ಹುಬ್ಬಳ್ಳಿ: ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಷಾ ವೈಭವ ಬಗ್ಗೆ ಹೆಮ್ಮೆಯ ಮಾತನಾಡುವ ಬದಲು, ಭಾಷಾ ಆತಂಕದ ಬಗ್ಗೆ ಚರ್ಚೆ ಮಾಡುವ ದುರ್ದೈವದ ಸ್ಥಿತಿ ನಿರ್ಮಾಣಗೊಂಡಿದೆ. ಇಂಗ್ಲಿಷ್‌ನಂತೆ ಹಿಂದಿ ಹೇರಿಕೆಯೂ ಅಷ್ಟೇ ಅಪಾಯಕಾರಿಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಅಧ್ಯಕ್ಷ ಡಾ| ಮನು ಬಳಿಗಾರ ಹೇಳಿದರು.
ಆರ್.ಎನ್. ಶೆಟ್ಟಿ ಕಲ್ಯಾಣ ಮಟ್ಟದಲ್ಲಿ ಎರಡು ದಿನ ಕಾಲ ಆಯೋಜಿಸಿರುವ ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯಲ್ಲಿ ಹಿಂದಿಗೆ ಅಗ್ರಸ್ಥಾನ ನೀಡಿಕೆ ಯತ್ನಗಳಿದ್ದವು. ನಮ್ಮೆಲ್ಲರ ಹೋರಾಟದಿಂದಾಗಿ ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳು ಸೇರ್ಪಡೆಗೊಂಡಿವೆ ಎಂದರು.
ಆಂಗ್ಲ ಮಾಧ್ಯಮ ಶಾಲೆಗಳ ಆರಂಭಕ್ಕೆ ನಮ್ಮ ಸ್ಪಷ್ಟ ವಿರೋಧವಿದೆ. ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಕಲಿಸಿ ಎಂಬುದು ನಮ್ಮ ಒತ್ತಾಯ. ಕನ್ನಡ ಭಾಷೆಗೆ ತನ್ನದೇಯಾದ ಇತಿಹಾಸ, ವೈಭವ ಇದೆ. 1ರಿಂದ 10ನೇ ಶತಮಾನದವರೆಗೂ ದಕ್ಷಿಣ ಭಾರತದ ಎಲ್ಲ ಭಾಷೆಗಳಿಗೆ ಕನ್ನಡ ಲಿಪಿಯೇ ಆಧಾರವಾಗಿತ್ತು. ಸಂಸ್ಕೃತ ಸಹ ದಕ್ಷಿಣ ಭಾರತಕ್ಕೆ ಬಂದಾಗ ಕನ್ನಡದ ಲಿಪಿಯನ್ನೇ ಆಧರಿಸಿತ್ತು. ಪುರಾತನ ಗ್ರೀಕ್ ನಾಟಕಗಳಲ್ಲಿ ಕನ್ನಡ ಶಬ್ದಗಳ ಉಲ್ಲೇಖವಿದೆ. 10ನೇ ಶತಮಾನದ ನಂತರದಲ್ಲಿ ಕನ್ನಡದ ಹಿಂದುಳಿವಿಕೆ ಆರಂಭವಾಯಿತಲ್ಲದೆ, ಇದೀಗ ಆಂಗ್ಲಮೋಹದ ಆರ್ಭಟಕ್ಕೆ ಕನ್ನಡ ನಲುಗುವಂತಾಗಿದೆ ಎಂದು ವಿಷಾದಿಸಿದರು.
