ಮಕ್ಕಳಾಗಲಿಲ್ಲವೆನ್ನುವ ಕಾರಣಕ್ಕೆ ಗಂಡನಿಂದ ಶೋಷಿಸಲ್ಪಟ್ಟು, ಊರ ಹಿರಿಯನಿಂದ ಮೋಸಕ್ಕೊಳಗಾಗಿ ವೇಶ್ಯಾಗೃಹಕ್ಕೆ ತಳ್ಳಲ್ಪಟ್ಟ ಯುವತಿ ಪುಷ್ಪಾ. ಆಕೆಯ ಚಂದದ ಧ್ವನಿಗೆ ಮರುಳಾಗಿ ಆಕೆಯಲ್ಲಿ ಅನುರಕ್ತನಾಗುವವನು ಆನಂದ್ ಬಾಬು. ಮಡದಿಯ ನಿರ್ಲಕ್ಷ್ಯಕ್ಕೊಳಗಾಗಿ ತೊಳಲಾಡುವ ಆನಂದ್ ಬಾಬುವಿಗೆ ಮೊದಲ ನೋಟದಲ್ಲಿಯೇ ಪುಷ್ಪಾಳ ಮುಗಟಛಿತೆ, ಆಕೆಯ ಧ್ವನಿಯಲ್ಲಿನ ಮೋಹಕತೆ ಇಷ್ಟವಾಗುತ್ತದೆ.
ಪುಷ್ಪಾಳಿಗೂ ಆನಂದ್‌ನೆಡೆಗೆ ಪ್ರೇಮವಿದೆ. ಪ್ರೇಮರಾಹಿತ್ಯದಿಂದ ನೊಂದ, ತಮ್ಮವರಿಂದ ತಿರಸ್ಕರಿಸಲ್ಪಟ್ಟ ಈ ಎರಡು ಜೀವಗಳು, ನವಿಲುಗರಿಯ ಭಾವಗಳೊಂದಿಗೆ ವೇಶ್ಯಾಗೃಹದ ನಶೆಯುಕ್ತ ಸಂಜೆಗಳಲ್ಲಿ ಮುಳುಗಿದ್ದಾಗಲೇ, ಈ ಪ್ರೇಮಕತೆಗೆ ಮೂರನೆಯವನಾಗಿ, ನಂದು ಎಂಬ ಹುಡುಗ ಸೇರಿಕೊಳ್ಳುತ್ತಾನೆ. ಮಲತಾಯಿಯ ಕೈಯಲ್ಲಿ ಆಗಾಗ ಏಟು ತಿನ್ನುವ ಆ ಹುಡುಗನೆಡೆಗೆ ಪುಷ್ಪಾಳಿಗೆವಾತ್ಸಲ್ಯ. ಮಾತೃತ್ವದ ಮಮಕಾರ.
ಹೀಗೆ, ಮೂರೇ ಮೂರು ಪ್ರಮುಖ ಪಾತ್ರಗಳನ್ನಿಟ್ಟುಕೊಂಡು 1972ರಲ್ಲಿ ತೆರೆಕಂಡ ಸಿನಿಮಾದ ಹೆಸರು “ಅಮರ್‌ಪ್ರೇಮ…’. ಬಂಗಾಳಿ ಸಿನಿಮಾವೊಂದರ ರೀಮೆಕ್ ಆಗಿರುವ ಈ ಚಿತ್ರದ ಪ್ರಮುಖ ಪಾತ್ರಧಾರಿಗಳು ರಾಜೇಶ್ ಖನ್ನಾ ಮತ್ತು ಶರ್ಮಿಳಾ ಟ್ಯಾಗೋರ್. ಇವರಿಬ್ಬರ ಅಭಿನಯದ ಮಾಂತ್ರಿಕತೆಯನ್ನು ವಿವರಿಸುವುದು ಕಷ್ಟಸಾಧ್ಯ. ಅದರಲ್ಲೂ ಪರಿಸ್ಥಿತಿಯ ಕೈಗೊಂಬೆಯಾಗಿ ವೇಶ್ಯೆಯಾಗುವ ಪುಷ್ಪಾಳ ಪಾತ್ರದಲ್ಲಿ ಶರ್ಮಿಳಾ ಟ್ಯಾಗೋರ್ ಅಭಿನಯ ನಿಜಕ್ಕೂ ಅಧುºತ. ಆಕೆಯ ಮುಖದಲ್ಲಿ ವಿಷಾದ, ದು:ಖ, ಮಮಕಾರದಂತಹ ಭಾವಗಳ ಕದಲಿಕೆಯನ್ನು ನೋಡುವುದೇ ಒಂದು ಸೊಗಸು.
