Advertisement

ಬಾಗಲಕೋಟೆ: ರೈತರಿಗೆ ಚಿಂತೆ ಹಚ್ಚಿದ ಚಿತ್ತಿ ಮಳೆ- ಈರುಳ್ಳಿ ಬೆಳೆಗಾರರ ಕಣ್ಣೀರು!

05:47 PM Oct 18, 2024 | Team Udayavani |

ಉದಯವಾಣಿ ಸಮಾಚಾರ
ಬಾಗಲಕೋಟೆ: ಕಳೆದೆರಡು ದಿನಗಳಿಂದ ಧಾರಾಕಾರ ಸುರಿಯುತ್ತಿರುವ ಚಿತ್ತಿ ಮಳೆಗೆ, ರೈತ ಸಮೂಹವನ್ನು ಚಿಂತೆಗೀಡು ಮಾಡಿದೆ. ಇನ್ನೇನು ಮುಂಗಾರು ಹಂಗಾಮು ಮುಗಿದು, ಹಿಂಗಾರಿಗೆ ತಯಾರಿ ಮಾಡಿಕೊಳ್ಳುತ್ತಿದ್ದ ರೈತನಿಗೆ, ಚಿತ್ತಿ ಮಳೆಯ ರಭಸ ಹಿಂಗಾರಿ ವಿಳಂಬಕ್ಕೆ ಕಾರಣವಾಗಿದೆ.

Advertisement

ಹೌದು, ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಬಿಟ್ಟುಬಿಡದೇ ಮಳೆ ಸುರಿಯುತ್ತಿದೆ. ಹಿಂಗಾರು ಹಂಗಾಮು ಆರಂಭಗೊಂಡಿದ್ದು, ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳಬೇಕಿದ್ದ ರೈತರಿಗೆ, ನಿರಂತರ ಮಳೆ ಅಡ್ಡಿಯಾಗಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ 361.80 ಸಾಮಾನ್ಯ ಮಳೆ ಪ್ರಮಾಣವಿದ್ದು, ಒಟ್ಟು 384.50 ಎಂಎಂ ಮಳೆಯಾಗಿರುವುದು ದಾಖಲಾಗಿದೆ. ಪ್ರಸಕ್ತ ತಿಂಗಳಿಂದ ಹಿಂಗಾರು ಹಂಗಾಮು ಆರಂಭಗೊಂಡಿದ್ದು, ಅ.15ರ ವರೆಗೆ 55.4 ಎಂಎಂ ಮಳೆ ದಾಖಲಾಗಿದೆ. ಆದರೆ, ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆ, ಹಿಂಗಾರು ಬಿತ್ತನೆಗೆ ಅವಕಾಶ ಕೊಡುತ್ತಾ ಎಂಬ ಆತಂಕದಲ್ಲಿ ರೈತ ವಲಯದಲ್ಲಿ ಆವರಿಸಿದೆ.

ತೋಟಗಾರಿಕೆ ಬೆಳೆಗೆ ಕುತ್ತು: ನಿರಂತರ ಮಳೆಯಿಂದ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗೆ ತೀವ್ರ ತೊಂದರೆಯಾಗಿದೆ. ಅದರಲ್ಲೂ ಬಾಳೆ, ಈರುಳ್ಳಿ, ಮೆಣಸಿನಕಾಯಿ, ವಿವಿಧ ತರಕಾರಿ ಸಹಿತ ತೋಟಗಾರಿಕೆ ಬೆಳೆಗಳು ನೀರಿನಲ್ಲಿ ನಿಂತು ಹಾನಿಯಾಗಿದೆ. ಮುಖ್ಯವಾಗಿ ಈರುಳ್ಳಿ ಬೆಳೆದು, ಲಕ್ಷಾಂತರ ಲಾಭದ ನಿರೀಕ್ಷೆಯಲ್ಲಿದ್ದ ರೈತರ ಕಣ್ಣಲ್ಲಿ ನೀರು ತರಿಸುವಂತೆ ಮಾಡಿದೆ.

