Advertisement
ಭಾರತದಲ್ಲಿ ಮಾ. 23ರಿಂದಲೇ ವಿಧಿಸಲಾಗಿರುವ ಲಾಕ್‌ಡೌನ್ ಪರಿಣಾಮ ನಿಗ ದಿತ ಪರೀಕ್ಷೆಗಳೆಲ್ಲ ಮುಂದಕ್ಕೆ ಹೋಗಿವೆ. ಪಿಯುಸಿಗೆ ಇಂಗ್ಲಿಷ್‌ಯೊಂದು ಬಾಕಿಯಾಗಿದ್ದು, ಮುಂದೆ ಯಾವಾಗ ನಡೆಸಲಾಗುತ್ತದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಮಾ. 27ಕ್ಕೆ ಆರಂಭವಾಗಿ ಎ. 9ಕ್ಕೆ ಮುಗಿಯಬೇಕಾದ ಎಸೆಸ್ಸೆಲ್ಸಿ ಪರೀಕ್ಷೆ ಯಾವಾಗ ನಡೆಯಲಿದೆ ಎಂಬ ಮಾಹಿತಿಯೂ ಇಲ್ಲ. ಸಾಮಾನ್ಯವಾಗಿ ಎಪ್ರಿಲ್ ಎರಡನೇ ವಾರದಲ್ಲಿ ಪರೀಕ್ಷೆಗಳೆಲ್ಲ ಮುಗಿದು, ಮೇ ಮೊದಲ ಅಥವಾ ಎರಡನೇ ವಾರದಲ್ಲಿ ಫಲಿತಾಂಶವೂ ಲಭ್ಯವಾಗುತ್ತಿತ್ತು.
ಮಂಗಳೂರು ವಿ.ವಿ. ಮಟ್ಟದಲ್ಲಿ ಎ. 12ರೊಳಗೆ ತರಗತಿ ಮುಗಿದು ಎ. 25ರಿಂದ ಮೇ 15ರ ವರೆಗೆ ಪರೀಕ್ಷೆಗಳು ನಡೆದು ಜೂ. 10ರೊಳಗೆ ಫಲಿತಾಂಶ ನೀಡಬೇಕಿತ್ತು. ಆದರೆ ಈ ಬಾರಿ ಪಾಠ ಪ್ರವಚನಗಳೇ ಅಪೂರ್ಣವಾಗಿವೆ. ವಿ.ವಿ. ವ್ಯಾಪ್ತಿಯ 210 ಕಾಲೇಜುಗಳಲ್ಲಿ ಪ್ರಥಮ, ದ್ವಿತೀಯ ಪದವಿಗಳ ಸೆಮಿಸ್ಟರ್ ಪರೀಕ್ಷೆಗಳನ್ನು ಆಯಾ ಕಾಲೇಜು ಹಂತದಲ್ಲಿಯೇ ನಡೆಸಿ ಅಂತಿಮ ವರ್ಷದ ಪರೀಕ್ಷೆಯನ್ನು ಮಾತ್ರ ವಿ.ವಿ. ಅಡಿಯಲ್ಲಿ ನಡೆಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಅಂತಿಮ ಪದವಿಯವರಿಗೆ ಪರೀಕ್ಷೆ ನಡೆಸಿ ಡಿಜಿಟಲ್ ಮೌಲ್ಯಮಾಪನ ನಡೆಸಿ ಶೀಘ್ರ ಫಲಿತಾಂಶ ನೀಡುವ ಬಗ್ಗೆ ಚಿಂತಿಸಲಾಗುತ್ತಿದೆ. ಆದರೆ ಇದಕ್ಕೆ ಸರಕಾರ ಅನುಮತಿ ನೀಡಿ, ಕೌನ್ಸಿಲ್ ಅನುಮತಿ ಸಿಕ್ಕಿದಲ್ಲಿ ಮಾತ್ರ ಮುಂದುವರಿಯಬಹುದು ಎಂದು ವಿ.ವಿ. ಉಪಕುಲಪತಿ ಪ್ರೊ| ಪಿ.ಎಸ್. ಎಡಪಡಿತ್ತಾಯ ತಿಳಿಸಿದ್ದಾರೆ.
Related Articles
ಸಾಮಾನ್ಯವಾಗಿ ಮೇ ಎರಡನೇ ವಾರ ದೊಳಗೆ ಎಸೆಸ್ಸೆಲ್ಸಿ ಫಲಿತಾಂಶ ಬಂದು ಜೂ. 18ರೊಳಗೆ ಪ್ರಥಮ ಪಿಯುಸಿ ತರಗತಿ ಆರಂಭವಾಗುತ್ತಿತ್ತು. ಆದರೆ ಈ ಬಾರಿ ಕನಿಷ್ಠ ಒಂದು ತಿಂಗಳು ತಡವಾಗಬಹುದು ಎನ್ನುತ್ತಾರೆ ಇಲಾಖಾಧಿಕಾರಿಗಳು. ಪಿಯುಸಿ ಪರೀಕ್ಷೆ ಬರೆದವರೂ ಪದವಿ ಯಾ ಇತರ ವೃತ್ತಿಪರ ಶಿಕ್ಷಣಕ್ಕೆ ದಾಖಲಾಗುವುದೂ ತಡವಾಗಲಿದೆ.
Advertisement
ಪಿಯುಸಿಯ ಇಂಗ್ಲಿಷ್ ಪರೀಕ್ಷೆ ಯಾವಾಗ ಎಂಬುದು ಲಾಕ್‌ಡೌನ್ ಮುಗಿದ ತತ್‌ಕ್ಷಣ ತೀರ್ಮಾನವಾಗಲಿದೆ. ಮೌಲ್ಯಮಾಪನ, ಫಲಿತಾಂಶ, ಮುಂದಿನ ತರಗತಿ ಸೇರ್ಪಡೆ ಎಲ್ಲವೂ ವಿಳಂಬವಾಗಲಿದೆ. ಆದರೆ ಇದು ಅನಿವಾರ್ಯ; ಬೇರೆ ದಾರಿ ಇಲ್ಲ.– ಕಲ್ಲಯ್ಯ ಸಿ.ಟಿ., ಜಂಟಿ ಉಪ ನಿರ್ದೇಶಕ (ಪರೀಕ್ಷೆ), ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು