ಬೆಂಗಳೂರು: ನಮ್ಮ ಮೆಟ್ರೋ ಹಸಿರು ಮಾರ್ಗದ ನ್ಯಾಷನಲ್ ಕಾಲೇಜು ನಿಲ್ದಾಣದಲ್ಲಿ ಸೋಮವಾರ ಸಂಜೆ 6.03ರ ವೇಳೆ ಭಾರೀ ಅನಾಹುತವೊಂದು ತಪ್ಪಿದೆ. ನಿಲ್ದಾಣದ ಪ್ರವೇಶ ದ್ವಾರ ಸಂಖ್ಯೆ 13ರಲ್ಲಿ ಇದ್ದಕ್ಕಿದಂತೆ ಮೇಲ್ಚಾವಣಿಯ ಹಲಗೆ ಮತ್ತು ಇಟ್ಟಿಗೆ ಕುಸಿದಿದ್ದು, ಪ್ರಯಾಣಿಕರು ಸ್ವಲ್ಪದಲ್ಲೇ ಅನಾಹುತದಿಂದ ಪಾರಾಗಿದ್ದಾರೆ.
ಚಾವಣಿಗೆ ಬಳಸಿದ ಹಲಗೆಗಳು ಮತ್ತು ಇಟ್ಟಿಗೆ ಕುಸಿದ ಪರಿಣಾಮ ವಿದ್ಯುತ್ ಚಾಲಿತ ಪ್ರವೇಶ ದ್ವಾರಕ್ಕೆ ಹಾನಿಯಾಗಿದೆ. 5 ತಿಂಗಳ ಹಿಂದೆ ಹನಿ ಕೋಂಬ್‌ನಿಂದಾಗಿ ಟ್ರಿನಿಟಿ ವೃತ್ತದ ಮೆಟ್ರೋ ಪಿಲ್ಲರ್‌ನಲ್ಲಿ ಬಿರುಕು ಕಾಣಿಸಿಕೊಂಡು ಸುದ್ದಿಯಲ್ಲಿದ್ದ ನಮ್ಮ ಮೆಟ್ರೋ, ಕಳಪೆ ಮೇಲ್ಚಾವಣಿ ನಿರ್ಮಾಣದಿಂದ ಮತ್ತೆ ಸುದ್ದಿಯಾಗಿದೆ. ಇದರೊಂದಿಗೆ ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರ ಸುರಕ್ಷತೆ ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.
ಮೆಟ್ರೋ ಪಿಲ್ಲರ್‌ನಲ್ಲಿ ಬಿರುಕು ಕಂಡಾಗ, ನಿರ್ವಹಣೆಗಾಗಿ ಪಿಲ್ಲರ್‌ಗಳ ಗುಣಮಟ್ಟ ಪರಿಶೀಲನೆ ಮಾಡಲಾಗುತ್ತದೆ. ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದ್ದ ಅಧಿಕಾರಿಗಳು, ಘಟನೆ ವರದಿಯಾದ ಮರು ದಿನವೇ ದೆಹಲಿಯಿಂದ ಪರಿಣಿತರನ್ನು ಕರೆಸಿ ಮೆಟ್ರೋ ಸಂಚಾರ ಸೇವೆ ಸ್ಥಗಿತಗೊಳಿಸಿ ದುರಸ್ಥಿ ಮಾಡಿಸಿದ್ದರು. ಶ್ರೀರಾಮಪುರ ಮೆಟ್ರೋ ನಿಲ್ದಾಣದಲ್ಲಿ ಎಸ್ಕಲೇಟರ್‌ನಿಂದ ಆಯ ತಪ್ಪಿ ಬಿದ್ದ ಮಗು ಗಾಯಗೊಂಡ ಘಟನೆ ಬಳಿಕ ಬಹುತೇಕ ಮೆಟ್ರೋ ನಿಲ್ದಾಣಗಳಲ್ಲಿ ಸೇಫ್ಟಿ ನೆಟ್ ಅಳವಡಿಸಲಾಗಿದೆ.
ಇದೇ ರೀತಿ 2017ರ ಅಕ್ಟೋಬರ್ ತಿಂಗಳಲ್ಲಿ ಒಮ್ಮೆ ಮೆಟ್ರೋ ಲಿಫ್ಟ್ನಲ್ಲಿ ಕೂಡ ಮೇಲ್ಚಾವಣಿ ಕಳಚಿತ್ತು. ಅದೃಷ್ಟಾವತ್ ಅಂದು ಲಿಫ್ಟ್ನಲ್ಲಿ ಪ್ರಯಾಣಿಕರು ಇರಲಿಲ್ಲ. ಅವಘಡಗಳು ಮರುಕಳಿಸುತಿದ್ದರೂ ಅಧಿಕಾರಿಗಳು ಮಾತ್ರ ಸೂಕ್ತ ಸುರಕ್ಷತಾ ಕ್ರಮ ಕೈಗೊಳ್ಳುತಿಲ್ಲ. ಸೋಮವಾರದ ಘಟನೆ ಬಗ್ಗೆ ಮಾಹಿತಿ ಪಡೆಯಲು ಯಾವುದೇ ಅಧಿಕಾರಿ ಸಂಪರ್ಕಕ್ಕೆ ಸಿಗಲಿಲ್ಲ .
ಎಂಡಿ ನಂಬರ್ ಸ್ವಿಚ್ ಆಪ್; ಪಿಆರ್‌ಒ ಔಟ್ ಆಫ್ ಸ್ಟೇಶನ್: ಘಟನೆ ನಡೆದು 30 ಗಂಟೆ ಕಳದರೂ ಮಾಹಿತಿ ಪಡೆಯದ ಅಧಿಕಾರಿಗಳು ಒಂದೆಡೆಯಾದರೆ, ನಮ್ಮ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಇನ್ನು ಸಾರ್ವಜನಿಕ ಸಂಪರ್ಕ ಅಧಿಕಾರಿ ನಾನು ಬೆಂಗಳೂರಲ್ಲಿ ಇಲ್ಲ ಎಂಬ ಉತ್ತರ ನೀಡಿದ್ದಾರೆ.
ಮೆಟ್ರೋ ಸೇವೆಯಲ್ಲಿ ಪದೇ ಪದೆ ಭದ್ರತೆ ಮತ್ತು ಸುರಕ್ಷತಾ ಲೋಪಗಳು ಕಾಣುತ್ತಿರುವುದು ಕಾಮಗಾರಿಯ ಗುಣಮಟ್ಟ ತಿಳಿಸುತ್ತದೆ. ಪ್ರತಿ ಹಂತದ ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಿಕೊಂಡರೆ ಮಾತ್ರ ಹೆಚ್ಚು ವರ್ಷಗಳ ಕಾಲ ಬಾಳಿಕೆ ಬರುತ್ತದೆ.
-ಶ್ರೀಹರಿ, ಸಾರಿಗೆ ತಜ್ಞ
* ಲೋಕೇಶ್ ರಾಮ್