ಬೆಂಗಳೂರು: ‘ಸ್ನೇಹಿತ ಸಿದ್ದರಾಜು ಅಲಿಯಾಸ್ ಸಿದ್ದ ಪದೇ ಪದೆ ಮನೆ ಬಳಿ ಬಂದು ನನ್ನ ಪತ್ನಿಗೆ ಬೋರ್‌ವೆಲ್ ಕೊರೆಸಿದ ಹಣ ಕೊಡುವಂತೆ ಪೀಡಿಸುತ್ತಿದ್ದ. ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿದ್ದು, ಈ ವೇಳೆ ಪಿಸ್ತೂಲ್‌ನಿಂದ ಗುಂಡು ಹಾರಿದೆ.
ಮಂಗಳವಾರ ಸಂಜೆ ಹಣಕಾಸಿನ ವಿಚಾರವಾಗಿ ಸ್ನೇಹಿತ ಸಿದ್ದರಾಜು ಮೇಲೆ ಪರವಾನಗಿ ಪಿಸ್ತೂಲ್‌ನಿಂದ ಗುಂಡು ಹಾರಿಸಿದ ಬನಶಂಕರಿಯ ಉದ್ಯಮಿ ಪ್ರಹ್ಲಾದ್ ಪೊಲೀಸರ ಎದುರು ಈ ರೀತಿ ತಪ್ಪೊಪ್ಪಿಗೆ ಹೇಳಿಕೆ ದಾಖಲಿಸಿದ್ದಾನೆ.
ತಿಪ್ಪಸಂದ್ರ ನಿವಾಸಿ ಸಿದ್ದರಾಜು ಈ ಹಿಂದೆ ಬೋರ್‌ವೆಲ್ ಕೊರೆಸುವ ಲಾರಿಗಳ ಮಾಲೀಕರಾಗಿದ್ದರು. ಇತ್ತೀಚೆಗೆ ವ್ಯವಹಾರದಲ್ಲಿ ಭಾರಿ ನಷ್ಟ ಉಂಟಾದರಿಂದ ಲಾರಿಗಳನ್ನು ಮಾರಾಟ ಮಾಡಿದ್ದರು. ಆದರೆ, ಇತರೆ ಬೋರ್‌ವೆಲ್ ಲಾರಿಗಳ ಮಾಲೀಕರ ಜತೆ ಸಂಪರ್ಕ ಹೊಂದಿದ್ದರು. ಆರೋಪಿ ಪ್ರಹ್ಲಾದ್ ತನಗೆ ಸೇರಿದ ನಿವೇಶನವೊಂದರಲ್ಲಿ ಬೋರ್‌ವೆಲ್ ಕೊರೆಸಲು ಸಿದ್ದರಾಜು ಅವರಿಗೆ ಹೇಳಿದ್ದ. ಪರಿಚಿತರು ಕಡಿಮೆ ಬೆಲೆಗೆ ಬೋರ್ ಕೊರೆದುಕೊಡುತ್ತಾರೆ. ಅವರಿಗೇ ಹೇಳುತ್ತೇನೆ ಎಂದು ಸಿದ್ದರಾಜು ಹೇಳಿದ್ದರು. ಆದರೆ, ಈ ನಿವೇಶನದಲ್ಲಿ ನೀರು ಸಿಕ್ಕಿರಲಿಲ್ಲ.
ಆರೋಪಿ ಪ್ರಹ್ಲಾದ್, ಬೋರ್‌ವೇಲ್ ಕೊರೆದ ಸಂಬಂಧ ಕೇವಲ 13 ಸಾವಿರ ರೂ. ಕೊಡುತ್ತೇನೆ ಎಂದಿದ್ದ. ಇದಕ್ಕೆ ನಿರಾಕರಿಸಿದ ಸಿದ್ದರಾಜು 74 ಸಾವಿರ ರೂ. ಆಗಿದೆ, ಅಷ್ಟೂ ಹಣ ಕೊಡಲೇ ಬೇಕು ಎಂದು ಪಟ್ಟು ಹಿಡಿದಿದ್ದರು. ಇದೇ ವಿಚಾರವಾಗಿ ಇಬ್ಬರ ನಡುವೆ ಪದೇ ಪದೇ ಜಗಳ ನಡೆಯುತ್ತಿತ್ತು.
