Advertisement

ಮಾನವ ಕುಲಕ್ಕೆ ಅನುಭಾವದ ಹಸಿವು ಮುಖ್ಯ; ಡಾ|ಮುರುಘಾ ಶರಣರು

05:39 PM Aug 22, 2022 | Team Udayavani |

ಚಿತ್ರದುರ್ಗ: ಬುದ್ಧಿಜೀವಿಯಾದ ಮಾನವ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿದ್ದಾನೆ. ಬುದ್ಧಿವಂತ ಮಾನವ ಅಕ್ರಮ ಸೃಷ್ಟಿ ಮಾಡುತ್ತಾನೆ. ಅದರೊಟ್ಟಿಗೆ ಅತಿಕ್ರಮ ಮಾಡುತ್ತಾನೆ. ಅಕ್ರಮ ಇರುವಲ್ಲಿ ಅಪರಾಧವೂ ಇರುತ್ತದೆ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Advertisement

ನಗರದ ಶ್ರೀ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ನಡೆದ “ನಿತ್ಯ ಕಲ್ಯಾಣ’ ಮನೆ ಮನೆಗೆ ಚಿಂತನ’ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾನವನಿಗೆ ಹೊಟ್ಟೆಯ ಹಸಿವಿಗಿಂತ ಅನುಭಾವದ ಹಸಿವು ಆಗಬೇಕು. ನಿಸರ್ಗದಲ್ಲಿ ಬದುಕನ್ನು ನಡೆಸುತ್ತಿದ್ದೇವೆ. ಪ್ರಾಣಿ-ಪಕ್ಷಿಗಳಿಗೆ ಕಾನೂನು ಇಲ್ಲ.

ಆದರೆ ಮಾನವ ಪ್ರಾಣಿಗೆ ಕಾನೂನು ಇದೆ. ಮನುಷ್ಯ ಮಾತ್ರ ಕಾನೂನನ್ನು ಕೈಗೆತ್ತಿಕೊಳ್ಳುತ್ತಾನೆ. ಎಲ್ಲವುಗಳ ಆಚೆಗೆ ಮಾನವ ಬುದ್ಧಿಜೀವಿ. ಹಾಗೆಯೇ ಸಮಾಜ ಪ್ರಾಣಿಯೂ ಹೌದು. ಬುದ್ಧಿಜೀವಿಯಾದ ಮಾನವ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿದ್ದಾನೆ. ಇದು ಮಾನವ ಲೋಕದ ಅನಾರೋಗ್ಯಕರ ಬೆಳವಣಿಗೆ ಎಂದು ವಿಷಾದಿಸಿದರು.

ಸಮ್ಮುಖ ವಹಿಸಿದ್ದ ಹೆಗ್ಗುಂದ ವನಕಲ್ಲು ಮಲ್ಲೇಶ್ವರ ಮಠದ ಶ್ರೀ ಬಸವ ರಮಾನಂದ ಸ್ವಾಮೀಜಿ ಮಾತನಾಡಿ, ಸಂವಿಧಾನದಲ್ಲಿ ಶಿಕ್ಷಣ, ಸಂಘಟನೆ, ಹೋರಾಟ ಎಂಬ ಮೂರು ಅಂಶಗಳನ್ನು ಅಂಬೇಡ್ಕರ್‌ರವರು ಕೊಟ್ಟಿದ್ದಾರೆ. ಪ್ರಪಂಚದ ಎಲ್ಲ ಸಂವಿಧಾನಗಳಿಗಿಂತ ಭಾರತದ ಸಂವಿಧಾನವೇ ಶ್ರೇಷ್ಠವಾದುದು. ಇದರ ಹಿನ್ನೆಲೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾ ರಂಗಗಳಿವೆ ಎಂದರು.

ಸರಸ್ವತಿ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ| ಎನ್‌.ಡಿ. ಗೌಡ ಮಾತನಾಡಿ, 1987ರಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ಅ ಧಿನಿಯಮ ಜಾರಿಗೆ ಬಂದಿದೆ. ಇದರ ಆಶಯ ಭಾರತೀಯ ಪ್ರಜೆ ಕಾನೂನು ಜ್ಞಾನ ತಿಳಿದಿರಬೇಕು. ಅದೇ ರೀತಿ ರಾಜ್ಯ ಮಟ್ಟದ ಸೇವೆಗಳ ಪ್ರಾ ಧಿಕಾರ ರಚನೆಯಾಯಿತು. ಇದು ಸಂವಿಧಾನದ ಆಶಯ.

