Advertisement

ಮಗುವಿನ ಸಮಗ್ರ ಬೆಳವಣಿಗೆಯಲ್ಲಿ ಹೆತ್ತವರ ಸಂಭಾಷಣೆಯ ಪಾತ್ರದ ಮಹತ್ವ

08:05 PM Oct 30, 2021 | Team Udayavani |

ಪೋಷಕರಾಗುವುದು ಎಂಬುದು ಸಂತೋಷ, ಜವಾಬ್ದಾರಿಗಳು, ಕಲಿಕೆ ಮತ್ತು ಸವಾಲುಗಳ ಒಂದು ಪ್ರಯಾಣ. ಹೆತ್ತವರು ಮಗುವಿನ ಪ್ರಾಥಮಿಕ ಮತ್ತು ಮೊದಲ ಆಟ ಹಾಗೂ ಸಂವಹನದ ಜತೆಗಾರರಾಗಿದ್ದು, ಆಟಕ್ಕೆ ಸಂಬಂಧಿಸಿದ ಸಂವಹನದ ಮೂಲಕ ಮಗುವಿಗೆ ಮಾತು ಮತ್ತು ಭಾಷೆಯ ಕೌಶಲಗಳನ್ನು ಒದಗಿಸುತ್ತಾರೆ. ಮಕ್ಕಳ ಸಮಗ್ರ ಅಭಿವೃದ್ಧಿಗೆ ಈ ಕೌಶಲಗಳು ನಿರ್ಣಾಯಕವಾಗಿವೆ. ಮಗುವಿನ ಸಂವಹನ, ಗ್ರಹಣ, ದೈಹಿಕ ಮತ್ತು ಸಾಮಾಜಿಕ ಕೌಶಲಗಳ ಬೆಳವಣಿಗೆಯಲ್ಲಿ ಹೆತ್ತವರು-ಮಗುವಿನ ಗುಣಮಟ್ಟದ ಮತ್ತು ಹೆಚ್ಚು ಪ್ರಮಾಣದ ಸಂವಹನವು ಗಮನಾರ್ಹ ಪಾತ್ರವನ್ನು ಹೊಂದಿದೆ. ಮೂರು ವರ್ಷದ ವರೆಗಿನ ವಯಸ್ಸಿನಲ್ಲಿ ಭಾಷೆ ಮತ್ತು ಮೆದುಳಿಗೆ ಸಂಬಂಧಿಸಿದ ಬಹುತೇಕ ಬೆಳವಣಿಗೆಗಳು ನಡೆಯುವುದರಿಂದ ಈ ಅವಧಿಯಲ್ಲಿ ಹೆತ್ತವರು-ಮಗುವಿನ ಸಂವಹನವು ಬಹಳ ನಿರ್ಣಾಯಕವಾದುದು ಎಂದು ಅಧ್ಯಯನಗಳು ಹೇಳಿವೆ. ಈ ಹೆತ್ತವರು- ಮಗುವಿನ ಸಂವಹನದ ಮೂಲಕ ಹಂಚಿಕೊಳ್ಳುವುದು, ತನ್ನ ಸರದಿ ತೆಗೆದುಕೊಳ್ಳುವುದು, ಎದುರಿರುವವನ ಆಲೋಚನೆಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಸ್ವಯಂ ನಿಯಂತ್ರಣ ಹಾಕಿಕೊಳ್ಳುವಂತಹ ಕೌಶಲಗಳ ಪ್ರಾಥಮಿಕ ಮಾದರಿಗಳನ್ನು ಮಗುವಿನಲ್ಲಿ ಸೃಷ್ಟಿಸುತ್ತವೆ.

