ಧಾರವಾಡ: ಸುಂದರ ಅಂತರಂಗ ಹೊಂದಿರುವ ಕಲೆಗಾರರು ಬಾಹ್ಯ ಸೌಂದರ್ಯಕ್ಕೆ ಆದ್ಯತೆ ನೀಡುವುದಿಲ್ಲ ಎಂದು ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಹೇಳಿದರು. ಡಿ.ವಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ಹಾಗೂ ಕರ್ನಾಟಕ ಲಲಿತ ಕಲಾ ಅಕಾಡೆಮಿ ವತಿಯಿಂದ ನಗರದ ಸರಕಾರಿ ಆರ್ಟ್ ಗ್ಯಾಲರಿಯಲ್ಲಿ ಹಮ್ಮಿಕೊಂಡಿದ್ದ ಯುಗಾದಿ ರಾಷ್ಟ್ರೀಯ ಚಿತ್ರಕಲಾ ಶಿಬಿರದ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಮಾತಿನಲ್ಲಿ ಹೇಳಲಾಗದ ಸಾಕಷ್ಟು ಸೂಕ್ಷ್ಮ ಅಂಶಗಳನ್ನು ಬಣ್ಣದಲ್ಲಿ ಮೂಡಿಸುವುದು ಸಾಮಾನ್ಯವಲ್ಲ. ಆದರೆ ಅಂತಹ ಕಷ್ಟದ ಕಲೆ ಕರಗತ ಮಾಡಿಕೊಳ್ಳುವ ಮೂಲಕ ಸೌಂದರ್ಯವನ್ನು ಬಿಂಬಿಸುವ ಕಲಾಕೃತಿಗಳನ್ನು ರಚಿಸುತ್ತಾರೆ. ಸಾಮಾನ್ಯ ಜನರು ಕಾಣದ ವೈಶಿಷ್ಟéವನ್ನು ಕಾಣುವವನೇ ಕಲೆಗಾರ.
ಕಲೆ ನಮ್ಮ ಜೀವನದ ಭಾಗವಾಗಬೇಕು. ಕಲೆಯನ್ನು ಆಸ್ವಾದಿಸಿ ಬದುಕಿದರೆ ಇಡೀ ಜಗತ್ತೇ ಅದ್ಭುತ ಹಾಗೂ ಸುಂದರವಾಗಿ ಕಾಣುತ್ತದೆ ಎಂದರು. ಹಿರಿಯ ಸಾಹಿತಿ ಡಾ|ಸಿದ್ಧಲಿಂಗ ಪಟ್ಟಣಶೆಟ್ಟಿ ಮಾತನಾಡಿ, ಕಲಾಕಾರ ಎಲ್ಲರ ಹೃದಯದಲ್ಲಿ ಉಳಿಯುವುದಿಲ್ಲ. ಆದರೆ ಆತ ರಚಿಸಿದ ಕಲಾಕೃತಿಗಳು ಎಲ್ಲರಲ್ಲಿ ಉಳಿಯುತ್ತವೆ.
ಕಲಾಕೃತಿಗಳ ವೀಕ್ಷಣೆಯಿಂದ ಮನಸ್ಸಿಗೆ ಆನಂದ ಸಿಗುವುದು ಎಂದರು. ಸಾಹಿತಿ ಡಾ|ಗುರುಲಿಂಗ ಕಾಪಸೆ, ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಾ|ಎಂ.ಎಸ್. ಮೂರ್ತಿ ಮಾತನಾಡಿದರು. ಹಾಲಭಾವಿ ಟ್ರಸ್ಟ್ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾಧಿಕಾರಿ ಡಾ|ಎಸ್.ಬಿ. ಬೊಮ್ಮನಹಳ್ಳಿ. ಟ್ರಸ್ಟ್ ಸದಸ್ಯರಾದ ಸುರೇಶ ಹಾಲಭಾವಿ, ಪಾರ್ವತಿ ಹಾಲಭಾವಿ, ಎಂ.ಆರ್. ಬಾಳೀಕಾಯಿ, ಬಿ. ಮಾರುತಿ, ಎಸ್.ಕೆ. ಪತ್ತಾರ, ರೇಣುಕಾ ಮಾರ್ಕಾಂಡೆ, ಶಶಿ ಸಾಲಿ ಇದ್ದರು. ಇದೇ ಸಂದರ್ಭದಲ್ಲಿ ಶಿಬಿರದಲ್ಲಿ ಭಾಗವಹಿಸಿದ್ದ ಕಲಾವಿದರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣವರ ಸ್ವಾಗತಿಸಿದರು. ಅನಿಲ ದೇಸಾಯಿ ನಿರೂಪಿಸಿದರು.