Advertisement

ಉಚಿತವಾಗಿ ಕಾನೂನು ನೆರವು ನೀಡಬೇಕು. ಜನತಾ ನ್ಯಾಯಾಲಯಗಳನ್ನು ಸಂವಿಧಾನದ ಚೌಕಟ್ಟಿನಲ್ಲಿ ಸ್ಥಾಪಿಸಲಾಯಿತು. ಯಾವುದೇ ವ್ಯಕ್ತಿಯ ವಿರುದ್ಧ ದಾವೆ ಹೂಡಲು ಆ ವ್ಯಕ್ತಿ ಉಚಿತ ಕಾನೂನು ನೆರವು ಪಡೆಯಬಹುದು. ಆದರೆ ಎಷ್ಟೋ ಜನರಿಗೆ ಕಾನೂನಿನ ಹಕ್ಕುಗಳು ಗೊತ್ತಾಗುತ್ತಿಲ್ಲ. ಒಬ್ಬ ವ್ಯಕ್ತಿ ಹುಟ್ಟಿನಿಂದ 36 ಹಕ್ಕುಗಳನ್ನು ಸ್ವಾಭಾವಿಕವಾಗಿ ಪಡೆಯುತ್ತಾನೆ ಎಂದು ತಿಳಿಸಿದರು.

ಮಹಿಳೆ, ಮಕ್ಕಳು, ಅಶಕ್ತರು, ಕಾರ್ಮಿಕರು, ಜೀತದಾಳುಗಳು ಸೇರಿದಂತೆ ಅನೇಕರು ಉಚಿತ ಕಾನೂನು ಸಲಹೆ ಪಡೆಯಬಹುದಾಗಿದೆ. ವಾರ್ಷಿಕವಾಗಿ ಯಾವುದೇ ಧರ್ಮದ ವ್ಯಕ್ತಿ ಒಂದು ಲಕ್ಷದ ಒಳಗೆ ಆದಾಯ ಹೊಂದಿರುವವರು ಉಚಿತ ಕಾನೂನು ಸಲಹೆ ಪಡೆಯಬಹುದು. ಇಂಥವರು ಯಾವುದೇ ಶುಲ್ಕ ಕಟ್ಟಬೇಕಿಲ್ಲ. ಜನತಾ ನ್ಯಾಯಾಲಯಗಳು ಉಭಯ ಪಕ್ಷಗಾರರ ಸಮಸ್ಯೆಯನ್ನು ಇವರು ಯಾವುದೇ ನ್ಯಾಯಲಯಕ್ಕೆ ಹೋಗದ ಹಾಗೆ ಸಮಸ್ಯೆ ಬಗೆಹರಿಸಬಹುದಾಗಿದೆ.

ಪುರಸಭೆ, ನಗರಸಭೆ, ಗ್ರಾಮಪಂಚಾಯಿತಿ, ಬ್ಯಾಂಕ್‌ ವಿಷಯಗಳಿಗೆ ಸಂಬಂಧಿಸಿದ ಪ್ರಕರಣಗಳು, ವೈವಾಹಿಕ ಜೀವನದ ಸಮಸ್ಯೆ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಲೋಕ್‌ ಅದಾಲತ್‌ನಲ್ಲಿ ಬಗೆಹರಿಸಬಹುದು. ರಾಜಿ ಮಾಡಿಕೊಳ್ಳುವ ಅಥವಾ ರಾಜಿ ಮಾಡಿಕೊಳ್ಳಲಾಗದ ಪ್ರಕರಣಗಳು ಲೋಕ ಅದಾಲತ್‌ಗೆ ಬರುತ್ತವೆ ಎಂದು ವಿವರಿಸಿದರು. ವಿಧಾನ ಪರಿಷತ್‌ ಸದಸ್ಯ ಕೆ.ಎಸ್‌. ನವೀನ್‌, ವೀರಶೈವ ಸಮಾಜದ ಅಧ್ಯಕ್ಷ ಎಲ್‌.ಬಿ. ರಾಜಶೇಖರ್‌ ಇದ್ದರು. ಎನ್‌.ಬಿ. ವಿಶ್ವನಾಥ್‌ ಸ್ವಾಗತಿಸಿದರು. ಬಸವರಾಜ ಹುರಳಿ ನಿರೂಪಿಸಿದರು.

ಪ್ರತಿಯೊಬ್ಬರಿಗೂ ಕಾನೂನು ಪ್ರಜ್ಞೆ, ತಿಳಿವಳಿಕೆ ಮುಖ್ಯ. “ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು’ ಸಂವಿಧಾನದ ಆಶಯವಾಗಿದೆ. ಕಾನೂನು ಅರಿವು ಹೊಂದಿರುವವರು ಕಾನೂನು ಅರಿವು ಇಲ್ಲದವರಲ್ಲಿ ಅರಿವು ಮೂಡಿಸಬೇಕು.
ಡಾ| ಎನ್‌.ಡಿ. ಗೌಡ, ಸರಸ್ವತಿ ಕಾನೂನು
ಕಾಲೇಜಿನ ಸಹಾಯಕ ಪ್ರಾಧ್ಯಾಪಕ

Advertisement

Udayavani is now on Telegram. Click here to join our channel and stay updated with the latest news.

Next