Advertisement

ಹಿಂದೂ ಮಹಾಸಾಗರ ಗಣಪತಿ ವಿಸರ್ಜನೆ

02:53 PM Sep 05, 2017 | |

ಹೊಸದುರ್ಗ: ಪಟ್ಟಣದ ಟಿ.ಬಿ. ವೃತ್ತದಲ್ಲಿ ಗಣೇಶ ಚತುರ್ಥಿ ಅಂಗವಾಗಿ ಜ್ಯೂನಿಯರ್‌ ಕಾಲೇಜು ಮುಂಭಾಗದಲ್ಲಿ ಪ್ರತಿಷ್ಠಾಪಿಸಲಾಗಿದ್ದ 4ನೇ ವರ್ಷದ ವಿರಾಟ್‌ ಹಿಂದೂ ಮಹಾಸಾಗರ ಗಣಪತಿ ಮೆರವಣಿಗೆ ಹಾಗೂ ವಿಸರ್ಜನೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಶಾಂತಿಯುತವಾಗಿ ನಡೆಯಿತು.

Advertisement

ಸೋಮವಾರ ಮಧ್ಯಾಹ್ನ 1ಕ್ಕೆ ಚಾಲನೆಗೊಂಡ ಮೆರವಣಿಗೆಯು ಪಟ್ಟಣದಲ್ಲಿ ಮೆರುಗು ನೀಡಿತು. ಮೆರವಣಿಗೆಯಲ್ಲಿನಾನಾ ವಾದ್ಯಗಳು ಮತ್ತು ವಿವಿಧ ಬಗೆಯ ಧ್ವನಿಸುರಳಿಗಳು ಮೆರವಣಿಗೆಗೆ ಮೆರಗು ನೀಡಿದವು. 10 ದಿನಗಳ ಕಾಲ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ಮಂದಿರದಲ್ಲಿ ನಿತ್ಯ ಪೂಜೆ, ಗಣಹೋಮ, ಪೂರ್ಣಹುತಿ, ಅನ್ನಸಂತರ್ಪಣೆ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮೆರವಣಿಗೆ‌ಯ ಸಂದರ್ಭದಲ್ಲಿ ಯುವಕರು ತಲೆಗೆ ಕೇಸರಿ ಬಣ್ಣದ ರುಮಾಲುಗಳನ್ನು ಧರಿಸಿದ್ದರು. ಅಲ್ಲದೇ ಕೇಸರಿಯ ಧ್ವಜಗಳನ್ನು ಹಿಡಿದುಕೊಂಡು ಡೋಲು, ಡಿಜೆ ಸದ್ದಿಗೆ ನೃತ್ಯ ಮಾಡುತ್ತಾ ಸಂಭ್ರಮಿಸಿದರು. ಮಕ್ಕಳು ಸಹ ಹೆಜ್ಜೆ ಹಾಕಿದರು. ಸ್ವಯಂ ಪ್ರೇರಿತರಾಗಿ ಅಂಗಡಿ ಮುಗ್ಗಟ್ಟುಗಳಿಗೆ ಕೆಲವರು ಬೀಗ ಹಾಕಿ ಬಂದ್‌ ಮಾಡುವ ಮೂಲಕ ಮೆರವಣಿಗೆಗೆ ಸಾಥ್‌ ನೀಡಿದರು. ಪಟ್ಟಣದ ಐಬಿ ವೃತ್ತ, ಮುಖ್ಯರಸ್ತೆ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ಕೇಸರಿ ಬಾವುಟ ರಾರಾಜಿಸುತ್ತಿದ್ದವು.
ಹಿಂದು ಮಹಾಗಣಪತಿಯ ಸಮಿತಿಯ ಸದಸ್ಯರು ಹಾಗೂ ಭಕ್ತರು ಪಕ್ಷ, ಜಾತಿ-ಭೇದ ಮರೆತು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. 

ಗಣಪತಿಯನ್ನು ಕಂಣ್ತುಬಿಸಿಕೊಳ್ಳಲು ರಸ್ತೆಯ ಇಕ್ಕೆಲಗಳಲ್ಲಿ, ಕಾಂಪೌಂಡ್‌, ಕಟ್ಟಡಗಳ ಮೇಲೆ ನೂರಾರು ಸಾರ್ವಜನಿಕರು ಸೇರಿದ್ದರು. ಯಾವುದೇ ಅಹಿತಕರ ಘಟನೆಗಳಿಲ್ಲದೇ ಶಾಂತಿಯುತವಾಗಿ ನಡೆದ ಮೆರವಣಿಗೆಯುದ್ದಕ್ಕೂ ಗಣಪತಿ ಬಪ್ಪಾ ಮೋರಯಾ ಎನ್ನುವ ಘೋಷಣೆಗಳು ಮೊಳಗಿದವು.  ಮಾಜಿ ಸಚಿವ ಗೂಳಿಹಟ್ಟಿ ಡಿ.ಶೇಖರ್‌ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಶಾಸಕ ಬಿ.ಜಿ. ಗೋವಿಂದಪ್ಪ ಕಾರ್ಯಕ್ರಮದಲ್ಲಿ ಭಕ್ತರಿಗೆ ಪ್ರಸಾದ ವಿತರಿಸಿದರು. ಪಟ್ಟಣದ ಪ್ರಮುಖರು ಉಪಸ್ಥಿತರರಿದ್ದರು ಮೆರವಣಿಗೆಯುದ್ದಕ್ಕೂ ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿತ್ತು. ಪೊಲೀಸರು ಕ್ಯಾಮೆರಾದಲ್ಲಿ ಮೆರವಣಿಗೆಯ ದೃಶ್ಯವಾಳಿಗಳನ್ನು ಸೆರೆ ಹಿಡಿಯುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next