Advertisement
ಕೆಲ ತಿಂಗಳ ಹಿಂದೆ 5-6 ರೂ. ಗೆ ಕೊಟ್ಟರೂ ತೆಂಗನ್ನು ಖರೀದಿಸುವವರೇ ಇರಲಿಲ್ಲ. 20 ವರ್ಷದ ಕೆಳಗಿನ ದರಕ್ಕೆ ಕುಸಿದ ಕಾರಣ ತೆಂಗು ಬೆಳೆಗಾರರು ಕಂಗಾಲಾಗಿದ್ದರು. ಆದರೆ ಕಳೆದ ತಿಂಗಳು 14 ರೂ. ಇದ್ದ 1 ಕೆ.ಜಿ. ತೆಂಗಿನ ಬೆಲೆ ಈಗ ಸರಿ ಸುಮಾರು ಎರಡು ಪಟ್ಟು ಅಂದರೆ 27 ರೂ. ವರೆಗೆ ಏರಿಕೆ ಕಂಡಿದೆ. ಅದಲ್ಲದೆ ಕೊಬ್ಬರಿಯ ದರದಲ್ಲೂ ಪ್ರಗತಿ ಕಂಡಿದ್ದು, 50 ರೂ. ಇದ್ದ ಬೆಲೆ ಈಗ 76 ರೂ. ಗೆ ಏರಿಕೆಯಾಗಿದೆ. ಮೊದಲೆಲ್ಲ ದೀಪಾವಳಿ ಕಳೆದ ಬಳಿಕ ದರದಲ್ಲಿ ಪ್ರಗತಿಯಾಗುತ್ತಿತ್ತು. ಆದರೆ ಈಗ ಅದು ಸಾಮಾನ್ಯವಾಗಿ ಮಕರ ಸಂಕ್ರಮಣದ ಅನಂತರ ತೆಂಗಿಗೆ ಬೇಡಿಕೆ ಹೆಚ್ಚಳದ ಜತೆಗೆ ದರ ಏರಿಕೆಯು ಕಾಣುತ್ತದೆ.
ಕೇರಳ ಹೊರತುಪಡಿಸಿ ದೇಶದಲ್ಲೇ ತೆಂಗು ಬೆಳೆಯುವ ಪಟ್ಟಿಯಲ್ಲಿ ಕರ್ನಾಟಕ ದ್ವಿತೀಯ ಸ್ಥಾನದಲ್ಲಿದ್ದು, ಅದರಲ್ಲೂ ಕರಾವಳಿ ಭಾಗದಲ್ಲಿ ಅಧಿಕವಾಗಿ ತೆಂಗು ಬೆಳೆಗಾರರಿದ್ದಾರೆ. ಆದರೆ ಇತ್ತೀಚೆಗೆ ತೆಂಗಿನ ಉತ್ಪಾದನೆಯ ಪ್ರಮಾಣದಲ್ಲಿ ಇಳಿಕೆ ಕಾಣುತ್ತಿದ್ದು, ಇದರಿಂದ ಮುಂದಿನ ದಿನಗಳಲ್ಲಿ ತೆಂಗಿಗೆ ಇನ್ನಷ್ಟು ಬೇಡಿಕೆ ಹೆಚ್ಚಳವಾಗುವ ಸಾಧ್ಯತೆಗಳಿವೆ. ಬೇಡಿಕೆ ಹೆಚ್ಚಾದಂತೆ ದರದಲ್ಲಿಯೂ ಹೆಚ್ಚಳವಾಗಲಿದೆ. ಒಂದು ಕೆ.ಜಿ. ತೆಂಗಿನಕಾಯಿಗೆ 40 ರೂ. ವರೆಗೆ ದರ ಏರಿಕೆಯಾಗುವ ಸಂಭವವಿದೆ. ತೆಂಗಿನ ಪೌಡರ್‌ಗೆ ಭಾರೀ ಬೇಡಿಕೆ
ತೆಂಗಿಗೆ ಒಮ್ಮಿಂದೊಮ್ಮೆಲೆ ದರ ಏರಿಕೆಯಾಗಲು ಕಾರಣ ತೆಂಗಿನ ಕಾಯಿಯ ಹೂವನ್ನು ಯಂತ್ರದ ಮೂಲಕ ಪೌಡರ್ ಆಗಿ ಮಾರ್ಪಡಿಸಿ ಅದನ್ನು ಡಬ್ಬದಲ್ಲಿ ಪ್ಯಾಕ್ ಮಾಡಿ ದೇಶದ ಬೇರೆ ಬೇರೆ ರಾಜ್ಯಗಳು, ಮಾತ್ರವಲ್ಲದೆ ಗಲ್ಫ್ ದೇಶಗಳಿಗೂ ರಫ್ತು ಮಾಡಲಾಗುತ್ತದೆ. ಅದಕ್ಕೀಗ ಎಲ್ಲಿಲ್ಲದ ಬೇಡಿಕೆ ಬಂದಿದೆ. ಉಡುಪಿಯ ಹೆಬ್ರಿಯಲ್ಲಿ ಈ ರೀತಿಯ ತಂತ್ರಜ್ಞಾನವಿದ್ದು, ದಿನವೊಂದಕ್ಕೆ 10ರಿಂದ 20 ಸಾವಿರ ತೆಂಗಿನಕಾಯಿಯ ಹೂವನ್ನು ಸಂಗ್ರಹಿಸಲಾಗುತ್ತದೆ.