Advertisement

ಹೆತ್ತವರು – ಮಗುವಿನ ಸಂವಹನದ ಗುಣಮಟ್ಟದ ಮೇಲೆ ಹೆಚ್ಚು ಗ್ಯಾಜೆಟ್‌ ಅಥವಾ ಡಿಜಿಟಲ್‌ ಮಾಧ್ಯಮ ಬಳಕೆ, ದೀರ್ಘ‌ ಕೆಲಸದ ಸಮಯ, ಸಾಮಾಜಿಕ-ಆರ್ಥಿಕ ಸ್ಥಿತಗತಿ, ತಾಯಿಯ ವಯಸ್ಸು, ಹೆತ್ತವರ ಮಾನಸಿಕ ಸ್ಥಿತಿಗತಿ ಹಾಗೂ ಗುಣಮಟ್ಟದ ಹೆತ್ತವರು-ಮಗುವಿನ ಸಂವಹನದ ಮಹತ್ವದ ಬಗ್ಗೆ ಅರಿವಿಲ್ಲದೆ ಇರುವುದು ಪ್ರಭಾವ ಬೀರುತ್ತದೆ. ಮನೆಯಲ್ಲಿ ಕಡಿಮೆ ಗುಣಮಟ್ಟದ ಸಂವಹನ-ಸಂಭಾಷಣೆಗಳಿಂದಾಗಿ ಮಾತು ಮತ್ತು ಭಾಷೆಯ ಬೆಳವಣಿಗೆ ವಿಳಂಬವಾಗುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಸದ್ಯದ ಕಾಲಘಟ್ಟದಲ್ಲಿ ಮಕ್ಕಳು ಡಿಜಿಟಲ್‌ ಮಾಧ್ಯಮಗಳ ಮೇಲೆ ಹೆಚ್ಚು ಅವಲಂಬಿತರಾಗುವುದು ಕಂಡುಬರುತ್ತಿದ್ದು, ಇದು ಹೆತ್ತವರು – ಮಕ್ಕಳ ಸಂವಹನದ ಗುಣಮಟ್ಟದ ಮೇಲೆ ಪ್ರತಿಕೂಲ ಪ್ರಭಾವ ಬೀರಬಲ್ಲುದಾಗಿದೆ. ಇದು ಮಕ್ಕಳ ಮಾತು ಮತ್ತು ಸಮಾಜದಲ್ಲಿ ಬೆರೆಯುವ ಕೌಶಲಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಲ್ಲುದಾಗಿದೆ.
ಆದ್ದರಿಂದ ಮಗುವಿನ ಬೆಳವಣಿಗೆಯ ವಿಚಾರದಲ್ಲಿ ಹೆತ್ತವರು – ಮಕ್ಕಳ ಸಂವಹನದ ಪ್ರಾಮುಖ್ಯವನ್ನು ಹೆತ್ತವರು ಅರಿತುಕೊಳ್ಳುವುದು ಬಹಳ ಮುಖ್ಯವಾಗಿದೆ.

ಗುಣಮಟ್ಟದ ಹೆತ್ತವರು – ಮಕ್ಕಳ ಸಂವಹನದಲ್ಲಿ ಮಕ್ಕಳಿಗೆ ಕತೆ ಹೇಳುವುದು, ಮಕ್ಕಳೇ ನಿರ್ವಹಿಸುವ ಆಟ/ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಸೇರಿವೆ. ಇಲ್ಲಿ ಆಟ/ ಚಟುವಟಿಕೆಯ ವ್ಯವಸ್ಥೆ, ಮುಂದುವರಿಕೆಯನ್ನು ಮಕ್ಕಳೇ ನಿರ್ಧರಿಸುತ್ತಾರೆ. ಮಕ್ಕಳು-ಹೆತ್ತವರ ಸಂವಹನದ ಸಂದರ್ಭದಲ್ಲಿ ಹೆತ್ತವರಿಂದ ವ್ಯಕ್ತವಾಗುವ ಪ್ರತಿಸ್ಪಂದನಶೀಲತೆ, ಪ್ರತಿಕ್ರಿಯೆ ಇತ್ಯಾದಿ ಗುಣನಡತೆಗಳು ಮಗುವಿಗೆ ಬೆಳವಣಿಗೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ. ಮಗುವಿನ ಬೆಳವಣಿಗೆಯಲ್ಲಿ ಹೆತ್ತವರು-ಮಕ್ಕಳ ಸಂವಹನವು ಪ್ರಾಮುಖ್ಯವಾದುದಾದರೂ ಈ ಸಂದರ್ಭದಲ್ಲಿ ಹೆತ್ತವರೇ ಹೆಚ್ಚು ಹೆಚ್ಚಾಗಿ ಮಾರ್ಗದರ್ಶನ ಮಾಡುವ ಚಟುವಟಿಕೆಗಳು, ಅತಿಯಾದ ಪ್ರತಿಸ್ಪಂದನೆ, ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಮಾತ್ರ ಸಂವಹನ ನಡೆಸುವುದು, ಅಧಿಕಾರ ಹೇರುವ ತಂದೆ-ತಾಯ್ತನ ಇತ್ಯಾದಿಗಳಿಂದ ಮಗುವಿನ ಸ್ವಯಂ-ನಿರ್ಧಾರ ಮತ್ತು ಸಮಗ್ರ ಪ್ರಗತಿಯ ಮೇಲೆ ದುಷ್ಪರಿಣಾಮ ಉಂಟಾಗುವುದು ಸಾಧ್ಯ. ಆದ್ದರಿಂದ ಮಗುವಿನ ಗುಣಮಟ್ಟದ ಮತ್ತು ಪ್ರಮಾಣಬದ್ಧ ಬೆಳವಣಿಗೆಗಾಗಿ ಪೂರಕವಾದ ವಾತಾವರಣವನ್ನು ನಿರ್ಮಿಸಿಕೊಡುವುದು ಅಗತ್ಯ.

