ಹುಬ್ಬಳ್ಳಿ: ಸೌರ ವಿದ್ಯುತ್‌ನಿಂದ ಸಣ್ಣ ಕೈಗಾರಿಕೆಯ ಯಂತ್ರೋಪಕರಣಗಳನ್ನು ಬಳಕೆ ಮಾಡಬಹುದೆಂಬುದನ್ನು ಜನರಿಗೆ ಮನದಟ್ಟು ಮಾಡಿಕೊಡುವ ಉದ್ದೇಶದಿಂದ ಸೆಲ್ಕೋ ಫೌಂಡೇಶನ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದಲ್ಲಿ ರಾಯಾಪುರದ ಜ್ಞಾನವಿಕಾಸ ತರಬೇತಿ ಸಂಸ್ಥೆ ಆವರಣದಲ್ಲಿ ಸೌರಶಕ್ತಿ ಆವಿಷ್ಕಾರ ಕೇಂದ್ರದಲ್ಲಿ ಸೌರ ವಿದ್ಯುತ್ ಚಾಲಿತ ಯಂತ್ರಗಳ ಲ್ಯಾಬೊರೇಟರಿ ರೂಪಿಸಿದೆ.
ಜೀವನಾಧಾರಿತ ಸುಸ್ಥಿರ ಕಿರು-ಉದ್ಯಮ ತರಬೇತಿ ಕೇಂದ್ರದಲ್ಲಿ ಸೌರಶಕ್ತಿ ಯಂತ್ರಗಳ ಪ್ರದರ್ಶನ ಅಷ್ಟೇ ಅಲ್ಲ, ತರಬೇತಿಯನ್ನೂ ನೀಡಲಾಗುತ್ತಿದೆ. ಗ್ರಾಮೀಣ ಜೀವನಾಧಾರಗಳಲ್ಲಿ ಸುಸ್ಥಿರ ಇಂಧನ ಆಧಾರಿತ ಉದ್ಯಮಶೀಲತೆ ಹಾಗೂ ನಾವೀನ್ಯತೆ ಬೆಂಬಲಿಸುವ ಮಾದರಿ ರಚಿಸುವುದು ಕೇಂದ್ರದ ಗುರಿಯಾಗಿದೆ. ನವೀನ ತಂತ್ರಜ್ಞಾನಕ್ಕೆ ಸೌರ ವಿದ್ಯುತ್ ಅಳವಡಿಸುವ ಕಾರ್ಯವನ್ನಿಲ್ಲಿ ಪರಿಣಾಮಕಾರಿಯಾಗಿ ಮಾಡಲಾಗುತ್ತಿದೆ. ಸೌರ ವಿದ್ಯುತ್ ಬಳಸುವುದನ್ನು ಉತ್ತೇಜಿಸುವುದರೊಂದಿಗೆ ಸೌರ ವಿದ್ಯುತ್ ಬಳಸುವವರನ್ನು ಸಂಘಟಿಸುವುದು ಕೂಡ ಕೇಂದ್ರದ ಉದ್ದೇಶವಾಗಿದೆ.
ತರಬೇತಿಗೂ ವೇದಿಕೆ: ಕೇವಲ ಸೌರ ವಿದ್ಯುತ್ ಆಧಾರಿತ ಯಂತ್ರೋಪಕರಣಗಳನ್ನು ನೀಡುವುದಕ್ಕೆ ಸೀಮಿತವಾಗದೆ, ಉದ್ಯಮದ ಹೊಸ ಪರಿಕಲ್ಪನೆಗಳು, ಮಾರ್ಗದರ್ಶನ, ವ್ಯಾಪಾರಕ್ಕೆ ಸಲಹೆ, ಬಂಡವಾಳ ಹಾಗೂ ಸಂಪರ್ಕ ಜಾಲ ಮೊದಲಾದ ಸೇವೆಯನ್ನು ನೀಡಲಾಗುತ್ತದೆ. ಸೌರಶಕ್ತಿ ಉಪಕರಣಗಳ ನಿರ್ವಹಣೆ, ಮಾರಾಟ ಸಂಬಂಧಿತ ಮಾರ್ಗದರ್ಶನ ಹಾಗೂ ತರಬೇತಿಯನ್ನೂ ಒದಗಿಸಲಾಗುತ್ತದೆ.
