Advertisement

ತನಿಖೆ ವೈಜ್ಞಾನಿಕ-ಖಚಿತ ಸಾಕ್ಷ್ಯಾಧಾರ ಹೊಂದಿರಲಿ

05:04 PM Nov 16, 2018 | |

ದಾವಣಗೆರೆ: ಪ್ರತಿಯೊಂದು ಪ್ರಕರಣದ ತನಿಖೆ ಯಾಂತ್ರಿಕವಾಗಿರದೆ ಅತ್ಯಂತ ವೈಜ್ಞಾನಿಕ, ಖಚಿತ ಸಾಕ್ಷ್ಯಾಧಾರ ಹೊಂದಿರಬೇಕು ಎಂದು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಎಸ್‌. ನಾಗಶ್ರೀ ಹೇಳಿದ್ದಾರೆ.

Advertisement

ಗುರುವಾರ, ಜಿಲ್ಲಾ ಪೊಲೀಸ್‌ ಸಭಾಂಗಣದಲ್ಲಿ ಪೂರ್ವ ವಲಯ ಮಟ್ಟದ ಪೊಲೀಸ್‌ ಕರ್ತವ್ಯ ಕೂಟ ಉದ್ಘಾಟಿಸಿ, ಮಾತನಾಡಿದ ಅವರು, ಯಾವುದೇ ಪ್ರಕರಣ ತಾರ್ಕಿಕ ಅಂತ್ಯ ಕಾಣಲು ಪರಿಣಾಮಕಾರಿ ತನಿಖೆಯಲ್ಲಿ ಸಂಗ್ರಹಿಸುವ ಸಾಂದರ್ಭಿಕ ಸಾಕ್ಷಿ, ಆರೋಪವನ್ನು ಖಚಿತವಾಗಿ ರುಜುವಾತುಪಡಿಸುವ ದಾಖಲೆ, ಆಧಾರ ಅತ್ಯವಶ್ಯಕ. ಪ್ರಕರಣದ ತನಿಖೆ ಕೈಗೊಳ್ಳುವ ಅಧಿಕಾರಿಗಳು, ಸಿಬ್ಬಂದಿ ಈ ಎಲ್ಲ ಅಂಶಗಳ ಬಗ್ಗೆ ಗಮನ ನೀಡಬೇಕಿದೆ ಎಂದರು.

ಪೊಲೀಸರ ತನಿಖೆ, ವೈದ್ಯರು, ಪ್ರಾಯೋಗಿಕ ವಿಧಿ ವಿಜ್ಞಾನ ತಂತ್ರಜ್ಞರ ವರದಿ, ಸರ್ಕಾರಿ ಅಭಿಯೋಜಕರ ವಾದ ಮಂಡನೆ ಮತ್ತು ಖಚಿತ ಆಧಾರ, ದಾಖಲೆಗಳು ನ್ಯಾಯಾಲಯದಲ್ಲಿನ ವಿಚಾರಣಾ ಪ್ರಕರಣದ ತೀರ್ಪಿಗೆ ಅಗತ್ಯವಿರುವ ಪ್ರಮುಖ ಅಂಶಗಳು. ಪ್ರಕರಣದ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ ತಕ್ಷಣಕ್ಕೆ ಪೊಲೀಸ್‌ ಇಲಾಖೆಯ ಕೆಲಸ ಮುಗಿಯುವುದಿಲ್ಲ.

ದೋಷಾರೋಪಣಾ ಪಟ್ಟಿಯಂತೆ ಆರೋಪ ಸಾಬೀತುಪಡಿಸುವ ಸಾಕ್ಷಿಗಳು ಅತೀ ಮುಖ್ಯ. ಅತೀ ಪ್ರಮುಖ ಸಾಕ್ಷಿಯಾಗುವ ಆಧಾರ, ವಸ್ತುಗಳ ಸಂರಕ್ಷಣೆಯೂ ವೈಜ್ಞಾನಿಕವಾಗಿರಬೇಕು. ಪೊಲೀಸ್‌ ಇಲಾಖಾ ತನಿಖಾಧಿಕಾರಿಗಳು ನ್ಯಾಯಾಲಯದಲ್ಲಿನ ಪ್ರಕರಣಗಳ ವಿಚಾರಣೆ, ಆಗುವ ತೀರ್ಪು ಬಗ್ಗೆ ಸದಾ ನಿಗಾ ವಹಿಸುತ್ತಿರಬೇಕು. ಒಂದೊಮ್ಮೆ ಆರೋಪಿ ಆರೋಪದಿಂದ ಮುಕ್ತವಾದಲ್ಲಿ ಯಾವ ನ್ಯೂನತೆ ಕಾರಣಕ್ಕೆ ಎಂಬುದರ ಬಗ್ಗೆಯೂ ಗಮನ ನೀಡಬೇಕು. ಮುಂದಿನ ಪ್ರಕರಣದ ತನಿಖೆಯಲ್ಲಿ ಆ ನ್ಯೂನತೆ ಸರಿಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ವೈಯಕ್ತಿಕವಾಗಿ ಕರ್ನಾಟಕ ಪೊಲೀಸ್‌ ಇಲಾಖೆ ಬುದ್ಧಿವಂತಿಕೆ ಬಗ್ಗೆ ಮೆಚ್ಚುಗೆ ಇದೆ. ಕೆಲವಾರು ಪ್ರಕರಣಗಳನ್ನು ಭೇದಿಸುವಲ್ಲಿ
ರಾಜ್ಯದ ಪೊಲೀಸರು ಅತ್ಯುತ್ತಮ ಕಾರ್ಯ ನಿರ್ವಹಿಸುವ ಮೂಲಕ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಬೆಂಗಳೂರಿನ ಎಟಿಎಂವೊಂದರಲ್ಲಿ ಮಹಿಳೆ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಶೀಘ್ರವೇ ಬಂಧಿಸುತ್ತಾರೆ ಎಂಬ ವಿಶ್ವಾಸ ತಮಗೆ ಇತ್ತು. ಸ್ವಲ್ಪ ವಿಳಂಬವಾದರೂ ಆರೋಪಿಯನ್ನು ಬಂಧಿಸಿದ್ದು ಇಲಾಖೆ ಬಗ್ಗೆ ವಿಶ್ವಾಸ ಹೆಚ್ಚಿಸಿದೆ ಎಂದು ಹೇಳಿದರು. 

