ಹುಬ್ಬಳ್ಳಿ: ದೇಶದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಅಪಾಯಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿದ್ದು ಈ ವಿಷಯದಲ್ಲಿ ವಿಶ್ವವಿದ್ಯಾಲಯಗಳು ಹಾಗೂ ಮಹಾವಿದ್ಯಾಲಯಗಳು ವಿಶೇಷ ಕಾಳಜಿ ವಹಿಸುವುದು ಅವಶ್ಯವಿದೆ ಎಂದು ಸಂಸದ ಪ್ರಹ್ಲಾದ ಜೋಶಿ ಆತಂಕ ವ್ಯಕ್ತಪಡಿಸಿದ್ದಾರೆ.
ಗುರುವಾರ ಲೋಕಸಭೆ ಕಾರ್ಯ ಕಲಾಪದ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ದೇಶದಲ್ಲಿ ಪ್ರಸ್ತುತ ಪ್ರತಿ ಲಕ್ಷ ಜನಸಂಖ್ಯೆಯಲ್ಲಿ ಸರಾಸರಿ 30 ರಿಂದ 40ರ ಪ್ರಮಾಣದಲ್ಲಿ 15ರಿಂದ 29 ವರ್ಷದೊಳಗಿನ ಯುವಕ-ಯುವತಿಯರು ಆತ್ಮಹತ್ಯೆಯಂತಹ ಕ್ರಮಕ್ಕೆ ತುತ್ತಾಗುತ್ತಿರುವ ವರದಿಗಳಿವೆ.
ದೇಶ ಇಂದು ಪ್ರಗತಿ ಪಥದಲ್ಲಿ ಸಾಗುತ್ತಿರುವ ಸಂದರ್ಭದಲ್ಲಿ ನಮ್ಮ ವಿದ್ಯಾರ್ಥಿಗಳ ಇಂತಹ ಕ್ರಮಗಳಿಗೆ ಏನು ಕಾರಣವಿರಬಹುದು ಎಂಬುದನ್ನು ಕಂಡು ಹಿಡಿಯಬೇಕಿದೆ. ಕೆಲವು ಮಾಹಿತಿಗಳ ಪ್ರಕಾರ ವಿದ್ಯಾರ್ಥಿಗಳು ಇಂತಹ ಕಳವಳಕಾರಿ ನಡೆಯ ಹಿಂದೆ ಪರೀûಾ ಒತ್ತಡ, ಪಾಲಕರ ಒತ್ತಡ ಅಥವಾ ಇದೇ ರೀತಿಯ ಒತ್ತಡಗಳಿಂದ ವಿದ್ಯಾರ್ಥಿಗಳು ಮಾದಕ ವಸ್ತುಗಳ ದಾಸರಾಗುತ್ತಿರುವುದು ಕಾರಣವಿರಬಹುದು.
ವಿದ್ಯಾರ್ಥಿಗಳು ಹೆಚ್ಚಿನ ಸಮಯವನ್ನು ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿಯೇ ಕಳೆಯಬೇಕಿದ್ದು, ಶಿಕ್ಷಕರು ಹಾಗೂ ಪ್ರಿನ್ಸಿಪಾಲರುಗಳೊಂದಿಗೆ ಹೆಚ್ಚು ಸಂವಹನ ಮಾಡುವ ಪ್ರಸಂಗಳಿರುತ್ತವೆ. ತಮ್ಮ ಸಮಸ್ಯೆಗಳನ್ನು ಅವರು ಶಿಕ್ಷಕರೊಂದಿಗೆ ಹೇಳಿಕೊಂಡಾಗ ಶಿಕ್ಷಕರು ಸಮಾಧಾನದಿಂದ ಅವರ ಸಮಸ್ಯೆ ಕೇಳಿ ಪರಿಹರಿಸುವುದು ಅವಶ್ಯ. ಆದ್ದರಿಂದ ಈ ವಿಷಯದಲ್ಲಿ ವಿಶ್ವವಿದ್ಯಾಲಯಗಳು, ಮಹಾವಿದ್ಯಾಲಯಗಳು ಎಚ್ಚೆತ್ತುಕೊಳ್ಳುವುದು ಅಗತ್ಯ.
ಈ ಹಿನ್ನೆಲೆಯಲ್ಲಿ ಸರಕಾರ, ಕಾಲೇಜುಗಳಿಗೆ ಹಾಗೂ ವಿಶ್ವವಿದ್ಯಾಲಯಗಳಲ್ಲಿ ವಿಶೇಷ ಮಾರ್ಗದರ್ಶಿ ವಿಭಾಗ ತೆರೆದು ವಿದ್ಯಾರ್ಥಿಗಳಿಗೆ ಇಂತಹ ಸಂದರ್ಭದಲ್ಲಿ ಸೂಕ್ತ ಮಾರ್ಗದರ್ಶನ ನೀಡಿ ವಿದ್ಯಾರ್ಥಿಗಳ ಅಮೂಲ್ಯ ಜೀವನ ಉಳಿಸಬೇಕೆಂದು ಜೋಶಿ ಅವರು ಒತ್ತಾಯಿಸಿದ್ದಾಗಿ ಸಂಸದರ ಕಚೇರಿ ಪ್ರಕಟನೆ ತಿಳಿಸಿದೆ.