ಕಲಬುರಗಿ: ಎಂಥದ್ದೇ ಪರಿಸ್ಥಿತಿ ಬಂದರೂ ಆದರ್ಶ ನಂಬಿ ಬದುಕುವುದರಿಂದ ನಮ್ಮ ಉನ್ನತಿ ಇತರರಿಗೆ ಮಾದರಿ ಎನಿಸುತ್ತದೆ ಎಂದು ಶರಣಬಸವೇಶ್ವರ ಮಹಾದಾಸೋಹಿ ಸಂಸ್ಥಾನದ ಪೀಠಾಧಿಪತಿ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಡಾ| ಶರಣಬಸವಪ್ಪ ಅಪ್ಪ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಕಣದಲ್ಲಿರುವ ವೀರಭದ್ರ ಸಿಂಪಿ ಹಾಗೂ ಅವರ ಹಿತೈಷಿಗಳು ಚುನಾವಣಾ ಪ್ರಚಾರದ ಭಾಗವಾಗಿ ಸಂಸ್ಥಾನದ ದಾಸೋಹ ಮನೆಗೆ ತೆರಳಿದ್ದ ವೇಳೆ ದರ್ಶನಾಶೀರ್ವಾದ ನೀಡಿದ ಬಳಿಕ ಅಪ್ಪ ಮಾತನಾಡಿದರು.
ಆದರ್ಶದ ಬೆಳೆ ಬಿತ್ತಿದಾಗ ಮಾತ್ರ ಅದು ಇಳುವರಿಯಾಗಿ ಬರುತ್ತದೆ. ಈ ನಿಟ್ಟಿನಲ್ಲಿ ಜಾಗೃತಿ ವಹಿಸಬೇಕು ಎಂದು ಸಲಹೆ ನೀಡಿದರು. ಶತಮಾನಗಳಿಂದ ಧಾರ್ಮಿಕ, ಸೈಕ್ಷಣಿಕ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಬೆಳೆಸುವ ಕಾಯಕದಲ್ಲಿ ಸಂಸ್ಥಾನವು ನಿರತವಾಗಿದೆ. ಅದರಲ್ಲೂ, ನಿಜಾಮ ಸರ್ಕಾರದ ಆಡಳಿತದ ಸಂದರ್ಭದಲ್ಲಿ ಉರ್ದು ಪ್ರಾಬಲ್ಯದ ಮಧ್ಯೆಯೂ ವಿದ್ಯಾರ್ಥಿಗಳಿಗೆ ಕನ್ನಡ ಬೋಧಿಸಿದ ಹೆಗ್ಗಳಿಕೆ ಸಂಸ್ಥಾನಕ್ಕಿದೆ. ಇಂತಹ ಆದರ್ಶದ ಕೆಲಸಗಳಿಗೆ ಮುಂದಾಗಬೇಕು ಎಂದರು.
1928 ಮತ್ತು 1948ರಲ್ಲಿ ನಡೆದ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ದೊಡ್ಡಪ್ಪ ಅಪ್ಪ ನೇತೃತ್ವದಲ್ಲಿ ನಡೆಸಿ ನಾಡು ನುಡಿಗಾಗಿ ಸಂಸ್ಥಾನವು ಶ್ರಮಿಸುತ್ತಾ ಬಂದಿದೆ. ಜೊತೆಗೆ, ಕರ್ನಾಟಕ ಏಕೀಕರಣದ ಹೋರಾಟಕ್ಕೂ ಶರಣ ಸಂಸ್ಥಾನ ಕೊಡುಗೆ ನೀಡಿದೆ. ಈ ನಿಟ್ಟಿನಲ್ಲಿ ನಾಡು, ನುಡಿ, ಸಾಹಿತ್ಯ ಮತ್ತು ಸಂಸ್ಕೃತಿ ಬೆಳವಣಿಗೆಗಾಗಿ ವೀರಭದ್ರ ಸಿಂಪಿ ಮುಂಚೂಣಿಯಲ್ಲಿ ನಿಂತು ನಡೆಸುತ್ತಾ ಬಂದಿರುವ ಹೋರಾಟಗಳನ್ನು ತಾವು ಗಮನಿಸಿದ್ದೇವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ವರದಿಗೆ ಪ್ರತಿಕ್ರಿಯೆ ನೀಡಲು ಸರ್ಕಾರಕ್ಕೆ ಹೈ ಸೂಚನೆ
ಮಾತೋಶ್ರೀ ಡಾ| ದಾಕ್ಷಾಯಣಿ ಅವ್ವ ಆಶೀರ್ವಚನ ನೀಡಿ, ಶರಣ ಸಂಸ್ಕೃತಿ ಹಾದಿಯಲ್ಲಿ ನಡೆಯುವವರಿಗೆ ನಿಶ್ಚಿತವಾಗಿಯೂ ಫಲವಿದೆ ಎಂದರು. ಡಾ| ಶಿವರಾಜ ಶಾಸ್ತ್ರೀ, ಪ್ರೊ|ನಂದಕುಮಾರ, ದೌಲತ್‌ರಾಯ ಮಾಲಿಪಾಟೀಲ, ವಿನೋದ ಜನೆವರಿ, ಮಲ್ಲಿಕಾರ್ಜುನ ಮೇತ್ರಿ, ಹಣಮಂತರಾಯ ಐನೂಲಿ, ಮಹಾಂತೇಶ ಹೂಗಾರ, ವೀರಸಂಗಪ್ಪ ಸುಲೇಗಾಂವ, ವಿಜಯಕುಮಾರ ದೇಶಮುಖ, ಶ್ರೀಕಾಂತ ಫುಲಾರಿ, ಸಾಗರ ಹಿರೇಮಠ, ಶಾಂತಕುಮಾರ ಬಿರಾದಾರ, ವಿಶ್ವನಾಥ ಶೇಗಜಿ, ಸಿದ್ಧು ಕಲ್ಯಾಣಿ, ಮಲ್ಲಿನಾಥ ಸಂಗಶೆಟ್ಟಿ, ಸುರೇಶ ಹತ್ತಿ, ಹರ್ಷವರ್ಧನ ಸಾಗರ, ಪ್ರಮೋದ ಖೇಡ, ಸೋಮಶೇಖರ ಸಿಂಪಿ ಹಾಗೂ ಮುಂತಾದವರು ಇದ್ದರು.