ಜಿಲ್ಲೆಯಲ್ಲಿ ಈ ಬಾರಿ 31 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ ಬೆಳೆದಿದ್ದು, ಈ ವರೆಗೆ ಶೇ.20ರಷ್ಟು ಮಾತ್ರ ಕಟಾವು ಆಗಿದೆ. ಉಳಿದ ಸುಮಾರು ಶೇ.75ರಷ್ಟು ಈರುಳ್ಳಿ ಬೆಳೆ ಇಂದಿಗೂ ಹೊಲದಲ್ಲಿಯೇ ಇದ್ದು, ರೈತರು, ಈರುಳ್ಳಿ ಕಿತ್ತಿ ಬದುವಿಗೆ ಹಾಕಿದ್ದಾರೆ. ಆದರೆ, ನಿರಂತರ ಮಳೆ ಸುರಿಯುತ್ತಿರುವುದರಿಂದ ಬದುವಿನಲ್ಲಿರುವ ಈರುಳ್ಳಿ ತಂದು, ಸಂಸ್ಕರಣೆ ಮಾಡಲೂ ಸಾಧ್ಯವಾಗುತ್ತಿಲ್ಲ. ಈ ಮಳೆ ಇನ್ನೆರಡು ದಿನ ಹೀಗೆಯೇ ಮುಂದುವರೆದರೆ ಶೇ.50ಕ್ಕೂ ಹೆಚ್ಚು ಈರುಳ್ಳಿ ಹೊಲದಲ್ಲಿಯೇ ಕೊಳೆತು ಹೋಗುವ
ಸಾಧ್ಯತೆ ಇದೆ ಎನ್ನಲಾಗಿದೆ.

Advertisement

ಸಮೀಕ್ಷೆಗೂ ಬಿಡ್ತಿಲ್ಲ ಮಳೆರಾಯ: ಪ್ರತಿದಿನವೂ ಬೆಳ್ಳಂಬೆಳಗ್ಗೆಯೇ ಶುರುವಾಗುವ ಮಳೆ, ಆಗೊಮ್ಮೆ, ಈಗೊಮ್ಮೆ ಸ್ವಲ್ಪ ಬಿಡುವು ಕೊಟ್ಟು, ಪುನಃ ಧಾರಾಕಾರವಾಗಿ ಸುರಿಯಲಾರಂಭಿಸಿದೆ. ಜನರು ಮನೆಯಿಂದಲೂ ಹೊರ ಬರದ ಪರಿಸ್ಥಿತಿ
ಒಂದೆಡೆಯಾದರೆ, ಹೊಲದಲ್ಲಿ ಕಟಾವು ಮಾಡಿ ಹಾಕಿದ ಈರುಳ್ಳಿ ನೋಡಿ, ರೈತರು ಕಣ್ಣೀರು ಹಾಕುವ ಪರಿಸ್ಥಿತಿ ಬಂದಿದೆ.

ಜಿಲ್ಲೆಯ 9 ತಾಲೂಕು ಪೈಕಿ ಬಾಗಲಕೋಟೆ ಮತ್ತು ಮುಧೋಳ ತಾಲೂಕಿನಲ್ಲಿ ಅತಿಹೆಚ್ಚು ಈರುಳ್ಳಿ ಬೆಳೆದಿದ್ದು, ಬಹುತೇಕ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಿರಂತರ ಮಳೆಯಿಂದ  ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ, ಬೆಳೆ ಹಾನಿ ಸಮೀಕ್ಷೆ ನಡೆಸಲೂ ಅವಕಾಶ ಸಿಗುತ್ತಿಲ್ಲ ಎನ್ನಲಾಗಿದೆ.

131 ಹೆಕ್ಟೇರ್‌ ಹಾನಿ: ಕಳೆದ ಎರಡು ದಿನಗಳಿಂದ ಮಳೆ ಸುರಿಯುವ ಮೊದಲು ಜಿಲ್ಲೆಯಲ್ಲಿ ಅತಿಯಾದ ಮಳೆ ಮತ್ತು ಪ್ರವಾಹದಿಂದ ಆದ ತೋಟಗಾರಿಕೆ ಬೆಳೆ ಹಾನಿ ಕುರಿತು ಅಧಿಕಾರಿಗಳು  ಸಮೀಕ್ಷೆ ನಡೆಸಿ, ಸರ್ಕಾರಕ್ಕೆ ಪ್ರಾಥಮಿಕ ವರದಿ
ಸಲ್ಲಿಸಿದ್ದಾರೆ. ಆ ವರದಿಯ ಅನ್ವಯ ಅ.15ರ ವರೆಗೆ ಒಟ್ಟು 206 ಲಕ್ಷ ಮೊತ್ತದ 131 ಹೆಕ್ಟೇರ್‌ ತೋಟಗಾರಿಕೆ ಬೆಳೆ ಹಾನಿಯಾಗಿದೆ ಎಂದು ಪ್ರಾಥಮಿಕ ವರದಿ ಸಲ್ಲಿಕೆಯಾಗಿದೆ. ಒಟ್ಟಾರೆ, ಚಿತ್ತಿ ಮಳೆ ರೈತ ಸಮೂಹವನ್ನು ಚಿಂತೆಗೀಡು ಮಾಡಿದೆ. ಹಿಂಗಾರು ಬಿತ್ತನೆಗೆ ಸಜ್ಜಾದ ರೈತರಿಗೆ, ನಿರಂತರ ಮಳೆಯಿಂದ ಬೆಳೆಯುವ ಬೆಳೆಗಳ ಬದಲಾವಣೆಗೂ ಕಾರಣವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next