Advertisement

ಪೊಲೀಸ್‌ ಇಲಾಖೆ ಮತ್ತು ನ್ಯಾಯಾಲಯಗಳು ಸಹ ಸಾರ್ವಜನಿಕರ ವಿಶ್ವಾಸ ಉಳಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ಕೈಗೊಳ್ಳುವಂತಹ ತನಿಖೆ ವೈಜ್ಞಾನಿಕವಾಗಿರಬೇಕು. ಪ್ರತಿ ಪ್ರಕರಣದ ತನಿಖೆ ನಂತರ ದೋಷಾರೋಪಣಾ ಪಟ್ಟಿ ಸಲ್ಲಿಸುವ ಮುನ್ನ ಕಾಯ್ದೆಗಳ ಬಗ್ಗೆ ಅಧ್ಯಯನ ಮಾಡಬೇಕು. ಸೂಕ್ತ ಕಾಯ್ದೆ, ಸೆಕ್ಷನ್‌ಗಳ ಆಧಾರದಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸುವ ಜೊತೆಗೆ ಸಾಕ್ಷಿ, ಆಧಾರಗಳ ಬಗ್ಗೆಯೂ ಜಾಗ್ರತೆ ವಹಿಸಬೇಕು. ಫೋಕ್ಸೋ, ಡಿಎನ್‌ಎ… ಪ್ರಕರಣಗಳಲ್ಲಿ ನಿಗದಿತ ಕಾಲಾವಧಿಯಲ್ಲಿ ವರದಿ ಸಲ್ಲಿಸುವಂತಾಗಬೇಕು ಎಂದು ತಿಳಿಸಿದರು.

ಸಾಮಾಜಿಕ ಜೀವನ ಹಾಳು ಮಾಡುತ್ತಿರುವ ಸಾಮಾಜಿಕ ಜಾಲತಾಣಗಳ ಮೂಲಕ ಎಸಗುವ ಅಪರಾಧಗಳ ಪತ್ತೆಗೆ ಕಂಪ್ಯೂಟರ್‌, ಬ್ರೌಸಿಂಗ್‌ ಕಲಿಯುವತ್ತ ತನಿಖಾ ತಂಡದವರು ಗಮನ ನೀಡಬೇಕು. ಈಗಿನ ಸಾಮಾಜಿಕ, ವೈಜ್ಞಾನಿಕ ಬದಲಾವಣೆಯ ಪರಿಣಾಮ ಪೊಲೀಸ್‌ ಮತ್ತು ನ್ಯಾಯಾಂಗದ ಜವಾಬ್ದಾರಿಯೂ ಹೆಚ್ಚಾಗುತ್ತಿದೆ. ಬದಲಾಗುವ ಕಾಯ್ದೆ, ಕಾನೂನುಗಳ ತಿಳಿದುಕೊಳ್ಳಲು ಇಂತಹ ಕರ್ತವ್ಯ ಕೂಟ ಅತ್ಯವಶ್ಯಕ ಎಂದು ಪ್ರತಿಪಾದಿಸಿದರು.

ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಟಿ.ಜೆ. ಉದೇಶ್‌ ಮಾತನಾಡಿ, ತನಿಖೆ, ದೋಷಾರೋಪಣಾ ಪಟ್ಟಿಯಲ್ಲಿನ ನ್ಯೂನತೆಯ ಪರಿಣಾಮ ಶಿಕ್ಷೆ ಪ್ರಮಾಣ ಶೇ.3 ರಿಂದ 4ರಷ್ಟಿದೆ. ಪ್ರಕರಣದ ಬಗ್ಗೆ ಹೆಚ್ಚು ಚರ್ಚೆ ನಡೆಸಬೇಕು. ತನಿಖಾ ವಿಧಿ-ವಿಧಾನ ಪರಿಣಾಮಕಾರಿಯಾಗಿರಲು ಅಗತ್ಯ ವೃತ್ತಿಪರತೆಯ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. 

ಗ್ರಾಮಾಂತರ ಉಪ ವಿಭಾಗ ಉಪಾಧೀಕ್ಷಕ ಮಂಜುನಾಥ್‌ ಕೆ. ಗಂಗಲ್‌ ಪ್ರಾಸ್ತಾವಿಕ ಮಾತುಗಳಾಡಿದರು. ದೊಡ್ಡಬಾತಿಯ ಪ್ರಾಯೋಗಿಕ ವಿಧಿ ವಿಜ್ಞಾನ ಪ್ರಯೋಗಾಲಯದ ಉಪ ನಿರ್ದೇಶಕಿ ಡಾ| ಛಾಯಾಕುಮಾರಿ ಇತರರು ಇದ್ದರು. ನಗರ ಉಪಾಧೀಕ್ಷಕ ಎಸ್‌.ಎಂ. ನಾಗರಾಜ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next