ಚಾಮರಾಜನಗರ: ಆರೋಗ್ಯ ಇಲಾಖೆಯು ಜನರ ಆರೋಗ್ಯ ಗಮನದಲ್ಲಿಟ್ಟುಕೊಂಡು ಹೊಸ ಲಸಿಕೆಗಳನ್ನು ಪರಿಚಯಿಸುತ್ತಿರುತ್ತದೆ. ಇದನ್ನು ಜನಸಾಮಾನ್ಯರಿಗೆ ಅರ್ಥ ಮಾಡಿಸಿ, ಪ್ರತಿಯೊಬ್ಬರಿಗೂ ದೊರೆಯುವಂತೆ ಮಾಡುವ ಜವಾಬ್ದಾರಿ ವೈದ್ಯಾಧಿಕಾರಿಗಳು ಮತ್ತು ಆರೋಗ್ಯ ಮೇಲ್ವಿಚಾರಕದ್ದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಸಿ. ರವಿ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಆರೋಗ್ಯ ಇಲಾಖೆಯ ಸಭಾಂಗಣದಲ್ಲಿ ರೋಟಾ ವೈರಸ್ ಲಸಿಕೆಯ ಜಿಲ್ಲಾ ಮಟ್ಟದ ಉದ್ಘಾಟನೆ ಕಾರ್ಯಕ್ರಮ ಹಾಗೂ ವೈದ್ಯರು ಹಾಗು ಆರೋಗ್ಯ ಮೇಲ್ವಿಚಾರಕರಿಗೆ ಆಯೋಜಿಸಲಾಗಿದ್ದ ಕಾರ್ಯಾಗಾರದಲ್ಲಿ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿದರು.
ಜಿಲ್ಲೆಯಲ್ಲಿ ಈ ರೋಟಾ ಲಸಿಕೆಯನ್ನು ಮಕ್ಕಳಿಗೆ ಹಾಕುವ ಮೂಲಕ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕು. ಗ್ರಾಮಾಂತರ ಪ್ರದೇಶಗಳಲ್ಲಿರುವ ವೈದ್ಯರು ಮತ್ತು ಆರೋಗ್ಯ ಮೇಲ್ವಿಚಾರಕರು ಚೆನ್ನಾಗಿ ಆರ್ಥೈಯಿಸಿಕೊಂಡು ಲಸಿಕೆ ಹಾಕಿ, ಆರೋಗ್ಯ ಸುಧಾರಣೆಗೆ ತೊಡಗಿಸಿಕೊಳ್ಳಬೇಕು. ಉತ್ತಮ ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ನಿಮ್ಮ ಪಾತ್ರ ಬಹಳ ಇದೆ. ರೋಟಾ ಲಸಿಕೆಯನ್ನು ಮಗು ಹುಟ್ಟಿದ ಆರು ವಾರಗಳ ನಂತರ 14ನೇ ವಾರದ ವರೆಗೆ ನಿಯಮಿತವಾಗಿ ಮಗುವಿನ ಬಾಯಿಗೆ ಹಾಕಲಾಗುವುದು ಎಂದರು.
ಜಿಲ್ಲಾ ಲಸಿಕಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ ಮಾತನಾಡಿ, ಹೊಸ ಲಸಿಕೆಯಾಗಿರುವ ರೋಟಾ ವೈರಸ್ ಲಸಿಕೆಯನ್ನು ಮಗು ಜನನವಾದ 6ನೇ ವಾರ, 10ನೇ ವಾರ ಹಾಗೂ 14ನೇ ವಾರಗಳಲ್ಲಿ ಬಾಯಿಗೆ ಹಾಕುವ ಲಸಿಕೆಯಾಗಿದೆ. ಇದನ್ನು ಮಕ್ಕಳಿಗೆ ಹಾಕುವುದರಿಂದ ತೀವ್ರತರವಾಗಿ ಕಂಡು ಬರುವ ಅತಿಸಾರ ಭೇದಿ ಹತೋಟಿಗೆ ಬರುತ್ತದೆ. ಮಗುವಿನ ಬೆಳೆವಣಿಗೆಯು ಸಹ ತೃಪ್ತಿದಾಯಕವಾಗಿರುತ್ತದೆ.
ಈ ಉಪಯುಕ್ತ ಲಸಿಕೆಯನ್ನು ಜಿಲ್ಲೆಯಲ್ಲಿ ಒಂದು ಮಗುವು ಸಹ ತಪ್ಪದಂತೆ ಗುರಿ ಸಾಧನೆ ಮಾಡಬೇಕು. ಈ ಕಾರ್ಯಾಗಾರದ ಮೂಲಕ ಲಸಿಕೆ ಹಾಕುವ ಕುರಿತು ಪ್ರಾತ್ಯಕ್ಷತೆ ಹಾಗು ಕೈಪಿಡಿಯನ್ನು ನೀಡಲಾಗಿದೆ ಎಂದರು. ಸರ್ವೇಲೈನ್ಸ್ ಮೆಡಿಕಲ್ ಅಫೀಸರ್ ಡಾ. ಸುಧೀರ್ ನಾಯಕ್ ಹೊಸ ಲಸಿಕೆ ಪ್ರಾತ್ಯಕ್ಷಿಕೆ ಮೂಲಕ ವಿವರಣೆ ನೀಡುವ ಜೊತೆಗೆ ರೋಟಾ ವೈರಸ್ ಲಸಿಕೆ ಸಮಗ್ರ ವಿಚಾರವನ್ನು ಒಳಗೊಂಡ ಕೈಪಿಡಿಯನ್ನು ಪರಿಚಯಿಸಿದರು.
ಡಾ. ರಾಜು, ಡಾ. ಕಾಂತರಾಜು, ಡಾ. ನಾಗರಾಜು, ಡಾ. ಅಂಕಪ್ಪ, ಡಾ. ಮಹದೇವ್, ಗುರುಲಿಂಗಯ್ಯ, ತಾಲೂಕು ಆರೋಗ್ಯಾಧಿಕಾರಿಗಳು, ಶಾಂತಮ್ಮ ಸುರೇಶ್ ಚಾರ್ಯ, ನಾರಾಯಣಸ್ವಾಮಿ, ಮಂಜು, ದುಷ್ಯಂತ್, ಸೇರಿದಂತೆ ಜಿಲ್ಲೆಯ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.