ಅನುಭಾವದ ಅಂತಿಮ ಘಟ್ಟವನ್ನು ತಲುಪಿದವನೇ “ಸಿದ್ಧ’. “ಗಂಗಾ’ ಭಾರತದ ಅತ್ಯಂತ ಪವಿತ್ರ ನದಿ. “ಸಿದ್ಧಗಂಗಾ’ ಮಠದ ಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರು ಶತಾಯುಷಿಗಳಾಗಿ ಬಾಳಿದವರು. ಅವರ ಹೆಸರು ಇಂದು ರಾಷ್ಟ್ರಾದ್ಯಂತ, ವಿಶ್ವಾದ್ಯಂತ ಮನೆಮಾತಾಗಿದೆ. ಅವರು ಹಿಂದಿನ ಕಾಲದ ಋಷಿಗಳಂತೆ, ಹನ್ನೆರಡನೇ ಶತಮಾನದ ಬಸವ, ಅಲ್ಲಮರಂತೆ, ಆಧುನಿಕ ಕಾಲದ ರಾಮಕೃಷ್ಣ, ವಿವೇಕಾನಂದ, ಅರಬಿಂದೋ ಅವರಂತೆ ಶ್ರೇಷ್ಠ ಅಧ್ಯಾತ್ಮಿಕ ಸಾಧಕರು, ಸಾಮಾಜಿಕ ಚಿಂತಕರು ಮತ್ತು ಜಾತಿಭೇದವಿಲ್ಲದೆ ಬಡ ವಿದ್ಯಾರ್ಥಿಗಳಿಗಾಗಿ ಅವರ ಶಿಕ್ಷಣಕ್ಕಾಗಿ ಬದುಕನ್ನು ಮೀಸಲಾಗಿಟ್ಟವರು. ಅವರ ನೇತೃತ್ವದಲ್ಲಿ ನಡೆಯುತ್ತಿ ರುವ ಸಿದ್ಧಗಂಗಾ ಮಠದ ಉಚಿತ ವಿದ್ಯಾರ್ಥಿ ನಿಲಯವನ್ನು ನೋಡಿದಾಗ, ಅಲ್ಲಿನ ಸಾವಿರಾರು ಬಡ ವಿದ್ಯಾರ್ಥಿಗಳ ಮುಖದಲ್ಲಿ ಮಂದಸ್ಮಿತವು ಮಿಂಚುವುದನ್ನು ಕಂಡು ರೋಮಾಂಚನವಾಗುತ್ತದೆ. ಶ್ರೇಷ್ಠ ಸಂತರಾಗಿ ಶ್ರೀ ಸಿದ್ಧಗಂಗಾ ಸಂಸ್ಕೃತ ಪಾಠಶಾಲೆಯನ್ನು ನಡೆಸುತ್ತಿದ್ದಾರೆ. ತಮ್ಮ ಇಳಿ ವಯಸ್ಸಿನಲ್ಲೂ ಕಾಲವನ್ನು ಸ್ವಲ್ಪವೂ ದುವ್ಯìಯ ಮಾಡದೇ, ರಾತ್ರಿ ಕೆಲವು ಗಂಟೆ ಬಿಟ್ಟರೆ ಇಡೀ ದಿನ ಚಟುವಟಿಕೆಯಿಂದ ಇದ್ದರು. ಅವರ ದರ್ಶನಕ್ಕಾಗಿ ಸಾವಿರಾರು ಜನರು ದಿನವೂ ಬಂದು ತಮ್ಮ ದೈಹಿಕ, ಮಾನಸಿಕ ತೊಂದರೆಗಳನ್ನು ನಿವಾರಿಸಿಕೊಂಡ ನಿದರ್ಶನಗಳಿವೆ. ಜನರಿಗೆ ಪಾಲಿಗೆ ಅವರು “ನಡೆದಾಡುವ ದೇವರು’ ಆಗಿದ್ದರು. ನಿಜಕ್ಕೂ ಶ್ರೀಗಳು, ಇಪ್ಪತ್ತೂಂದನೇ ಶತಮಾನದ ಭಗವಂತನ ಅವತಾರವೆಂದು ಭಾವಿಸಿದರೂ ತಪ್ಪಲ್ಲ.
ಅವರಿಗೆ ಈಗಾಗಲೇ “ಭಾರತರತ್ನ’ ನೀಡಿ ಗೌರವಿಸಬೇಕಾಗಿತ್ತು. ಆ ಪ್ರಶಸ್ತಿಯಿಂದ ಅವರ ಗೌರವ ಹೆಚ್ಚುವುದಕ್ಕಿಂತ ಅವರಿಂದಾಗಿ ಆ ಪ್ರಶಸ್ತಿಗೆ ವಿಶೇಷ ಮಾನ್ಯತೆ ಲಭ್ಯವಾಗುತ್ತಿತ್ತು. ಅವರಲ್ಲಿ ನನ್ನ ಭಕ್ತಿ ದಿನದಿನಕ್ಕೆ ಹೆಚ್ಚಾಗುತ್ತಿದೆ. ಭಗವಂತನಂತೆ ಅವರು ನನ್ನ ಪ್ರಾರ್ಥನಾ ಕೇಂದ್ರವೂ ಆಗಿದ್ದಾರೆಂದು ವಿನಯದಿಂದ ಹೇಳಿಕೊಳ್ಳಬಯಸುತ್ತೇನೆ.
– ಡಾ. ಎಂ. ಚಿದಾನಂದ ಮೂರ್ತಿ