Related Articles
ತೆಂಗಿಗೆ ಇರುವ ಮೌಲ್ಯಗಳ ಬಗ್ಗೆ ರೈತರಿಗೆ ಮಾಹಿತಿ ನೀಡುವ ಕಾರ್ಯ ಆಗಬೇಕು. ಆಗ ಮಾತ್ರ ತೆಂಗಿನ ಉತ್ಪಾದನೆ ಹೆಚ್ಚಳವಾಗಲು ಸಾಧ್ಯ. ತೆಂಗಿನ ಹೂವಿನಿಂದ ಮಾಡುವ ಪೌಡರ್ ಮಾಡುವ ಬಗ್ಗೆ ಮಾಹಿತಿ, ಕೊಬ್ಬರಿಯ ಶೇಖರಣೆ, ತೆಂಗಿನ ಸಿಪ್ಪೆಗೂ ಬೇಡಿಕೆ ಇದೆ. ಆ ಬಗ್ಗೆ ತಿಳಿಸಿಕೊಡುವ ಕೆಲಸ ಆಗಬೇಕು. ನಾರು, ನಾರಿನ ಬಳಿಕ ಉಳಿಯುವ ಸ್ಪಂಜಿನಂತೆ ಇರುವ ವಸ್ತುಗಳಿಗೂ ಭಾರೀ ಬೇಡಿಕೆ ಇದೆ.
Advertisement
ತೆಂಗಿನ ಕಾಯಿಗೆ 20 ವರ್ಷಗಳ ಹಿಂದೆ 7-8 ರೂ. ದರ ಇತ್ತು. ಆಗ ಗೊಬ್ಬರ, ವಿದ್ಯುತ್ ದರ ಎಲ್ಲವೂ ಕಡಿಮೆ ಇತ್ತು. ಈಗ ಗೊಬ್ಬರದಿಂದ ಹಿಡಿದು ಎಲ್ಲದರ ಬೆಲೆಯಲ್ಲಿಯೂ ಹತ್ತು ಪಟ್ಟು ಹೆಚ್ಚಳವಾಗಿದ್ದು, ಆ ನಿಟ್ಟಿನಲ್ಲಿ ಕನಿಷ್ಠ ಅಂದರೂ 40 ರೂ. ಸಿಗವಂತೆ ಆಗಬೇಕು.
ಉತ್ಸಾಹದಾಯಕ ಬೆಳವಣಿಗೆಬೆಲೆ ಏರಿಕೆಯಲ್ಲಿ ಪ್ರಗತಿ ಕಂಡಿದ್ದು, ತೆಂಗು ಬೆಳೆಗೆ ಪ್ರೋತ್ಸಾಹ ಸಿಗಲು ಸಹಾಕಾರಿ. ಇದೊಂದು ಉತ್ಸಾಹದಾಯಕ ಬೆಳವಣಿಗೆ. ತೆಂಗಿಗೆ ಕನಿಷ್ಠ 40 ರೂ. ದರ ಆದರೂ ಇರಬೇಕು. ಆಗ ಮಾತ್ರ ಬೆಳೆಗಾರರು ಲಾಭ ಗಳಿಸಲು ಸಾಧ್ಯ. ಆಗಾಗ ಬೆಲೆಯಲ್ಲಿ ವ್ಯತ್ಯಯ ಉಂಟಾಗುವುದರಿಂದ ಬೆಳೆಗಾರರು ಸಂಕಷ್ಟ ಎದುರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಎದುರಾಗಲಿದ್ದು, ಆಗ ತೆಂಗು ಬೆಲೆಯ ಇಳುವರಿ ಇಳಿಮುಖವಾಗಲಿದೆ. ಆಗ ದರ ಏರಿಕೆಯಾದರೆ ಏನೂ ಪ್ರಯೋಜನವಾಗದು.
