ಚಾಮರಾಜನಗರ: ಪಟ್ಟಣದ ಇತಿಹಾಸ ಪ್ರಸಿದ್ಧ ಚಾಮರಾಜೇಶ್ಚರ ದೇವಸ್ಥಾನನದ ನೂತನ ರಥ ನಿರ್ಮಾಣ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು. ದೇವಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಥ ನಿರ್ಮಾಣಕ್ಕೆ ಬಳಸಲಾಗುತ್ತಿರುವ ಮರಕ್ಕೆ ಪೂಜೆ ಸಲ್ಲಿಸುವ ಮೂಲಕ ಅವರು ನಿರ್ಮಾಣ ಕಾಮಗಾರಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಸಿ. ಪುಟ್ಟರಂಗಶೆಟ್ಟಿ, ನೂತನ ರಥ ನಿರ್ಮಾಣಕ್ಕೆ ಮುಜರಾಯಿ ಇಲಾಖೆ ವತಿಯಿಂದ 1.20 ಕೋಟಿ ರೂ. ಬಿಡುಗಡೆಯಾಗಿದ್ದು ಅದರಲ್ಲಿ ನೂತನ ರಥ ನಿರ್ಮಾಣಕ್ಕೆ 1 ಕೋಟಿ ರೂ. ಹಾಗೂ ರಥ ನಿಲ್ಲಿಸಲು ಶೆಡ್ ನಿರ್ಮಾಣಕ್ಕೆ 20 ಲಕ್ಷ ರೂ ವಿನಿಯೋಗಿಸಲಾಗುವುದು ಎಂದರು.
ತಾವು ಶಾಸಕರಾದ ನಂತರ ಚಾಮರಾಜೇಶ್ವರ ದೇವಸ್ಥಾನದ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕಳೆದ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಚಾಮರಾಜನಗರ ಪಟ್ಟಣದ ಅಭಿವೃದ್ಧಿಗಾಗಿ 50 ಕೋಟಿ ರೂ. ಬಿಡುಗಡೆಯಾಗಿತ್ತು. ಅದರಲ್ಲಿ 1 ಕೋಟಿ ರೂ.ಗಳನ್ನು ಚಾಮರಾಜೇಶ್ವರ ದೇವಾಲಯದ ನವೀಕರಣ ಕಾಮಗಾರಿಗೆ ಮೀಸಲಾಗಿರಿಸಲಾಯಿತು. ಈ ಅನುದಾನದಲ್ಲಿ ದೇವಾಲಯವನ್ನು ಪುರಾತತ್ವ ಇಲಾಖೆಯ ನಿರ್ದೇಶನದಂತೆ ನವೀಕರಣಗೊಳಿಸಲಾಗಿದೆ ಎಂದು ತಿಳಿಸಿದರು.
2017ರಲ್ಲಿ ಕಿಡಿಗೇಡಿಯೊಬ್ಬ ಹಾಕಿದ ಬೆಂಕಿಗೆ ಚಾಮರಾಜೇಶ್ವರ ರಥ ಸುಟ್ಟು ಹೋಗಿತ್ತು. ಸುಟ್ಟ ರಥದಲ್ಲಿ ರಥೋತ್ಸವ ನಡೆಸಬಾರದೆಂಬ ದೇವಸ್ಥಾನದ ಭಕ್ತಾದಿಗಳ ಮನವಿಯ ಮೇರೆಗೆ ಹೊಸ ರಥ ನಿರ್ಮಿಸಲು ಉದ್ದೇಶಿಸಲಾಯಿತು. ನಾನು ಮುತುವರ್ಜಿ ವಹಿಸಿ ಮುಜರಾಯಿ ಇಲಾಖೆಯಿಂದ ರಥ ನಿರ್ಮಾಣಕ್ಕೆ 1.20 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿದ್ದೇನೆ. ಟೆಂಡರ್ ಪ್ರಕ್ರಿಯೆ ತಾಂತ್ರಿಕ ಸಮಸ್ಯೆಗಳಿಂದಾಗಿ ಸ್ವಲ್ಪ ತಡವಾಗಿ ರಥ ನಿರ್ಮಾಣ ಕಾಮಗಾರಿ ಆರಂಭವಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಜಿಲ್ಲೆಯ ಪ್ರಮುಖ ದೇವಸ್ಥಾನ ಚಾಮರಾಜೇಶ್ವರ ರಥೋತ್ಸವವು ಇತಿಹಾಸ ಪ್ರಸಿದ್ಧ ವಾಗಿದ್ದು, ಇದರ ಅಭಿವೃದ್ಧಿಗಾಗಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಥ ನಿರ್ಮಾಣ ಕಾಮಗಾರಿ ಗುಣಮಟ್ಟದಿಂದ ಕೂಡಿರುವಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಆದಷ್ಟು ಶೀಘ್ರ ರಥದ ಕೆಲಸ ಪೂರ್ಣಗೊಳ್ಳಬೇಕು ಎಂದು ಸಚಿವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ದೇವಸ್ಥಾನದ ಜೀಣೊìàದ್ಧಾರ ಕಾಮಗಾರಿ ಪ್ರಗತಿಯಲ್ಲಿದ್ದು ಬಹುತೇಕ ಪೂರ್ಣಗೊಂಡಿದೆ. ಸರ್ಕಾರದಿಂದ ಮತ್ತಷ್ಟು ಅನುದಾನ ತಂದು ಈ ಐತಿಹಾಸಕ ದೇವಾಲಯವನ್ನು ಅಭಿವೃದ್ದಿಪಡಿಸಲಾಗುವುದು ಎಂದು ಸಚಿವರು ತಿಳಿಸಿದರು.
ಜಿಲ್ಲಾಧಿಕಾರಿ ಬಿ.ವಿ. ಕಾವೇರಿ, ನಗರಸಭಾ ಸದಸ್ಯರಾದ ಚಿನ್ನಮ್ಮ, ಆಶಾ ಭಾಗ್ಯಮ್ಮ ಕುಮುದಾ, ಕಲಾವತಿ, ಗಾಯತ್ರಿ, ಮಮತಾ, ಚಂದ್ರಶೇಖರ್ ಮಂಜುನಾಥ್, ರಾಜಪ್ಪ ಸುದರ್ಶನ್‌ಗೌಡ, ಪ್ರಕಾಶ್, ಅರ್ಚಕ ರಾಮಕೃಷ್ಣ ಭಾರಧ್ವಜ, ನಗರಸಭೆ ಮಾಜಿ ಅಧ್ಯಕ್ಷೆ ಶೋಭಾ, ಮುಖಂಡರಾದ ಬಂಗಾರು, ಮಂಜುನಾಥಗೌಡ, ಬಿ.ಕೆ ರವಿಕುಮಾರ್ ಮಹಮ್ಮದ್ ಅಸರ್, ಚಂದ್ರಶೇಖರ್ ಚಾ.ರಂ. ಶ್ರೀನಿವಾಸಗೌಡ, ತಹಶೀಲ್ದಾರ್ ಪುರಂದರ, ನಗರಸಭಾ ಪೌರಾಯುಕ್ತ ರಾಜಣ್ಣ ಎಇಇ ವಿಜಯ್‌ಕುಮಾರ್, ಸತ್ಯಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.