Advertisement

ಕಾಯದ ಮಹತ್ವ ಸಾರಿದ ಮಾಚಿದೇವ

03:55 PM Feb 02, 2018 | |

ವಿಜಯಪುರ: ತಮ್ಮ ನಿಷ್ಟುರ ನಡೆಯಿಂದಾಗಿ ಬಸವೇಶ್ವರರ ಬಲಗೈ ಬಂಟ ಎನಿಸಿಕೊಂಡಿದ್ದ ಹಾಗೂ ಕಾಯಕದ ಮಹತ್ವ ಸಾರಿದವರು ಮಡಿವಾಳ ಮಾಚಯ್ಯ ಶರಣರು. ಕಾಯಕದಲ್ಲಿ ತಾವು ಮಾಡುತ್ತಿದ್ದ ಅಗಸತನ ಕೀಳಲ್ಲ. ಅರಸುತನ ಮೇಲಲ್ಲ ಎಂಬುದನ್ನು ಸಾರಿದ ಅಚಲ ಕಾಯನಿಷ್ಠ ಶರಣರು ಎಂದು ಸಂಸದೀಯ ಕಾರ್ಯದರ್ಶಿ, ನಗರ ಶಾಸಕ ಡಾ| ಎಂ.ಎಸ್‌. ಬಾಗವಾನ ಬಣ್ಣಿಸಿದರು.

Advertisement

ನಗರದ ಕಂದಗಲ್‌ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಗುರುವಾರ ನಡೆದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಡಿವಾಳ ಮಾಚಿದೇವ ಶರಣರು ರಚಿಸಿದ ಸಾವಿರಾರು ವಚನಗಳು ಉತ್ತಮ ಸಮಾಜ ನಿರ್ಮಾಣದಲ್ಲಿ ಸಹಕಾರಿ ಆಗಿವೆ. ಇಂತಹ ಮಹಾನ್‌ ವಚನಕಾರರು ನಮ್ಮ ಜಿಲ್ಲೆಯಲ್ಲಿ ಜನಿಸಿದರು ಎಂಬುದು ಜಿಲ್ಲೆಯ ಜನರಿಗೆಲ್ಲ ಹೆಮ್ಮೆಯ ಸಂಗತಿ. ಮಡಿವಾಳ ಸಮಾಜ ನಗರದಲ್ಲಿ ಸಮುದಾಯ ಭವನ ನಿರ್ಮಾಣದ ಕುರಿತ ಬೇಡಿಕೆ ಈಡೇರಿಕೆಗೆ ಕ್ರಮ ಕೈಗೊಳ್ಳುವುದಾಗಿ ಎಂದು ಭರವಸೆ ನೀಡಿದರು.

ವಿಶೇಷ ಉಪನ್ಯಾಸ ನೀಡಿದ ಅಕ್ಕಮಹಾದೇವಿ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ| ಎಂ.ನಾಗರಾಜ, 12ನೇ ಶತಮಾನದ ಶರಣರ ಇತಿಹಾಸ ವಿಶ್ವದ ಇತಿಹಾಸದಲ್ಲಿ ಒಂದು ಬೆಳ್ಳಿ ಚುಕ್ಕಿ. ಸಾಮಾನ್ಯ ಜನರಲ್ಲಿರುವ ಮೂಢನಂಬಿಕೆ ಕಿತ್ತೆಸೆದು ಶೋಷಿತರಲ್ಲಿ ಆತ್ಮಗೌರವ ಬೆಳೆಸಿ ಆತ್ಮಸ್ಥೈರ್ಯ ತುಂಬಿದವರೇ ಶರಣರು ಎಂದು ವಿಶ್ಲೇಷಿಸಿದರು.

ಪ್ರತಿ ವೃತ್ತಿಗೂ ವಿಶೇಷ ವೃತ್ತಿಗೌರವ ನೀಡಿದ ಶರಣರು, ಅಂದು ಸಮಾಜದಲ್ಲಿ ತಾಂಡವಾಡುತ್ತಿದ್ದ ಮೋಸ, ವಂಚನೆ, ಮೇಲು-ಕೀಳು ಎಂಬ ಭಾವನೆ ತೊಡೆದುಹಾಕಿ ಅಧ್ಯಾತ್ಮದಲ್ಲಿ ಗಂಡು- ಹೆಣ್ಣು ಸಮಾನರು ಎಂದು ತಮ್ಮ ವಚನಗಳಲ್ಲಿ ಸಾರಿದ ಮಹಾನ್‌ ವ್ಯಕ್ತಿ ಎಂದು ಹೇಳಿದರು.

