Advertisement

ತುಳುವಿಗೆ ರಾಜ್ಯಭಾಷೆ ಗೌರವ ಪರಿಗಣನೆ; ನರಿಂಗಾನ ಕಂಬಳೋತ್ಸವದಲ್ಲಿ ಸಿಎಂ ಭರವಸೆ

02:40 AM Jan 12, 2025 | Team Udayavani |

ಮಂಗಳೂರು: ತುಳುನಾಡಿನಲ್ಲಿ ಕಂಬಳ ಅತ್ಯಂತ ಪುರಾತನ ಹಾಗೂ ಬಹಳ ಜನಪ್ರಿಯ ಕ್ರೀಡೆಯಾಗಿ ಜನಮಾನಸದಲ್ಲಿ ನೆಲೆಯೂರಿದೆ. ಇದಕ್ಕೆ ಪೂರಕವಾಗಿ ತುಳು ಭಾಷೆಯನ್ನು ಎರಡನೇ ರಾಜ್ಯ ಭಾಷೆಯನ್ನಾಗಿ ಪರಿಗಣಿಸುವ ಬಗ್ಗೆ ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಲಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.

Advertisement

ವಿಧಾನಸಭೆಯ ಸ್ಪೀಕರ್‌ಯು. ಟಿ ಖಾದರ್‌ ನೇತೃತ್ವದಲ್ಲಿ ಆಯೋ ಜಿಸಲಾದ ಲವ – ಕುಶ ಜೋಡುಕರೆ ನರಿಂಗಾನ ಕಂಬಳೋತ್ಸವದಲ್ಲಿ ಶನಿವಾರ ಭಾಗವಹಿಸಿ ಅವರು ಮಾತನಾಡಿದರು.

ಉಳ್ಳಾಲಕ್ಕೆ ಸಾವಿರ ಕೋಟಿ ರೂ. ಅನುದಾನ: ಖಾದರ್‌
ಸ್ಪೀಕರ್‌ ಖಾದರ್‌ಮಾತನಾಡಿ, ಮಂಗಳೂರು ಕ್ಷೇತ್ರಕ್ಕೆ ಸಣ್ಣ ಅವಧಿಯಲ್ಲಿ ಒಂದು ಸಾವಿರ ಕೋಟಿ ರೂ.ಗೂ ಅಧಿಕ ಅನುದಾನವನ್ನು ಸರಕಾರ ನೀಡಿದೆ. ನಾನು ಸ್ಪೀಕರ್‌ಆಗಿರುವ ಕಾರಣದಿಂದಲೇ ಇಷ್ಟು ದೊಡ್ಡ ಅನುದಾನ ಬರಲು ಸಾಧ್ಯವಾಗಿದೆ ಎಂದು ಹೇಳಿದರು.

ಗೇರು ನಿಗಮ ಅಧ್ಯಕ್ಷೆ ಮಮತಾ ಗಟ್ಟಿ ನೇತೃತ್ವದಲ್ಲಿ ಮಹಿಳೆಯರು ಆರತಿ ಬೆಳಗಿ ಸಿಎಂ ಅವರನ್ನು ಬರಮಾಡಿಕೊಂಡರು. ಹುಲಿವೇಷ ಕುಣಿತವನ್ನು ಸಿಎಂ ವೀಕ್ಷಿಸಿದರು.

ಬೆಳ್ಳಿ ನೊಗ, ಬೆತ್ತ
ಮುಖ್ಯಮಂತ್ರಿಗಳು ಮಂಜೊಟ್ಟಿಗೆ ಆಗಮಿಸಿ ಕೋಣಗಳ ಮೈ ಸವರಿ ಪುಳಕಿತಗೊಂಡರು. ಖಾದರ್‌ ಅವರು ಮುಖ್ಯಮಂತ್ರಿಗೆ ಕಂಬಳದ ಬೆಳ್ಳಿನೊಗ ಹಾಗೂ ಬೆಳ್ಳಿಯ ಕಂಬಳ ಬೆತ್ತ ನೀಡಿದರು.

Advertisement

ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌, ಪೌರಾಡಳಿತ ಸಚಿವ ರಹೀಂ ಖಾನ್‌, ಶಾಸಕ ಅಶೋಕ್‌ ಕುಮಾರ್‌ ರೈ, ವಿಧಾನ ಪರಿಷತ್‌ ಸದಸ್ಯರಾದ ಐವನ್‌ ಡಿ’ಸೋಜಾ, ಮಂಜುನಾಥ ಭಂಡಾರಿ, ನಸೀರ್‌ ಅಹಮದ್‌, ಮಾಜಿ ಸಚಿವ ರಮಾನಾಥ ರೈ, ಪ್ರಮುಖರಾದ ಶಕುಂತಳಾ ಶೆಟ್ಟಿ, ಬೆಳಪು ದೇವೀಪ್ರಸಾದ್‌ ಶೆಟ್ಟಿ, ವಿಜಯ್‌ ಕುಮಾರ್‌ ಕಂಗಿನಮನೆ, ಮಿಥುನ್‌ ರೈ, ಕಣಚೂರು ಮೋನು, ಹರೀಶ್‌ ಕುಮಾರ್‌, ರಕ್ಷಿತ್‌ ಶಿವರಾಂ, ಇನಾಯತ್‌ ಅಲಿ, ಆರ್‌.ಪದ್ಮರಾಜ್‌ ಮತ್ತಿತರರು ಉಪಸ್ಥಿತರಿದ್ದರು.

ಕಂಬಳ ಸಮಿತಿ ಕಾರ್ಯಾಧ್ಯಕ್ಷ ಪ್ರಶಾಂತ್‌ ಕಾಜವ ಮಿತ್ತಕೋಡಿ ಸ್ವಾಗತಿಸಿದರು. ಮಂಜುಳಾ ಶೆಟ್ಟಿ, ರಝಾಕ್‌ ಕುಕ್ಕಾಜೆ ನಿರೂಪಿಸಿದರು.

ಸ್ಪೀಕರ್‌ ಸ್ಥಾನ ನಿರಾಕರಿಸಿದ್ದ ಖಾದರ್‌ !
ಖಾದರ್‌ ಮೊದಲು ಸ್ಪೀಕರ್‌ ಆಗಲು ಒಪ್ಪಿರಲಿಲ್ಲ. ನಾನು ಕರೆದು ಮನವೊಲಿಸಿದ್ದೆ. ಶಿಷ್ಟಾಚಾರ ಪ್ರಕಾರ ಅವರು ನನಗಿಂತ ಎತ್ತರ ಸ್ಥಾನದಲ್ಲಿದ್ದಾರೆ. ರಾಜಕೀಯದಲ್ಲಿ ಯಾವುದೂ ಶಾಶ್ವತ ಅಲ್ಲ. ಜನರ ಆಶೀರ್ವಾದ ಇದ್ದರೆ ಮಾತ್ರ ಕುರ್ಚಿಯಲ್ಲಿ ಇರಲು ಸಾಧ್ಯ. ಯು.ಟಿ. ಖಾದರ್‌ ಉತ್ತಮ ರಾಜಕಾರಣಿ. ಅವರು ಇನ್ನೂ ಎತ್ತರಕ್ಕೆ ಹೋಗಲಿ ಎಂದು ಸಿದ್ದರಾಮಯ್ಯ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.