ಈ ಹಿನ್ನೆಲೆಯಲ್ಲಿ ಮಂಗಳವಾರ ಕೋಣನ ಕುಂಟೆಯಲ್ಲಿರುವ ಸಿದ್ದರಾಜು, ಪ್ರಹ್ನಾದ್ ಇಲ್ಲದ ವೇಳೆ ಅವರ ಮನೆಗೆ ಬಂದು ಅವರ ಪತ್ನಿಗೆ ನಿಮ್ಮ ಪತಿ ಬೋರ್‌ವೆಲ್ ಕೊರೆಸಿದ ಹಣ ಕೊಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಗಲಾಟೆ ಮಾಡಿ ದ್ದರು. ಹೀಗಾಗಿ ಪ್ರಹ್ಲಾದ್ ಪತ್ನಿ, ಪತಿಗೆ ಕರೆ ಮಾಡಿ, ಕೂಡಲೇ ಸಿದ್ದರಾಜುಗೆ ಹಣ ಹಿಂದಿರು ಗಿಸಿ, ಆತ ಪದೇ ಪದೇ ಮನೆ ಬಳಿ ಬಂದು ಹಣ ಕೇಳುವುದು ಸರಿ ಕಾಣುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.
ಆಕಸ್ಮಿಕವಾಗಿ ಗುಂಡು ಹಾರಿದೆ
ಆಕ್ರೋಶಗೊಂಡ ಪ್ರಹ್ಲಾದ್ ಕೂಡಲೇ ಸ್ನೇಹಿತ ಸಿದ್ದರಾಜುಗೆ ಕರೆ ಮಾಡಿ ಹಣ ಕೊಡುತ್ತೇನೆ ಮನೆಗೆ ಬರುವಂತೆ ಸೂಚಿಸಿದ್ದಾರೆ. ಕೆಲ ಹೊತ್ತಿನಲ್ಲೇ ಮನೆಗೆ ಬಂದ ಸಿದ್ದರಾಜುಗೆ, ಹಣದ ವ್ಯವಹಾರ ಇರುವುದು ನಮ್ಮಿಬ್ಬರ ನಡುವೆ. ಪತ್ನಿ ಬಳಿ ಬಂದು ಹಣ ಕೇಳುವುದು ಸರಿಯಲ್ಲ. ಈ ಹಿಂದೆ 13 ಸಾವಿರ ರೂ. ಕೊಡುತ್ತೇನೆ ಎಂದಿದ್ದೆ. ಈಗ ಅದಕ್ಕೆ ಏಳು ಸಾವಿರ ಸೇರಿಸಿ 20 ಸಾವಿರ ರೂ. ಕೊಡುತ್ತೇನೆ ಎಂದು ಹೇಳಿದ್ದಾರೆ. ಈ ವಿಚಾರವಾಗಿ ಇಬ್ಬರು ನಡುವೆ ಮತ್ತೆ ಜಗಳವಾಗಿದೆ. ಇದರಿಂದ ಆಕ್ರೋಶಗೊಂಡ ಪ್ರಹ್ಲಾದ್, ಸಿದ್ದರಾಜು ಕಡೆ ಪಿಸ್ತೂಲ್ ತೋರಿಸಿದ್ದಾನೆ. ಮತ್ತೂಂದೆಡೆ ಸಿದ್ದರಾಜು ಕೂಡ, ನಿನಗೆ ತಾಕತ್ತು ಇದ್ದರೆ ಗುಂಡು ಹಾರಿಸು ನೋಡೋಣ ಎಂದು ಪಿಸ್ತೂಲ್ ಹಿಡಿದುಕೊಂಡಿದ್ದಾರೆ.. ಈ ವೇಳೆ ಇಬ್ಬರು ಪರಸ್ಪರ ಎಳೆದಾಡುವಾಗ ಪಿಸ್ತೂಲ್‌ನಿಂದ ಆಕಸ್ಮಿಕವಾಗಿ ಗುಂಡು ಹಾರಿದ್ದು, ಒಂದು ಗುಂಡು ಸಿದ್ದರಾಜು ತಲೆ ಭಾಗಕ್ಕೆ ತಗುಲಿದೆ ಎಂದು ಪ್ರಹ್ಲಾದ್ ಹೇಳಿಕೆ ದಾಖಲಿಸಿರುವುದಾಗಿ ಕೋಣನಕುಂಟೆ ಪೊಲೀಸರು ಹೇಳಿದರು.