Advertisement

ಮಡಿವಾಳ ಮಾಚಿದೇವರು ವಚನ ಸಾಹಿತ್ಯಕ್ಕೆ ದೊಡ್ಡ ಕೊಡುಗೆ ನೀಡಿದ ಶರಣ. ಇವರು ವಚನ ಸಾಹಿತ್ಯ ರಚನೆ ಮಾತ್ರವಲ್ಲ. ಇಡೀ ಮಾನವ ಕುಲಕ್ಕೆ ವಚನ ಸಾಹಿತ್ಯ ಸಂರಕ್ಷಿಸಿ ಮಹಾನ್‌ ಕೆಲಸ ಮಾಡಿದರು. ವಚನಗಳನ್ನು ರಕ್ಷಿಸುವಲ್ಲಿ ಮಡಿವಾಳ ಮಾಚಿದೇವರು ನಿರ್ಲಕ್ಷ್ಯ ಮಾಡಿದ್ದರೆ ಈಗ ವಚನ ಚಳವಳಿ ಎಂಬುದೊಂದು ನಮ್ಮ ನಲೆದಲ್ಲಿ ನಡೆದ ಬಗ್ಗೆ ಸಾಕ್ಷಾಧಾರಗಳೇ ಇರುತ್ತಿರಲಿಲ್ಲ. ಕನ್ನಡ ಸಾಹಿತ್ಯ ಲೋಕದಲ್ಲಿ ವಚನ ಎಂಬ ಮಹಾನ್‌ ಸಾಹಿತ್ಯ ನಮಗೆ ಅಧ್ಯಯನಕ್ಕೆ ಲಭ್ಯವಾಗುತ್ತಲೇ ಇರಲಿಲ್ಲ. ವನಚಗಳಲ್ಲಿರುವ ಜೀವನ ಮೌಲ್ಯಗಳು, ಶರಣರ ಆದರ್ಶ ಜೀವನದ ಸಂದೇಶಗಳು, ವಾಸ್ತವಿಕ ಕೊಡುಗೆಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಿಕೊಂಡು ಕರ್ತವ್ಯ ನಮ್ಮ ಮೇಲಿದೆ ಎಂದು ಹೇಳಿದರು. 

ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಹಾಯಕ ನಿರ್ದೇಶಕ ಮಹೇಶ ಪೋತದಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಹಾನಗರ ಪಾಲಿಕೆ ಮೇಯರ್‌ ಸಂಗೀತಾ ಪೋಳ ಅಧ್ಯಕ್ಷತೆ ವಹಿಸಿದ್ದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಝಾದ್‌ ಪಟೇಲ್‌, ಜಿಪಂ ಸಿಇಒ ಸುದರೇಶಬಾಬು, ಪದವಿ ಪೂರ್ವ ಹಾಗೂ ವೃತ್ತಿ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಬಿ.ಅಂಕದ, ವಿ.ಸಿ.ನಾಗಠಾಣ, ಐ.ಡಿ.ಅಗಸರ, ಶಿವಪ್ಪ ಹುಬ್ಬಳಿ ಇದ್ದರು.

ಇದಕ್ಕೂ ಮೊದಲು ಬೆಳಗ್ಗೆ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಆರಂಭವಾದ ಮಡಿವಾಳ ಮಾಚಿದೇವರ ಭಾವಚಿತ್ರ ಮೆರವಣಿಗೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಹೇಶ ಪೋತದಾರ ಮತ್ತು ಪದವಿ ಪೂರ್ವ ಹಾಗೂ ವೃತ್ತಿ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಬಿ. ಅಂಕದ ಚಾಲನೆ ನೀಡಿದರು. ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ಮಹಾತ್ಮಾ ಗಾಂಧೀಜಿ ವೃತ್ತದ ಮಾರ್ಗವಾಗಿ ಕಂದಗಲ್‌ ಹನುಮಂತರಾಯ ರಂಗಮಂದಿರದ ವರೆಗೆ ಸಾಗಿತು

Advertisement

Udayavani is now on Telegram. Click here to join our channel and stay updated with the latest news.

Next