Advertisement
ಈಗ ನಡೆಯುತ್ತಿರುವ ವಿಧಾನಸಭೆಯ ಅಧಿವೇಶನವು ಹೊಸದೊಂದು ವಿಪರ್ಯಾಸಕ್ಕೆ ಸಾಕ್ಷಿಯಾಗಿದೆ. ತಮ್ಮ ವಿಷಯ ಮಂಡನೆಗೆ ಸಭಾಧ್ಯಕ್ಷರು ಅನುಮತಿ ನೀಡುತ್ತಿಲ್ಲ ಎಂದು ವಿಪಕ್ಷಗಳು ಗೋಳಿಡುವುದು ಸಹಜವಾಗಿತ್ತು. ಆದರೆ ಮೊನ್ನೆಯ ಅಧಿವೇಶನ ಇದಕ್ಕೆ ಅಪವಾದದಂತಿತ್ತು. ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು “ಒಂದು ದೇಶ ಒಂದು ಚುನಾವಣೆ’ ಎಂಬ ವಿಷಯದ ಕುರಿತು ವಿಶೇಷ ಚರ್ಚೆಗೆ ಮುನ್ನುಡಿ ಹಾಡಿದ್ದರು. ಜತೆಗೆ ವಿಧಾನಸಭೆಯ ಮೂಲ ಉದ್ದೇಶವೇ ಅಭಿಪ್ರಾಯವನ್ನು ವ್ಯಕ್ತಪಡಿಸುವುದಾಗಿದೆ. ಮುಕ್ತವಾದ ಅವಕಾಶವನ್ನು ನೀಡುತ್ತಿದ್ದೇನೆ, ಸದನದ ಬಾವಿಗಿಳಿದು ಏಕೆ ಆಕ್ರೋಶವನ್ನು ವ್ಯಕ್ತಪಡಿಸದೆ, ಆಸನಗಳಲ್ಲಿ ಕುಳಿತು ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಎಂದರೂ, ಕಾಂಗ್ರೆಸ್ ಶಾಸಕರು ಅದನ್ನು ಪುರಸ್ಕರಿಸುವ ಮನಃಸ್ಥಿತಿ ಹೊಂದಿರಲಿಲ್ಲ. ಅವಕಾಶ ನೀಡಿದರೂ ಚರ್ಚಿಸುವುದಿಲ್ಲ, ಬೇರೆ ಯವರು ಚರ್ಚಿಸಲೂ ಬಿಡುವುದಿಲ್ಲ ಎಂಬ ಮೊಂಡುವಾದಕ್ಕೆ ಕಲಾಪ ಬಲಿಯಾಯಿತು.
ದೇಶದ 28 ರಾಜ್ಯಗಳು 9 ಕೇಂದ್ರಾಡಳಿತ ಪ್ರದೇಶಗಳು ಒಂದೇ ಸಮಯದಲ್ಲಿ ಚುನಾವಣೆಯನ್ನು ಎದುರಿಸುತ್ತಿಲ್ಲ. ಸರಾಸರಿ 2 ತಿಂಗಳುಗಳಲ್ಲಿ ನಾಲ್ಕೆ çದು ರಾಜ್ಯಗಳಲ್ಲಿ ಚುನಾವಣೆಯು ಜರಗುತ್ತಲೇ ಇರುತ್ತವೆ. ಹಾಗಾಗಿ ನೀತಿ ಆಯೋಗವು ಪ್ರಜಾಪ್ರಭುತ್ವ ವ್ಯವಸ್ಥೆ ಸದಾ ಚುನಾವಣ ಗುಂಗಿನಲ್ಲಿರುತ್ತದೆ ಎಂದಿದೆ. 1952ರಿಂದ ಪ್ರಾರಂಭವಾದ ಸಾರ್ವತ್ರಿಕ ಚುನಾವಣೆಗಳು 1967ರ ವರೆಗೆ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳ ಚುನಾವಣೆಗಳನ್ನು ಒಟ್ಟಾಗಿಯೆ ಎದುರಿಸಿದ್ದವು. ಅನಂತರದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳಿಂದ ಏರು ಪೇರಾದವು. ಇದರ ಪರಿಣಾಮ ಚುನಾವಣ ಆಯೋಗವು ಸದಾ ಚುನಾವಣ ಪ್ರಕ್ರಿಯೆ ಯಲ್ಲಿಯೇ ಇರುವಂತಾಯಿತು. ಪ್ರಜಾಪ್ರಾತಿನಿಧ್ಯ ಕಾಯ್ದೆಯು ವಿಧಾನಸಭೆ ಹಾಗೂ ಸಂಸತ್ತಿನ ಅವಧಿಯ ಅಂತ್ಯಕ್ಕೆ 6 ತಿಂಗಳ ಮುಂಚಿತವಾಗಿ ಚುನಾವಣೆಯನ್ನು ಘೋಷಿಸುವ ಅಧಿಕಾರ ನೀಡಿದೆ. ಹಾಗೆಯೇ ಭಾರತದ ಸಂವಿಧಾನ ಅನುಚ್ಛೇದ 356 ಅವಧಿ ಮುಗಿದಿದ್ದರೂ 6 ತಿಂಗಳ ವರೆಗೆ ಚುನಾವಣೆ ಮುಂದೂಡುವ ಅಧಿಕಾರವನ್ನು ರಾಷ್ಟ್ರಪತಿಗಿದೆ. ಇವೆರೆಡೂ ಅಂಶಗಳನ್ನು ಗಮನಿಸಿದರೆ ಸಮಯದ ಹೊಂದಾಣಿಕೆಯೊಂದಿಗೆ ಏಕಕಾಲದ ಚುನಾವಣೆ ನಡೆಸಲು ಅವಕಾಶವನ್ನು ಕಲ್ಪಿಸಿದಂತಾಗಿದೆ.
