Advertisement
ಪತಿಯ ವಿರುದ್ಧ ಕೌಟುಂಬಿಕ ದೌರ್ಜನ್ಯ, ಅನೈತಿಕ ಸಂಬಂಧ, ಮದ್ಯ ವ್ಯಸನ ಸೇರಿದಂತೆ ಅನೇಕ ಆರೋಪಗಳನ್ನು ಮಾಡಿದ್ದ ಪತ್ನಿ, ಆತನಿಂದ ಜೀವನಾಂಶ ಬಯಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ, ಯಾವೊಂದು ಆರೋಪವನ್ನೂ ಸಾಬೀತುಪಡಿಸುವಲ್ಲಿ ವಿಫಲಳಾಗಿದ್ದರು. ಈ ನಡವಳಿಕೆಯಿಂದ ಬೇಸತ್ತ ಪತಿ, ತನ್ನ ವ್ಯಕ್ತಿತ್ವಕ್ಕೆ ಧಕ್ಕೆ ತರುತ್ತಿರುವ ಪತ್ನಿಯಿಂದ ವಿಚ್ಛೇದನ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ. ಈ ಅರ್ಜಿಯನ್ನು ನ್ಯಾ. ವಿನೀತ್ ಕೊಠಾರಿ ಹಾಗೂ ನ್ಯಾ. ಎಚ್.ಎನ್.ಪ್ರಭಾಕರ ಶಾಸ್ತ್ರೀ ಅವರಿದ್ದ ವಿಭಾಗೀಯ ಪೀಠ ಪುರಸ್ಕರಿಸಿದೆ.
Related Articles
Advertisement
ಪ್ರಕರಣವೇನು?: ಬೆಳಗಾವಿ ಮೂಲದ ಸಾಫ್ಟ್ವೇರ್ ಎಂಜಿನಿಯರ್ ಪ್ರವೀಣ್ ಹಾಗೂ ನೇಹಾ (ಇಬ್ಬರ ಹೆಸರೂ ಬದಲಿಸಲಾಗಿದೆ) 2003ರ ಡಿಸೆಂಬರ್ ತಿಂಗಳಿನಲ್ಲಿ ವಿವಾಹವಾಗಿದ್ದರು. ಆರು ವರ್ಷ ಇವರು ಸಹಬಾಳ್ವೆ ನಡೆಸಿದ್ದು, ದಂಪತಿಗೆ ಒಬ್ಬ ಪುತ್ರನಿದ್ದಾನೆ. 2009ರಲ್ಲಿ ತವರುಮನೆಗೆ ತೆರಳಿದ್ದ ನೇಹಾ, ಗಂಡನ ಮನೆಗೆ ವಾಪಸಾಗಿರಲಿಲ್ಲ. ಅಲ್ಲದೆ, ಪತಿಯಿಂದ ಜೀವನಾಂಶ ಕೋರಿ ಮತ್ತು ಕೌಟುಂಬಿಕ ದೌರ್ಜನ್ಯದಡಿ ಬೆಳಗಾವಿ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರತ್ಯೇಕ ದಾವೆ ಹೂಡಿದ್ದರು.
“ಪತಿ ಮದ್ಯ ವ್ಯಸನಿಯಾಗಿದ್ದು, ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಾನೆ. ಆತನ ವ್ಯಸನ ಬಿಡಿಸಲು “ಪುನರ್ವಸತಿ ಕೇಂದ್ರಕ್ಕೆ’ ಸೇರಿಸಲು ಯತ್ನಿಸಲಾಗಿತ್ತು. ಆತ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಸಹದ್ಯೋಗಿಗಳೊಂದಿಗೆ ದುರ್ವರ್ತನೆ ತೋರಿದ ಕಾರಣಕ್ಕೆ ಶಿಕ್ಷೆಯ ರೂಪದಲ್ಲಿ ಪುಣೆಗೆ ವರ್ಗಾವಣೆಗೊಂಡಿದ್ದ. ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದ.
ಬೇರೊಬ್ಬ ಮಹಿಳೆ ಜತೆ ಅನೈತಿಕ ಸಂಬಂಧ ಹೊಂದಿದ್ದಾನೆ’ ಎಂಬಿತ್ಯಾದಿ ಆರೋಪಗಳನ್ನು ಪತ್ನಿ ಮಾಡಿದ್ದರು. ಇನ್ನೊಂದೆಡೆ ಪತಿಯ ವಿರುದ್ಧವೇ ಕಳ್ಳತನದ ಪ್ರಕರಣ ದಾಖಲಿಸಿದ್ದು, ಪೊಲೀಸರು ಈ ಕುರಿತು ಬಿ ರಿಪೋರ್ಟ್ ಸಲ್ಲಿಸಿದ್ದರು. ಪತ್ನಿಯ ಈ ಆರೋಪಗಳಿಂದ ಬೇಸತ್ತಿದ್ದ ಪ್ರವೀಣ್ ಕೂಡ ವಿಚ್ಛೇದನ ಕೋರಿ ಬೆಳಗಾವಿಯ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ನೇಹಾ ಜೀವನಾಂಶ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೌಟುಂಬಿಕ ನ್ಯಾಯಾಲಯ, ಪುತ್ರನ ವೆಚ್ಚಕ್ಕಾಗಿ ಮಾಸಿಕ 7500 ರೂ. ನೀಡಬೇಕು ಎಂದು ಪ್ರವೀಣ್‌ಗೆ ಸೂಚಿಸಿತ್ತು. ಅಲ್ಲದೆ, ಪತಿಯೊಂದಿಗೆ ಸಹಬಾಳ್ವೆ ನಡೆಸುವಂತೆ ನಿರ್ದೇಶನ ನೀಡಿತ್ತು. ಆದರೆ, ನೇಹಾ, ಪತಿ ವಿರುದ್ಧ ಮಾಡಿದ ಆರೋಪಗಳನ್ನು ಸಾಬೀತುಪಡಿಸಲು ವಿಫಲರಾಗಿದ್ದರು ಎಂಬ ಕಾರಣಕ್ಕೆ ಪ್ರಕರಣ ವಜಾಗೊಳಿಸಿ ಪತಿಯೊಂದಿಗೆ ಕೂಡಿ ಬಾಳುವಂತೆ ಸಲಹೆ ನೀಡಿತ್ತು. ಇನ್ನೊಂದೆಡೆ ಪತ್ನಿಯಿಂದ ವಿಚ್ಛೇದನ ಕೋರಿ ಪ್ರವೀಣ್ ಸಲ್ಲಿಸಿದ್ದ ಅರ್ಜಿಯನ್ನೂ ವಜಾಗೊಳಿಸಿತ್ತು.
* ಮಂಜುನಾಥ್ ಲಘುಮೇನಹಳ್ಳಿ