ನವದೆಹಲಿ: ನಟ ಅಕ್ಷಯ್ ಕುಮಾರ್ ಅಭಿನಯದ ಸೂಪರ್ ಹಿಟ್ ಹಿಂದೀ ಚಿತ್ರ ‘ಕೇಸರಿ’ಯಲ್ಲಿ ತೇರೆ ಮಿಟ್ಟೀ ಮೆ ಮಿಲ್ ಜಾವಾ…’ ಎಂಬ ಹಾಡೊಂದು ಭಾರೀ ಜನಪ್ರಿಯಗೊಂಡಿತ್ತು. ತಾಯ್ನಾಡಿನ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುವ ರೀತಿಯ ಹಾಡು ಇದಾಗಿತ್ತು.
ಇದೀಗ ದೇಶವನ್ನು ಕಾಡುತ್ತಿರುವ ಕೋವಿಡ್ 19 ವೈರಸ್ ಮಹಾಮಾರಿಯ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿರುವ ಕೋವಿಡ್ ಆರೋಗ್ಯ ಯೋಧರಿಗೆ ಈ ಹಾಡಿನ ಧಾಟಿಯಲ್ಲೇ ಹೊಸ ಹಾಡೊಂದನ್ನು ಹಾಡುವ ಮೂಲಕ ಐಟಿಬಿಪಿ (ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್) ಪಡೆಯ ಯುವ ಯೋಧರೊಬ್ಬರು ವಿಶಿಷ್ಟ ನಮನವನ್ನು ಸಲ್ಲಿಸಿದ್ದಾರೆ.
‘ಏ ದೇಶ್ ಮೇರಾ ತೂ ಜೀತಾ ರಹೇ’ ಎಂದು ಪ್ರಾರಂಭವಾಗುವ ಈ ಹಾಡಿನಲ್ಲಿ ಕೋವಿಡ್ ವೈರಸ್ ವಿರುದ್ಧ ನಿಂತು ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಹಾಗೂ ಇತರೇ ಆರೋಗ್ಯ ಯೋಧರನ್ನು ಸ್ಮರಿಸಿಕೊಳ್ಳಲಾಗಿದೆ.
‘ಓ ನನ್ನ ದೇಶವೇ ನೀನೆಂದು ವಿಜಯೀಭವ, ನೀನು ಸಾಕಿರುವುದು ಸಿಂಹದ ತಾಕತ್ತುಳ್ಳ ಮಕ್ಕಳನ್ನು, ಇವರಲ್ಲಿ ಒಬ್ಬರ ಬಲಿದಾನವಾದರೆ ಏನಂತೆ, ಇಂತಹ ಸಾವಿರ ಸಾವಿರ ಜನ ನಿನ್ನ ಒಡಲಲ್ಲಿ ಇದ್ದಾರೆ’ ಎಂದು ಪ್ರಾರಂಭವಾಗುವ ಈ ಹಾಡು ಸಂಕಷ್ಟದ ಕಾಲದಲ್ಲಿ ಕಾಣದ ವೈರಾಣುವಿನ ವಿರುದ್ಧ ಹೋರಾಡುತ್ತಿರುವ ಲಕ್ಷಾಂತರ ಆರೋಗ್ಯ ಯೋಧರಿಗೆ ಸ್ಪೂರ್ತಿಯಾಗಿದೆ.
ITBP ಪಡೆಯ ಯುವ ಹೆಡ್ ಕಾನ್ ಸ್ಟೇಬಲ್ ಅರ್ಜುನ್ ಖೇರಿಯಾಲ್ ಹಾಡಿರುವ ಈ ತುಣುಕನ್ನು ITBP ತನ್ನ ಅಧಿಕೃತ ಟ್ಟಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.