Advertisement

ಗಾಯಾಳು ಸೇವೆಗೆ ಬಂತು ಬಸ್‌ ಆ್ಯಂಬುಲನ್ಸ್‌

12:08 PM Aug 22, 2017 | |

ಬೆಂಗಳೂರು: ಬೈಕ್‌ ಆ್ಯಂಬುಲೆನ್ಸ್‌ ಹಳೆಯದಾಯ್ತು. ಏರ್‌ ಆ್ಯಂಬುಲನ್ಸ್‌ ಕೂಡ ಬಂದಾಯ್ತು. ಈಗ ಬಸ್‌ ಆ್ಯಂಬುಲನ್ಸ್‌ ರಸ್ತೆಗಿಳಿಯುತ್ತಿದೆ. ಬ್ರೈನ್‌ ಸಂಸ್ಥೆಯ ಅಂಗಸಂಸ್ಥೆಯಾಗಿರುವ “ಗೋಲ್ಡನ್‌ ಅವರ್‌’ ಕೆಎಸ್‌ಆರ್‌ಟಿಸಿಯಿಂದ ಕೊಡುಗೆ ರೂಪದಲ್ಲಿ ಒಂದು ಬಸ್‌ ಪಡೆದಿದ್ದು, ಅದರಿಂದ ಈ ಬಸ್‌ ಆ್ಯಂಬುಲನ್ಸ್‌ ಸೇವೆಗೆ ಮುಂದಾಗಿದೆ. ಈ ಉಚಿತ ಸೇವೆಗೆ ಸೋಮವಾರ ನಗರದ ಏಟ್ರಿಯಾ ಹೋಟೆಲ್‌ನಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.

Advertisement

ಯಾವುದೇ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗೆ ತಕ್ಷಣ ಬಸ್‌ ಆ್ಯಂಬುಲನ್ಸ್‌ನಲ್ಲಿ ಪ್ರಾಥಮಿಕ ಚಿಕಿತ್ಸೆ ಕಲ್ಪಿಸಿ, ಸಮೀಪದ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಬಸ್‌ ಆ್ಯಂಬುಲೆನ್ಸ್‌ನಲ್ಲಿ ಎಂಟು ಹಾಸಿಗೆಗಳ ವ್ಯವಸ್ಥೆ ಜೊತೆಗೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇರುವಂತಹ ಅತ್ಯಾಧುನಿಕ ಸೌಲಭ್ಯಗಳಿವೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಅಪಘಾತಗಳು ಸಂಭವಿಸಿದ ಸಂದರ್ಭದಲ್ಲಿ ಬಸ್‌ ಆ್ಯಂಬುಲೆನ್ಸ್‌ ಮೂಲಕ ಉಚಿತ ಸೇವೆ ನೀಡಲಿದೆ. 

10 ಮಂದಿ ತೀವ್ರಗಾಯಾಳುಗಳು ಹಾಗೂ 10 ಮಂದಿ ಸಾಧಾರಣ ಗಾಯಾಳುಗಳು ಸೇರಿದಂತೆ ಏಕಕಾಲಕ್ಕೆ 20 ಮಂದಿಯನ್ನು ಆಸ್ಪತ್ರೆಗೆ ಕರೆದೊಯ್ಯವ ವ್ಯವಸ್ಥೆ ಕೂಡ ಇದರಲ್ಲಿದೆ. ಈ ಮಧ್ಯೆ ನುರಿತ ಸಿಬ್ಬಂದಿ ಗಾಯಾಳುಗಳಿಗೆ ಆ್ಯಂಬುಲನ್ಸ್‌ನಲ್ಲಿ ಪ್ರಥಮ ಚಿಕಿತ್ಸೆ ನೀಡಲಿದ್ದಾರೆ. ಇದರಲ್ಲಿ ಜಿಪಿಎಸ್‌ ವ್ಯವಸ್ಥೆಯಿದ್ದು, ಘಟನಾ ಸ್ಥಳದಿಂದ ಸಮೀಪದಲ್ಲಿರುವ ಆಸ್ಪತ್ರೆ ಪತ್ತೆಗೆ ಕೂಡ ಇದು ಸಹಕಾರಿಯಾಗಲಿದೆ.