Related Articles
Advertisement
ಭಾರತದಲ್ಲಿ ಅನುಷ್ಠಾನಕ್ಕೆ ತರಲು ಸಾಧ್ಯವೆ?ರಾಜ್ಯಗಳಲ್ಲಿ ಸರಕಾರಗಳು ವಿಸರ್ಜನೆಗೊಂಡರೆ ಅಥವಾ ಅವಧಿಪೂರ್ವ ಚುನಾವಣೆ ಎದುರಾದರೆ ಅಂಥ ಸಂದರ್ಭ ಹೇಗೆ ಎದುರಿಸುವುದು? ಎಂಬ ಗೊಂದಲಗಳಿಗೆ ನೀತಿ ಆಯೋಗ, ಕಾನೂನು ಆಯೋಗಗಳು ಮಾರ್ಗಸೂಚಿಗಳನ್ನು ನೀಡಿವೆ.
ಗ್ರಾಪಂನಿಂದ ಪಾರ್ಲಿಮೆಂಟಿನ ಎಲ್ಲ ಚುನಾವಣೆಗಳಿಗೂ ಅನ್ವಯವಾಗುವ ಮತದಾರರ ಒಂದೇ ಪಟ್ಟಿಯನ್ನು ತಯಾರಿಸುವುದು. ಸಂವಿಧಾನದ ತಿದ್ದುಪಡಿಯ ಮೂಲಕ ಆಯ್ಕೆಯಾದ ದಿನದಿಂದ ಮುಂದಿನ ಐದು ವರ್ಷಗಳ ಅವಧಿಯವರೆಗೆ ವಿಧಾನಸಭೆ ಅಥವಾ ಸಂಸತ್ತಿನ ಅವಧಿ ಎಂಬುದರ ಬದಲಾಗಿ ಸಂಸತ್ತು ಹಾಗೂ ವಿಧಾನ ಮಂಡಲಗಳ ಅವಧಿಯನ್ನು ನಿಗದಿತ ದಿನಾಂಕದಿಂದ ಐದು ವರ್ಷಗಳವರೆಗೆ ಎಂಬುದಾಗಿ ತಿದ್ದುಪಡಿಗೊಳಿಸಿ ಏಕಕಾಲದಲ್ಲಿ ಕೇಂದ್ರ ಮತ್ತು ರಾಜ್ಯಗಳ ಚುನಾವಣೆಯನ್ನು ಕೈಗೊಳ್ಳಲು ಸಾಧ್ಯವಾಗಲಿದೆ ಎಂದು ಶಿಫಾರಸು ಮಾಡಿದೆ. ಉದಾಹರಣೆಗೆ ಈಗಿರುವ ಸಂಸತ್ತನ್ನು 17ನೇ ಸಂಸತ್ತು ಎಂದು ಘೋಷಿಸಲಾಗಿದೆ. “ಒಂದು ರಾಷ್ಟ್ರ-ಒಂದು ಚುನಾವಣೆ’ ಜಾರಿಗೆ ಬಂದರೆ ಮುಂದಿನ 18ನೇ ಸಂಸತ್ತಿನ ಅವಧಿ 2024ರಿಂದ 2029ರ ವರೆಗೆ ಎಂದು ನಿರ್ಧರಿತವಾಗುತ್ತದೆ. ಎಲ್ಲ ರಾಜ್ಯಗಳ ವಿಧಾನಮಂಡಲಗಳ ಚುನಾವಣೆಯನ್ನು ಒಂದು ಅಥವಾ ಎರಡು ಹಂತಗಳಲ್ಲಿ ಅವಧಿ ವಿಸ್ತರಣೆ ಅಥವಾ ಅವಧಿ ಪೂರ್ವ ಚುನಾವಣೆಯಾಗಿ ಪರಿಗಣಿಸಿ ಏಕಕಾಲದಲ್ಲಿ ಕೈಗೊಳ್ಳ ಲಾಗುತ್ತದೆ. ಹೀಗೆ ಆಯ್ಕೆಯಾಗುವ ಸಂಸತ್ ಹಾಗೂ ವಿಧಾನ ಮಂಡಲಗಳ ಅವಧಿಯು 5 ವರ್ಷಗಳದ್ದಾಗಿರುತ್ತದೆ. ಮಧ್ಯದಲ್ಲಿ ಯಾವುದಾದರೂ ರಾಜ್ಯ ವಿಧಾನಸಭೆ ಅಥವಾ ಪಾರ್ಲಿಮೆಂಟ್ ವಿಸರ್ಜನೆಯಾದರೆ ಆಗ ನಡೆಯುವ ಉಪಚುನಾವಣೆಯು ಉಳಿದ ಅವಧಿಯವರೆಗೆ ಮಾತ್ರ ಮೀಸಲಿರಿಸಿ ಚುನಾವಣೆಯನ್ನು ಕೈಗೊಳ್ಳಲಾಗುತ್ತದೆ. ಇಂಥ ಅಂಶ ಶಿಫಾರಸಿನಲ್ಲಿದೆ. ಏಕಕಾಲದಲ್ಲಿ ಕೇಂದ್ರ ಹಾಗೂ ರಾಜ್ಯ ಚುನಾವಣೆಗಳನ್ನು ನಡೆಸಲು ತಾನು ಸಿದ್ಧವಿರುವುದಾಗಿ ಕೇಂದ್ರ ಚುನಾವಣ ಆಯೋಗವು ಹೇಳಿದೆ. ಇದರಿಂದ ಆರ್ಥಿಕ ನಷ್ಟದ ತಡೆ, ಚುನಾವಣ ಭ್ರಷ್ಟಾಚಾರಕ್ಕೂ ಕಡಿವಾಣ ಬೀಳಲಿದೆ. ಅಭಿವೃದ್ಧಿಪರ ತೀರ್ಮಾನಗಳನ್ನು ಸರಕಾರಗಳು ಕೈಗೊಳ್ಳಲು ಸಾಧ್ಯವಾಗಬಹುದು. ಪದೇ ಪದೆ ಬಂದೆರಗುವ ನೀತಿ ಸಂಹಿತೆ ಭೀತಿಯೂ ಇರುವುದಿಲ್ಲ. ಈ ಕುರಿತು ಸಾಧಕ ಭಾದಕಗಳ ಬಗ್ಗೆ ಬೆಳಕು ಚೆಲ್ಲಬೇಕಾದ ಪ್ರಮುಖ ವಿಪಕ್ಷಗಳು ಹಾಗೂ ಪ್ರಾದೇಶಿಕ ಪಕ್ಷಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡಿರುವುದು ವಿಪರ್ಯಾ ಸವಾಗಿದೆ. ಕರ್ನಾಟಕ ವಿಧಾನಸಭೆಯಲ್ಲಾಗಬೇಕಾದ ಪ್ರಮುಖ ಚರ್ಚೆಯು ರಾಜಕೀಯ ಕಾರಣಕ್ಕಾಗಿ ಹಳಿ ತಪ್ಪಿದುದರಿಂದಾಗಿ ಅದರ ಬಗ್ಗೆ ಜನಾಭಿಪ್ರಾಯವನ್ನು ರೂಪಿಸುವ ಹೊಣೆ ಜನಸಾಮಾನ್ಯರ ಹೆಗಲೇರಿದೆ. ಹಾಗಾಗಿ ಸಾಹಿತಿಗಳ ಗೋಷ್ಠಿಗಳು, ಶಾಲಾ-ಕಾಲೇಜುಗಳಲ್ಲಿ ನಡೆಯುವ ಚರ್ಚಾ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆಗಳು ಮಾಧ್ಯಮಗಳ ಚರ್ಚಾ ವಿಷಯಗಳು ಒಂದು ರಾಷ್ಟ್ರ-ಒಂದು ಚುನಾವಣೆ ಎಂಬ ಪರಿಕಲ್ಪನೆಯ ಕುರಿತು ಅಭಿಪ್ರಾಯಗಳು ವ್ಯಕ್ತವಾಗಲಾರಂಭಿಸಿದರೆ ಆಗ ಹೊಮ್ಮುವ ಪರ ಅಥವಾ ವಿರೋಧಿ ಜನಮತಕ್ಕೆ ನಿಜವಾದ ಮನ್ನಣೆ ದೊರೆಯಲಿದೆ. – ಪಿ.ರಾಜೀವ್ ಶಾಸಕರು, ಕುಡಚಿ