ಬೆಂಗಳೂರು: ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ತಾನು ಪ್ರೀತಿಸಿದ ಮುಸ್ಲಿಂ ಯುವಕನ ಮದುವೆಯಾದ ಯುವತಿಯನ್ನು ಆಕೆಯ ಪತಿಯ ಸುಪರ್ದಿಗೆ ವಹಿಸಿದ ಹೈಕೋರ್ಟ್, ದಂಪತಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಪೊಲೀಸರಿಗೆ ಸೂಚನೆ ನೀಡಿದೆ.
ತನ್ನ ಪತ್ನಿಯನ್ನು ಪೊಲೀಸರು ಅಕ್ರಮ ಬಂಧನದಲ್ಲಿಟ್ಟಿದ್ದಾರೆ ಎಂದು ಆರೋಪಿಸಿ ಯುವಕ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಸಿದ ನ್ಯಾ. ರಾಘವೇಂದ್ರ ಚೌಹಾಣ್ ಮತ್ತು ನ್ಯಾ. ಎಚ್.ಟಿ. ನರೇಂದ್ರ ಪ್ರಸಾದ್ ಅವರನ್ನೊಳಗೊಂಡ ವಿಭಾಗೀಯಪೀಠ, ಯುವತಿಯ ಹೇಳಿಕೆ ದಾಖಲಿಸಿಕೊಂಡು, ಆಕೆಯನ್ನು ಪತಿಯ ಸುಪರ್ದಿಗೆ ಒಪ್ಪಿಸಿತು.
ಅಲ್ಲದೇ, ದಂಪತಿಗೆ ಸೂಕ್ತ ರಕ್ಷಣೆ ನೀಡುವಂತೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ತುಂಗಾನಗರ ಪೊಲೀಸ್ ಠಾಣೆ ಅಧಿಕಾರಿಗಳಿಗೆ ನಿರ್ದೇಶನ ಕೊಟ್ಟಿತು. ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರಿತೀಸುತ್ತಿದ್ದ ಯುವಕ ಹಾಗೂ ಯುವತಿ ಇತ್ತೀಚಿಗೆ ಮದುವೆಯಾಗಿ ಒಂದೇ ಮನೆಯಲ್ಲಿ ಒಟ್ಟಿಗೆ ವಾಸವಿದ್ದರು.
ಈ ಮಧ್ಯೆ ಯುವತಿಯ ಪೋಷಕರು ಪೊಲೀಸರಿಗೆ ದೂರು ಕೊಟ್ಟಿದ್ದರು. ಅದರಂತೆ ಯುವಕ ಮತ್ತು ಯುವತಿ ವಾಸವಿದ್ದ ಮನೆ ಪತ್ತೆ ಹಚ್ಚಿದ ಪೊಲೀಸರು, ಆಕೆಯನ್ನು ಬಾಲಕಿಯರ ಮಂದಿರದಲ್ಲಿ ಇರಿಸಿದ್ದರು. ಇದರಿಂದ ಪೊಲೀಸರು ತನ್ನ ಪತ್ನಿಯನ್ನು ಅಕ್ರಮ ಬಂಧನದಲ್ಲಿಟ್ಟಿದ್ದಾರೆ ಎಂದು ದೂರಿ ಯುವಕ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದ.
ಅಪಾಯವಿದೆ ಎಂದ ಪೊಲೀಸರು: ಇದಕ್ಕೂ ಮೊದಲು ನಡೆದ ವಿಚಾರಣೆ ವೇಳೆ, ಇದೊಂದು ಅಂತರ್‌ಧರ್ಮಿಯ ವಿವಾಹವಾಗಿದ್ದು, ಸೂಕ್ಷ್ಮ ಪ್ರಕರಣವಾಗಿದೆ. ಯುವಕ ಹಾಗೂ ಆತನ ಕುಟುಂಬದ ಸದಸ್ಯರಿಗೆ ತೊಂದರೆಯಾಗುವ ಸಾಧ್ಯತೆಯಿದೆ ಎಂದು ಪೊಲೀಸರು ನ್ಯಾಯಮಪೀಠದ ಗಮನಕ್ಕೆ ತಂದರು. ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠ, ದಂಪತಿಗೆ ರಕ್ಷಣೆ ನೀಡುವುದು ಪೊಲೀಸರ ಕರ್ತವ್ಯ.
ಒಂದು ವೇಳೆ ಯುವತಿ, ಯುವಕ ಹಾಗೂ ಆತನ ಕುಟುಂಬದ ಸದಸ್ಯರ ಜೀವನಕ್ಕೆ ಅಪಾಯವಿರುವ ಮಾಹಿತಿ ಇದ್ದರೆ, ತಕ್ಷಣ ರಕ್ಷಣೆ ನೀಡಬೇಕು. ಪೊಲೀಸರು ವಿಫಲವಾದರೆ ಯುವಕ ಅಥವಾ ಆತನ ಕುಟುಂಬದ ಯಾರೇ ಸದಸ್ಯ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ನ್ಯಾಯಪೀಠ ಅರ್ಜಿ ಇತ್ಯರ್ಥಪಡಿಸಿತು.