ಹಳ್ಳಿಗರಿಗೆ ನೆರವಾಗುವ ಆಶಯ: ಗ್ರಾಮೀಣದಲ್ಲಿ ಮೂರು(ತ್ರಿ)ಫೇಸ್ ವಿದ್ಯುತ್ ನೀಡುವುದೇ ಕಡಿಮೆ. ಕೆಲವೇ ಗಂಟೆ ಕಾಲ ವಿದ್ಯುತ್ ಸರಬರಾಜು ಮಾಡಲಾಗುತ್ತಿದ್ದು, ವಿದ್ಯುತ್ ಅವಲಂಬಿತ ಯಂತ್ರಗಳ ಕೆಲಸ ಮಾಡಿಕೊಳ್ಳುವುದು ಕಷ್ಟ. ಇದೇ ಕಾರಣಕ್ಕೆ ಸಣ್ಣ ಪುಟ್ಟ ಕೆಲಸಕ್ಕಾಗಿ ನಗರ ಪ್ರದೇಶಗಳಿಗೆ ಬರಬೇಕಾಗುತ್ತದೆ. ಅನಗತ್ಯವಾಗಿ ಹಣ ವ್ಯಯಿಸಬೇಕಾಗುತ್ತದೆ. ಇದನ್ನು ಮನಗಂಡು ಗ್ರಾಮಗಳಲ್ಲಿಯೇ ಸಣ್ಣ ಪುಟ್ಟ ಉದ್ಯೋಗ ಆಶ್ರಯಿಸಿದವರು ಸೌರ ವಿದ್ಯುತ್ ಅವಲಂಬಿಸಿ ಹೆಚ್ಚು ಸಂಪಾದನೆ ಮಾಡಬೇಕೆಂಬುದು ಸಂಸ್ಥೆಯ ಆಶಯವಾಗಿದೆ. ಯಂತ್ರಗಳ ವಿನ್ಯಾಸ ಸೌರಶಕ್ತಿಯಿಂದ ಚಾಲಿತ ರೋಟಿ ರೋಲರ್ ಯಂತ್ರ, ಝೆರಾಕ್ಸ್ ಪ್ರಿಂಟರ್, ಹೊಲಿಗೆ ಯಂತ್ರ, ಕುಲುಮೆಗೆ ಬ್ಲೋವರ್ ಯಂತ್ರ, ಹಾಲು ಕರೆಯುವ ಯಂತ್ರ, ಮಿಲ್ಕ್ ಫ್ಯಾಟ್ ಟೆಸ್ಟಿಂಗ್ ಯಂತ್ರ, ಕುಂಬಾರರ ಚಕ್ರ, ರೆಫ್ರಿಜಿರೇಟರ್, ಹಿಟ್ಟಿನ ಗಿರಣಿ, ಖಾರ ಕುಟ್ಟುವ ಯಂತ್ರ, ಮೊಟ್ಟೆಯಿಂದ ಕೋಳಿ ಮರಿ ಮಾಡುವ ಯಂತ್ರ, ಹತ್ತಿ ದಾರ ನೂಲುವ ಯಂತ್ರ, ಕೈಮಗ್ಗ, ನೀರಿನ ಪಂಪ್‌ಗ್ಳು, ಬತ್ತದ ಗಿರಣಿ, ಹಗ್ಗ ಸುತ್ತುವ ಯಂತ್ರಗಳನ್ನು ವಿನ್ಯಾಸಗೊಳಿಸಲಾಗಿದೆ. ಅಲ್ಲದೇ ಉದ್ಯಮಿಗಳ ಬೇಡಿಕೆಗೆ ಅನುಗುಣವಾಗಿ ಯಂತ್ರಗಳನ್ನು ವಿನ್ಯಾಸ ಮಾಡಿಕೊಡುವ ವ್ಯವಸ್ಥೆ ಕೂಡ ಇಲ್ಲಿದೆ.