ಶಿವಮೊಗ್ಗ: ದಾನವು ಆದಾಯ ಮತ್ತು ಮೋಕ್ಷಕ್ಕೆ ಮೂಲವಾಗಿದ್ದು ಎರಡೂ ಕೈಯಿಂದ ಸಂಪಾದಿಸಿದರೆ ನಾಲ್ಕು ಕೈಯಿಂದ ದಾನ ಮಾಡಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಹೇಳಿದರು.
ಶನಿವಾರ ಸವಳಂಗ ರಸ್ತೆಯ ಮಹಾವೀರ ನಗರದಲ್ಲಿ ಭಗವಾನ್ ಶ್ರೀ 1008 ಆದಿನಾಥ ಸ್ವಾಮಿ ದಿಗಂಬರ ಜೈನ ಮಂದಿರದ ಬಳಿ ನೂತನವಾಗಿ ನಿರ್ಮಿಸಿದ ಹೋಂಬುಜ ಶ್ರೀ ಪದ್ಮಾವತಿ ಜೈನ ಸಮುದಾಯ ಭವನ ಹಾಗೂ ರಜತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಜೈನ ಸಮಾಜ ಸಣ್ಣದಾದರೂ ಹೃದಯ ವೈಶಾಲ್ಯತೆ ಇರುವ ಸಮಾಜವಾಗಿದೆ. ಬಡತನ, ಸಿರಿತನ ಎಂಬುದು ರೂಪ ಮತ್ತು ಪ್ರದರ್ಶನದಲ್ಲಿಲ್ಲ. ಪ್ರತಿಯೊಬ್ಬರ ಭಾವನೆಗಳನ್ನು ದೇವರು ಗೌರವಿಸುತ್ತಾನೆ. ಮನುಷ್ಯರ ಆಂತರಿಕ ದರ್ಶನ ಮತ್ತು ಜ್ಞಾನ ಶುದ್ಧವಾಗಿರಬೇಕು. ಭೋಗ ಮತ್ತು ತ್ಯಾಗಕ್ಕೆ ಮಾನವ ಜೀವನ ಹೆಸರುವಾಸಿಯಾಗಿದೆ. ಸುಖದ ಕಲ್ಪನೆ ಎಂಬುದು ಮುಂದೆ ಕಷ್ಟಬರುವುದರ ಸೂಚನೆಯಾಗಿದ್ದು ಎಚ್ಚರಿಕೆಯಿಂದಿರಬೇಕು. ಸಮಾಜದ ಉತ್ತಮ ಸಾಮಾಜಿಕ ಕಾರ್ಯಗಳಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಜೈನ ಸಮಾಜ ವೈಚಾರಿಕ ಚಿಂತನೆಯುಳ್ಳಸಮಾಜವಾಗಿದ್ದು ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ. ತ್ಯಾಗ ಮತ್ತು ದಾನ- ಧರ್ಮಗಳಿಗೆ ಹೆಸರುವಾಸಿಯಾದ ಸಮಾಜವಾಗಿದೆ. ಸಣ್ಣ ಸಮಾಜ ಎಂದು ಹಿಂಜರಿಕೆ ಮಾಡದೆ ಉತ್ತಮ ಕಾರ್ಯಗಳನ್ನು ಮುಂದುವರಿಸಿ ಜೈನ ಸಮಾಜದ ವಿದ್ಯಾರ್ಥಿಗಳಿಗೆ 2 ಹಾಸ್ಟೆಲ್‌ಗಳ ಕಟ್ಟಡ ನಿರ್ಮಾಣಕ್ಕೆ ಸಹಕಾರ ಹಾಗೂ ಅನುದಾನದ ಭರವಸೆ ನೀಡಿದರು. ದಿಗಂಬರ ಜೈನಸಂಘದ ಅಧ್ಯಕ್ಷ ಎ.ಪಿ. ಪದ್ಮರಾಜು ಅಧ್ಯಕ್ಷತೆ ವಹಿಸಿದ್ದರು.