-ಬಂಟಕಲ್ಲು ರಾಮಕೃಷ್ಣ ಶರ್ಮ, ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಕರಾವಳಿಗೆ ಮಾತ್ರ ತಲುಪಲ್ಲ
ಸರಕಾರ ಕಾಟಚಾರಕ್ಕೆ ತೆಂಗಿಗೆ ಬೆಂಬಲ ಬೆಲೆ ಘೋಷಣೆ ಮಾಡಿದರೂ, ಅದು ಕರಾವಳಿ ಭಾಗದ ರೈತರಿಗೆ ತಲುಪುವುದೇ ಇಲ್ಲ. ದರ ಕನಿಷ್ಠ ಮಟ್ಟಕ್ಕೆ ಇಳಿಕೆಯಾದಾಗ ಖರೀದಿ ಮಾರುಕಟ್ಟೆಯನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಅಲ್ಲಿ ತೆಂಗನ್ನು ಖರೀದಿ ಮಾಡಲೇ ಇಲ್ಲ. ಅಲ್ಲಿಗೆ ಅದು ಮುಚ್ಚಿ ಹೋಯಿತು. ಉತ್ಪಾದನೆ ವೆಚ್ಚಕ್ಕೆ ಅನುಗುಣವಾಗಿ ಬೆಳೆಯು ಸ್ವಲ್ಪ ಜಾಸ್ತಿಯಿದ್ದರೆ ತೆಂಗು ಬೆಳೆಗಾರರು ನೆಮ್ಮದಿಯ ಜೀವನ ನಡೆಸಬಹುದು.
– ಕುದಿ ಶ್ರೀನಿವಾಸ್ ಭಟ್, ಜಿಲ್ಲಾ ಕೃಷಿಕ ಸಂಘದ ಪ್ರಧಾನ ಕಾರ್ಯದರ್ಶಿ ಕೇರಳ ಸರಕಾರ ಮಾದರಿ
ತೆಂಗು ಬೆಳೆಗಾರರಿಗೆ ಕೇರಳ ಸರಕಾರ ನೀಡುವಷ್ಟು ಉತ್ತೇಜನ ನಮ್ಮ ಸರಕಾರ ನೀಡುವುದಿಲ್ಲ. ಅಲ್ಲಿ ಮಾತ್ರ ಬೆಳೆ ಹೆಚ್ಚಳ ಸಂಬಂಧ ಕೇಂದ್ರ ಸರಕಾರಕ್ಕೆ ಒತ್ತಡ ಹಾಕುತ್ತಾರೆ. ನಮ್ಮಲ್ಲೂ ಆ ರೀತಿಯ ಬೆಳವಣಿಗೆ ನಡೆದರೆ ಒಳ್ಳೆಯದು. ರೈತರ ಹಿತದೃಷ್ಟಿಯಿಂದ ಮಂಗನ ಸಮಸ್ಯೆಯಿಂದ ಮುಕ್ತಿ ಕೊಡಿಸುವ ಕಾರ್ಯ ಆಗಬೇಕಿದೆ. ನೀರಾ ತೆಗೆಯಲು ಸರಕಾರ ಅನುಮತಿ ನೀಡಿದರೆ ತೆಂಗು ಬೆಳೆಗೆ ಮತ್ತಷ್ಟು ಉತ್ತೇಜನ ಸಿಗಲು ಸಾಧ್ಯ.
– ಜಯಶೀಲ ಶೆಟ್ಟಿ, ತೆಂಗು ಬೆಳೆಗಾರ – ಪ್ರಶಾಂತ್ ಪಾದೆ