Advertisement

ದಾಸ್ತಾನು ಕಟ್ಟಡ ಈಗ ಅನೈತಿಕ ತಾಣ

04:22 PM Dec 07, 2019 | Team Udayavani |

ನರೇಗಲ್ಲ: ರೈತ ಸಂಪರ್ಕ ಕೇಂದ್ರದ ಯಂತ್ರೋಪಕರಣ, ಬೀಜಗೊಬ್ಬರ ಸೇರಿದಂತೆ ರೈತರಿಗೆ ಅನುಕೂಲವಾಗುವ ವಸ್ತುಗಳನ್ನು ದಾಸ್ತಾನು ಮಾಡುವ ಉದ್ದೇಶದಿಂದ ಸರ್ಕಾರ ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಿದ ಕಟ್ಟಡ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಪಟ್ಟಣದ ಅಬ್ಬಿಗೇರಿ ರಸ್ತೆಯಲ್ಲಿರುವ ರೈತ ಸಂಪರ್ಕ ಕೇಂದ್ರದ ಪಕ್ಕದಲ್ಲಿ 2017-18ನೇ ಸಾಲಿನಲ್ಲಿ ಜಿಪಂ 10 ಲಕ್ಷ ರೂ. ಅನುದಾನದಲ್ಲಿ ಆಗಿನ ಶಾಸಕ ಜಿ.ಎಸ್‌. ಪಾಟೀಲ ಕಾಮಗಾರಿಗೆ ಚಾಲನೆ ನೀಡಿದ್ದರು.

Advertisement

ಆದರೆ, ಅನುದಾನ ಕೊರತೆಯಿಂದ ಕಟ್ಟಡ ಅಪೂರ್ಣಗೊಂಡಿದ್ದು, ಈ ಕಟ್ಟಡವೀಗ ಜೂಜಾಟದ ಅಡ್ಡೆಯಾಗಿ, ಸಾರಾಯಿ ಕುಡಿಯುವ ಕ್ಲಬ್‌ ಆಗಿ ಮಾರ್ಪಾಟಾಗುತ್ತಿದೆ. ಮೂಲ ಸೌಕರ್ಯಗಳಿಲ್ಲದ ಈ ಯಂತ್ರೋಪಕರಣ ಕಟ್ಟಡಕ್ಕೆ ಹೆಸರಿಲ್ಲ, ಸುತ್ತ ಕಾಂಪೌಂಡ್‌ ಗೋಡೆ ಪೂರ್ಣಗೊಂಡಿಲ್ಲ, ನೀರಿನ ವ್ಯವಸ್ಥೆಯಿಲ್ಲ, ವಿದ್ಯುತ್‌ ಸಂಪರ್ಕವೇ ಇಲ್ಲ, ಶೌಚಾಲಯವಿಲ್ಲ, ರಾತ್ರಿಯಾಯಿತೆಂದರೆ ಕುಡುಕರೊಂದಿಗೆ ನಾಯಿ, ನರಿ, ಹಂದಿಗಳು ಬಂದು ಇಲ್ಲಿಯೇ ವಾಸ್ತವ್ಯ ಮಾಡುತ್ತವೆ. ಮೂಲಸೌಕರ್ಯಗಳಿಂದ ವಂಚಿತವಾದ ಈ ದಾಸ್ತಾನು ಕಟ್ಟಡ ಆವರಣದ ಮುಂಭಾಗ ಹಾಗೂ ಸುತ್ತಮುತ್ತಲಿನ ಜನ ಮಲಮೂತ್ರ ವಿಸರ್ಜಿಸುತ್ತಿರುವುದು ಸಾಮಾನ್ಯವಾಗಿದೆ. ಕಟ್ಟಡದ ಸುತ್ತ ಸತ್ತ ಬೆಕ್ಕು ಹಾಗೂ ಎಂದೋ ಸತ್ತ ಪ್ರಾಣಿಗಳ ಅಸ್ತಿಪಂಜರಗಳಿದ್ದು, ಗಬ್ಬು ವಾಸನೆಯಿಂದ ರೈತ ಸಂಪರ್ಕ ಕೇಂದ್ರಕ್ಕೆ ಬರುವವರಿಗೆ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ.

ಈ ಕಟ್ಟಡ ಕಳೆದ ಎರಡು ವರ್ಷಗಳಿಂದ ಪೂರ್ಣಗೊಳ್ಳದೇ ಇರುವುದರಿಂದ ಕಟ್ಟಡದ ಸುತ್ತ ಗಿಡ ಗಂಟಿಗಳು ಮುತ್ತಿಕ್ಕಿಕೊಂಡಿದ್ದು, ಭೂತ ಬಂಗಲೆಯಂತಾಗಿದೆ. ಕುಡಿದು ಎಸೆದ ಸಾರಾಯಿ ಬಾಟಲಿ, ಸಿಗರೇಟ್‌ ಪ್ಯಾಕೆಟ್‌ಗಳು ಅವ್ಯವಹಾರ ಅಡ್ಡೆಗೆ ಸಾಕ್ಷಿಗಳಂತಿದ್ದರೆ, ಬಿದ್ದಿರುವ ಬಟ್ಟೆ ಬರೆಕಾಂಡೋಮ್‌ಗಳು ನಡೆದಿರುವ ಅನೈತಿಕ ಚಟುವಟಿಕೆಗಳಿಗೆ ಸಾಕ್ಷಿಯಾಗಿವೆ.

ಕಟ್ಟಡಕ್ಕೆ ತಾತ್ಕಾಲಿಕ ಬಾಗಿಲು: ಈ ಕಟ್ಟಡಕ್ಕೆ ತಾತ್ಕಾಲಿಕವಾಗಿ ತಗಡಿನ ಬಾಗಿಲು ಹಚ್ಚಲಾಗಿದೆ. ಆದರೆ, ಕಿಡಿಗೇಡಿಗಳು ಅದನ್ನು ಮುರಿದಿದ್ದಾರೆ. ತಿಂಡಿ, ತಿನಿಸುಗಳನ್ನು ಅಲ್ಲಲ್ಲಿ ಎಸೆಯಲಾಗಿದೆ. ತ್ಯಾಜ್ಯ ವಸ್ತುಗಳು ಕಟ್ಟಡದ ತುಂಬೆಲ್ಲಾ ಹರಡಿಕೊಂಡಿದ್ದು, ಗಬ್ಬೆದ್ದು ನಾರುತ್ತಿವೆ. ಲಕ್ಷಾಂತರ ರೂ. ವ್ಯಯಿಸಿರುವ ಕಟ್ಟಡದ ಕುರಿತು ಇನ್ನಾದರೂ ಕಾಳಜಿ ವಹಿಸಿ ಸಾರ್ವಜನಿಕರ ದುಡ್ಡು ಪೋಲಾಗದಂತೆ ಕ್ರಮ ಕೈಗೊಳ್ಳಬೇಕು ಎಂಬುದು ರೈತರ ಒತ್ತಾಯ.

 

Advertisement

-ಸಿಕಂದರ ಎಂ. ಆರಿ

Advertisement

Udayavani is now on Telegram. Click here to join our channel and stay updated with the latest news.

Next