ಕಸಾಪದಿಂದ 14 ಜಿಲ್ಲೆಗಳಲ್ಲಿ ಶಾಸ್ತ್ರೀಯ ಸ್ಥಾನಮಾನ ಕುರಿತು ಕಮ್ಮಟ ಕೈಗೊಳ್ಳಲಾಗಿದ್ದು, ಪರಿಷತ್ತು ಒತ್ತಾಯದಿಂದಾಗಿ ರಾಜ್ಯದಲ್ಲಿ ಹೊರನಾಡ ಕನ್ನಡಿಗರ ಮಕ್ಕಳಿಗೆ ನೌಕರಿಯಲ್ಲಿ ಶೇ.5 ಮೀಸಲು ಕಲ್ಪಿಸಲಾಗಿದೆ. ರಾಜ್ಯ ಸರಕಾರ ಕೆಲ ದಿನಗಳ ಹಿಂದೆಯಷ್ಟೇ 5 ಕೋಟಿ ರೂ. ಡುಗಡೆ ಮಾಡಿದೆ. ಯಾವುದೇ ಪ್ರದೇಶದಲ್ಲಿ 5 ಗುಂಟೆಯಷ್ಟು ಜಾಗ ದಾನವಾಗಿ ನೀಡಿದಲ್ಲಿ ಅಂದಾಜು 25 ಲಕ್ಷ ರೂ.ವೆಚ್ಚದಲ್ಲಿ ಸಾಹಿತ್ಯ ಭವನ ನಿರ್ಮಾಣಕ್ಕೆ ಪರಿಷತ್ತು ಹಣ ನೀಡಲಿದೆ ಎಂದರು.
ಡಾ| ಬಸವರಾಜ ಸಾದರ ಅವರ ಸ್ವಗ್ರಾಮ ಹುಲ್ಲಂಬಿಯಲ್ಲಿ 5 ಗುಂಟೆ ಜಾಗ ನೀಡಲು ಸಿದ್ಧ ಎಂದು ಗ್ರಾಮದ ಮುಖಂಡರು ಹೇಳಿದ್ದರಿಂದ ಆದಷ್ಟು ಶೀಘ್ರ 10 ಲಕ್ಷ ರೂ. ಮಂಜೂರು ಮಾಡುವುದಾಗಿ ಡಾ| ಮನು ಬಳಿಗಾರ ಹೇಳಿದರು.
ಸಾಹಿತಿ ಡಾ| ಜಿ.ಎಂ. ಹೆಗಡೆ ಮಾತನಾಡಿ, ಬಹುತೇಕ ವಾಹಿನಿಗಳು ಸಾಹಿತ್ಯದ ಕಾರ್ಯಕ್ರಮಗಳನ್ನು ಬಿತ್ತರಿಸದೆ ಯುವಕರ ಮನಸ್ಸು ಕಲುಷಿತಗೊಳಿಸುವ ಕಾರ್ಯಕ್ರಮಗಳನ್ನು ಹೆಚ್ಚಾಗಿ ನೀಡುತ್ತಿವೆ. 1,000 ಆಂಗ್ಲ ಶಾಲೆಗಳ ಆರಂಭ ಕನ್ನಡಕ್ಕೆ ಕುತ್ತು ತರಲಿದೆ. ಹೊಸ ಸರಕಾರ ಕನ್ನಡವನ್ನು ಉಳಿಸುವ ಕಾರ್ಯ ಮಾಡಲಿ ಎಂದು ಒತ್ತಾಯಿಸಿದರು.
ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಹಿರಿಯ ಸಾಹಿತಿ ಡಾ| ಗುರುಲಿಂಗ ಕಾಪಸೆ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಡಿ.ಎಂ. ಹಿರೇಮಠ, ಜಿಲ್ಲೆಯ ಎಂಟು ತಾಲೂಕುಗಳ ಕಸಾಪ ಅಧ್ಯಕ್ಷರು ಇನ್ನಿತರರಿದ್ದರು. ಪ್ರೊ| ಕೆ.ಎಸ್. ಕೌಜಲಗಿ ನಿರೂಪಿಸಿದರು. ವಿವಿದ ಕೃತಿಗಳ ಲೋಕಾರ್ಪಣೆ ನಡೆಯಿತು. ಇದಕ್ಕೂ ಮೊದಲು ಮಾಜಿ ಸಂಸದ ಪ್ರೊ| ಐ.ಜಿ. ಸನದಿ ಅವರು ಪರಿಷತ್ತು ಧ್ವಜಾರೋಹಣ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಿದರು.