ಉಡುಪಿ: ಕೃಷಿ ಪ್ರಧಾನವಾದ ರಾಷ್ಟ್ರದಲ್ಲಿ ಕೃಷಿಕನಿಗೆ ಅತಿ ಹೆಚ್ಚು ಆದ್ಯತೆ ನೀಡಬೇಕು. ಆತನ ಮುನಿಸು ಹಲವರ ಹಸಿವಿಗೆ ಮೂಲವಾದೀತು ಎಂದು ಉಡುಪಿ ತಾ.ಪಂ. ಅಧ್ಯಕ್ಷರಾದ ನಳಿನಿ ರಾವ್ ಹೇಳಿದರು.
ಅವರು ಉಡುಪಿ ತೋಟಗಾರಿಕಾ ಇಲಾಖೆ, ಜಿ.ಪಂ. ಹೆಮ್ಮಾಡಿಯ ಶ್ರೀಲಕ್ಷ್ಮೀನಾರಾಯಣ ಸೇವಂತಿಗೆ ಹೂವಿನ ಬೆಳೆಗಾರರ ಸಂಘದ ವತಿಯಿಂದ ಉಡುಪಿ ಮಲ್ಲಿಗೆ ಹಾಗೂ ಸೇವಂತಿಗೆ ಬೆಳೆ ವೈಜ್ಞಾನಿಕ ಬೇಸಾಯ-ಪ್ಯಾಕೇಜಿಂಗ್ ಪದ್ಧತಿ ಮತ್ತು ಮಾರುಕಟ್ಟೆ ವ್ಯವಸ್ಥೆ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿದರು.
ತಾನು ಬೆಳೆದ ಉತ್ಪನ್ನಗಳನ್ನು ನೇರವಾಗಿ ಮಾರುಕಟ್ಟೆಗೆ ತರಲಾಗವುದಿಲ್ಲವೆಂಬ ಕಾರಣಕ್ಕೆ ಮಧ್ಯವರ್ತಿಗಳು ಕೃಷಿಕನನ್ನು ಶೋಷಣೆ ಮಾಡುತ್ತಿದ್ದಾರೆ. ಕಡಿಮೆ ಬೆಲೆಯಲ್ಲಿ ಖರೀದಿಸಿ ಉತ್ತಮ ಬೆಲೆ ಮಾರಾಟ ಮಾಡಿ ಹಣಮಾಡುತ್ತಿದ್ದಾರೆ. ಈ ಬಗ್ಗೆ ಇಲಾಖೆಗಳು ರೈತರ ಸಂಕಷ್ಟವನ್ನು ಅರಿತು ಅವರಿಗೆ ನೇರ ಮಾರುಕಟ್ಟೆಯ ಸೌಲಭ್ಯವನ್ನು ಒದಗಿಸಬೇಕೆಂದು ಅವರು ಕೋರಿದರು.
ಉಡುಪಿ ಮಲ್ಲಿಗೆ ಬೆಳಗಾರರ ಸಂಘದ ಅಧ್ಯಕ್ಷರಾದ ರಾಮಕೃಷ್ಣ ಶರ್ಮ ಬಂಟಕಲ್ಲು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶ್ರೀನಿವಾಸ ಭಟ್ ಕುದಿ, ಶ್ರೀಲಕ್ಷ್ಮೀನಾರಾಯಣ ಸೇವಂತಿಗೆ ಹೂವಿನ ಬೆಳೆಗಾರರ ಸಂಘದ ಅಧ್ಯಕ್ಷ ಮಹಾಬಲ ದೇವಾಡಿಗ, ಉಡುಪಿ ಜಿ.ಪಂ. ತೋಟಗಾರಿಕಾ ಉಪನಿರ್ದೇಶಕರಾದ ಭುವನೇಶ್ವರಿ ಹಾಗೂ ಉಡುಪಿ ಪುಷ್ಪ ಹರಾಜು ಕೇಂದ್ರದ ನಿರ್ದೇಶಕರಾದ ಅನಿತಾ ಉಪಸ್ಥಿತರಿದ್ದರು.
ಮೂಡಿಗೆರೆ ಪುಷ್ಪ ಕೃಷಿ ಹಾಗೂ ಉದ್ಯಾನ ವಿನ್ಯಾಸ ಶಾಸ್ತ್ರ, ತೋಟಗಾರಿಕಾ ಮಹಾವಿದ್ಯಾಲಯದ ಎಸ್.ವೈ. ಚಂದ್ರಶೇಖರ್, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞರಾದ ಚೈತನ್ಯ ಎಚ್.ಎಸ್. ಸಂಪನ್ಮೂಲ ವ್ಯಕ್ತಿಗಳಾಗಿದ್ದರು.
ಉಡುಪಿ- ಕುಂದಾಪುರ ತೋಟ ಗಾರಿಕಾ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಸಂಜೀವ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.