ತಿದ್ದುಪಡಿಯಿಂದ ತಗ್ಗಲಿವೆ ಅಪಘಾತಗಳು
ಬಸ್‌ ಆ್ಯಂಬುಲನ್ಸ್‌ಗೆ ಚಾಲನೆ ನೀಡಿದ ರಾಮಲಿಂಗಾರೆಡ್ಡಿ, ಅಪಘಾತ ಪ್ರಕರಣಗಳಲ್ಲಿ ಭಾರತ ವಿಶ್ವದಲ್ಲಿ ಮೊದಲ ಸ್ಥಾನದಲ್ಲಿದೆ. ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಕೈಗೊಂಡಿದ್ದರೂ ಅಪಘಾತ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆಗೆ ತಿದ್ದು ತಂದು ಕಾನೂನು ಮತ್ತಷ್ಟು ಕಠಿಣಗೊಳಿಸಿದೆ. ಈ ತಿದ್ದುಪಡಿ ಕಾಯ್ದೆಗೆ ಸಂಸತ್‌ನಲ್ಲಿ ಅನುಮೋದನೆ ಸಿಕ್ಕಿದ್ದು, ರಾಜ್ಯಸಭೆಯ ಅನುಮೋದನೆ ಬಾಕಿಯಿದೆ. ಈ ಕಾಯ್ದೆ ಅನುಷ್ಠಾನಕ್ಕೆ ಬಂದರೆ ಅಪಘಾತ ಪ್ರಕರಣಗಳು ನಿಯಂತ್ರಣಕ್ಕೆ ಬರುವ ಸಾಧ್ಯತೆಯಿದೆ ಎಂದರು.

ದೇಶದಲ್ಲಿ ಪ್ರತಿ ವರ್ಷ 4.40 ಲಕ್ಷ ಅಪಘಾತ ಪ್ರಕರಣಗಳು ಜರುಗುತ್ತಿದ್ದು, 1.50 ಲಕ್ಷ ಮಂದಿ ಮೃತಪಟ್ಟು ಅಷ್ಟೇ ಪ್ರಮಾಣದಲ್ಲಿ ಕೈ-ಕಾಲು ಕಳೆದುಕೊಳ್ಳುತ್ತಿದ್ದಾರೆ. ಬಹುತೇಕ ಪ್ರಕರಣಗಳಲ್ಲಿ ಕುಟುಂಬದ ಮುಖ್ಯಸ್ಥರೇ ಮೃತಪಡುತ್ತಿರುವುದರಿಂದ ಆ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಗುರಿಯಾಗುತ್ತಿವೆ. ಅಪಘಾತ ಪ್ರಕರಣಗಳಿಂದ ಕೇಂದ್ರ ಸರ್ಕಾರಕ್ಕೆ 60 ಸಾವಿರ ಕೋಟಿ ನಷ್ಟ ಉಂಟಾಗುತ್ತಿದೆ ಎಂದರು.  

Advertisement

ಕರ್ನಾಟಕದಲ್ಲಿ 1.70 ಕೋಟಿ ವಾಹನಗಳಿವೆ. ಬೆಂಗಳೂರಿನಲ್ಲಿ 69 ಲಕ್ಷ ವಾಹನಗಳಿವೆ. ರಾಜ್ಯದಲ್ಲಿ ಪ್ರತಿ ವರ್ಷ ಸುಮಾರಿ 10 ಸಾವಿರ ಮಂದಿ ಅಪಘಾತಗಳಿಗೆ ಬಲಿಯಾಗುತ್ತಿದ್ದಾರೆ. ಶೇ.78 ಅಪಘಾತ ಪ್ರಕರಣಗಳಿಗೆ ಚಾಲಕರ ಅಶಿಸ್ತು ಹಾಗೂ ನಿರ್ಲಕ್ಷ್ಯವೇ ಕಾರಣ ಎಂದು ತಿಳಿಸಿದರು. ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಸ್‌.ಆರ್‌. ಉಮಾಶಂಕರ್‌ ಮಾತನಾಡಿದರು. ಏಟ್ರಿಯಾ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಸಿ.ಎಸ್‌.ಸುಂದರರಾಜ, ಬ್ರೈನ್‌ ಸಂಸ್ಥೆಯ ಸಂಸ್ಥಾಪಕ ಡಾ.ಎನ್‌.ಕೆ. ವೆಂಕಟರಮಣ, ನಾಡೋಜ ಡಾ.ಮಹೇಶ್‌ ಜೋಶಿ ಮತ್ತಿತರರು ಉಪಸ್ಥಿತರಿದ್ದರು.

* ದಿನದ 24 ಗಂಟೆ ಈ ಸೇವೆ ಇರುತ್ತದೆ. ಬಸ್‌ ಆ್ಯಂಬುಲನ್ಸ್‌ ಸೇವೆಗೆ 1062ಗೆ ಉಚಿತ ಕರೆ ಮಾಡಬಹುದು. ಮಾಹಿತಿಗೆ ಸಹಾಯವಾಣಿ 91480 80000 ಕೂಡ ಸಂಪರ್ಕಿಸಬಹುದು. 

Advertisement

Udayavani is now on Telegram. Click here to join our channel and stay updated with the latest news.

Next