ಹೆತ್ತವರು-ಮಕ್ಕಳ ಸಂವಹನದ ಸಂದರ್ಭದಲ್ಲಿ ಮಗುವಿನ ಅಂತರ್ಗತ, ಸೂಕ್ಷ್ಮ ನಡವಳಿಕೆಗಳು, ಸಂವಹನ ಕೌಶಲಗಳು ಮತ್ತು ಚಲನೆಗಳಲ್ಲಿ ಆಗುವ ಬದಲಾವಣೆಗಳ ಬಗ್ಗೆ ಗಮನವಿಡುವುದು ಅಗತ್ಯ. ಇದು ಮಗುವಿನಲ್ಲಿ ಯಾವುದೇ ರೀತಿಯ ಬೆಳವಣಿಗೆಗೆ ಸಂಬಂಧಿಸಿದ ಸಮಸ್ಯೆಗಳು, ಗ್ರಹಣಶೀಲತೆಗೆ ಸಂಬಂಧಿಸಿದ, ಕೇಳಿಸಿಕೊಳ್ಳುವ ಅಥವಾ ದೃಷ್ಟಿಗೆ ಸಂಬಂಧಿಸಿದ ಸಮಸ್ಯೆಗಳು ಇದ್ದರೆ ಅವುಗಳನ್ನು ಆದಷ್ಟು ಬೇಗನೆ ಪತ್ತೆಹಚ್ಚಿ ಪರಿಹರಿಸಿಕೊಳ್ಳುವುದಕ್ಕೆ ಸಹಾಯವಾಗುತ್ತದೆ.

ಕೆಳಗೆ ಪಟ್ಟಿಮಾಡಿರುವ ಯಾವುದೇ ವಿಧವಾದ ನಡವಳಿಕೆಗಳು ನಿಮ್ಮ ಮಗುವಿನಲ್ಲಿ ಕಂಡುಬಂದುದೇ ಆದರೆ ಆದಷ್ಟು ಬೇಗನೆ ಸ್ಪೀಚ್‌ ಲ್ಯಾಂಗ್ವೇಜ್‌ ಥೆರಪಿಸ್ಟ್‌ ಅವರನ್ನು ಸಂಪರ್ಕಿಸಿ.
1. ವಯಸ್ಸಿಗೆ ಸರಿಯಾಗಿ ಮಾತನಾಡದೆ ಇರುವುದು.
2. ಆಟವಾಡಲು ಅಥವಾ ಇತರರ ಜತೆಗೆ ಬೆರೆಯಲು ಕಷ್ಟವಾಗುವುದು.
3. ಆಟವಾಡುವ ವಸ್ತುಗಳು ಅಥವಾ ಆಟಿಕೆಗಳ ಅಸಮರ್ಪಕ ಬಳಕೆ, ಆಟದಿಂದ ದೂರವಿರುವುದು.
4. ಮಾತನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗುವುದು.
5. ಹೆಸರು ಹಿಡಿದು ಕರೆದಾಗ ಅಥವಾ ಪರಿಸರದ ಸದ್ದುಗಳಿಗೆ ಪ್ರತಿಕ್ರಿಯಿಸದೆ ಇರುವುದು.

Advertisement

-ಮೇಘಾ ಮೋಹನ್‌
ಅಸಿಸ್ಟೆಂಟ್‌ ಪ್ರೊಫೆಸರ್‌, ಆಡಿಯಾಲಜಿ ಮತ್ತು ಸ್ಪೀಚ್‌ ಲ್ಯಾಂಗ್ವೇಜ್‌ ಪೆಥಾಲಜಿ ವಿಭಾಗ
ಕೆಎಂಸಿ ಆಸ್ಪತ್ರೆ, ಮಾಹೆ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next