ರಾಜೇಶ್ ಖನ್ನಾರದ್ದು ಅದೇ ಎಂದಿನ ಲವಲವಿಕೆಯ ಪಾತ್ರ. ಇಷ್ಟೇ ಆಗಿದ್ದರೆ, “ಅಮರ್‌ಪ್ರೇಮ…’ ತುಂಬ ವಿಶೇಷವೆನ್ನಿಸುತ್ತಿರಲಿಲ್ಲ. ಆದರೆ, ಈ ಸಿನಿಮಾ ವಿಭಿನ್ನವಾಗಿ ನಿಲ್ಲುವುದು, ಪ್ರೇಮ ಎನ್ನುವ ಪದಕ್ಕೆ ಅಲ್ಲಿನ ವ್ಯಾಖ್ಯಾನದಿಂದ. ಇಲ್ಲಿ ಪ್ರೇಮವೆನ್ನುವುದು ಕೇವಲ ಗಂಡು ಹೆಣ್ಣುಗಳ ನಡುವಿನ ಆಕರ್ಷಣೆಯಲ್ಲ. ಪ್ರೇಮವೆಂದರೆ ಗೌರವ. ಪ್ರೇಮವೆಂದರೆ ವಾತ್ಸಲ್ಯ. ಪ್ರೇಮವೆಂದರೆ ಮಮಕಾರ. ಪ್ರೇಮವೆಂದರೆ ಸ್ವಾರ್ಥವಿಲ್ಲದ ಸುಂದರ ನವಿರು ಭಾವಗಳ ಅನುಭೂತಿ.
ನಿರ್ದೇಶಕರು ಇದನ್ನೆಲ್ಲಾ ಅದ್ಭುತವಾಗಿ ತೆರೆಯ ಮೇಲೆ ತಂದಿದ್ದಾರೆ. ವೇಶ್ಯಾಗೃಹದ ವಸ್ತುವಿದ್ದರೂ ಸಣ್ಣಾತಿಸಣ್ಣ ಅಶ್ಲೀಲತೆಯ ಸೋಂಕಿಲ್ಲದ, ಒಂದೇ ಒಂದು ದ್ವಂದ್ವಾರ್ಥದ ಸಂಭಾಷಣೆಯಿಲ್ಲದ ಸಿನಿಮಾ. ಹಿಂದಿ ಸಿನಿರಂಗದ ಸಾರ್ವಕಾಲಿಕ ಶ್ರೇಷ್ಠ ಅನ್ನುವಂಥ ಹಾಡುಗಳು ಈ ಚಿತ್ರದಲ್ಲಿವೆ. ಬಿಡುಗಡೆಯಾದ 48 ವರ್ಷಗಳ ನಂತರವೂ ನೋಡುಗನ ಮನವನ್ನು ಭಾವುಕವಾಗಿ ಆವರಿಸಿಕೊಂಡು ಬಿಡುತ್ತದೆಂದರೆ, ಅದು ಸಿನಿತಂಡದ ಅದ್ಭುತ ಪ್ರತಿಭೆಗೆ ಸಾಕ್ಷಿ.
* ಗುರುರಾಜ ಕೊಡ್ಕಣಿ ಯಲ್ಲಾಪುರ