ, ಕೋಚಿಮುಲ್ ನಿರ್ದೇಶಕರಾದ ಕೆ.ವಿ.ನಾಗರಾಜ್, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಯಲುವಹಳ್ಳಿ ಎನ್.ರಮೇಶ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮರಳಕುಂಟೆ ಕೃಷ್ಣಮೂರ್ತಿ, ತಾಪಂ ಸದಸ್ಯರಾದ ತಿರುಮಳಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಮೋಹನ್ ರೆಡ್ಡಿ, ದ್ಯಾವಣ್ಣ, ನಗರಸಭೆ ಸದಸ್ಯರಾದ ಗಜೇಂದ್ರ, ಮಂಜುನಾಥಾಚಾರಿ, ಮುಖಂಡರಾದ ರಾಮ್ ಕುಮಾರ್, ಜೆಸಿಬಿ ಮಂಜು ಇದ್ದರು.