ಮೈಸೂರು: ಕಳೆದ ಕೆಲ ದಿನಗಳಿಂದ ವರುಣನ ಆರ್ಭಟಕ್ಕೆ ನಗರದಲ್ಲಿ ಸಾಕಷ್ಟು ಅವಘಡಗಳು ಸಂಭವಿಸಿದ್ದು, ಇತ್ತೀಚಿಗೆ ಸುರಿದ ಮಳೆಗೆ ಎರಡು ಅಂತಸ್ತಿನ ಮನೆಯೊಂದು ಕುಸಿದಿದ್ದು ಮತ್ತೂಂದೆಡೆ ಹಲವು ಮರಗಳು ನೆಲಕ್ಕುರುಳಿವೆ.
ಕುಸಿದುಬಿದ್ದ ಮನೆ: ಎರಡು ದಿನಗಳ ಹಿಂದಷ್ಟೇ ಸುರಿದ ಭಾರೀ ಮಳೆಗೆ ಎರಡು ಅಂತಸ್ಥಿನ ಮನೆಯೊಂದು ಕುಸಿದುಬಿದ್ದಿರುವ ಘಟನೆ ಉದಯಗಿರಿಯಲ್ಲಿ ಭಾನುವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ನಗರ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಫೈರೋಜ್ ಖಾನ್ ಮನೆ ಸಂಪೂರ್ಣ ಕುಸಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ನೆಲಕ್ಕುರುಳಿದ ಮನೆಯಲ್ಲಿ ಫೈರೋಜ್ ಖಾನ್ ಕುಟುಂಬ ಸೇರಿದಂತೆ ಎರಡು ಕುಟುಂಬಗಳು ವಾಸವಾಗಿದ್ದವು. ಆದರೆ ಭಾನುವಾರ ರಾತ್ರಿ ಸುರಿದ ಮಳೆಗೆ ಮನೆಯ ಗೋಡೆಗಳು ಶಿಥಿಲಗೊಂಡಿದ್ದು, ಇದನ್ನು ಕಂಡು ಎಚ್ಚೆತ್ತ ನಿವಾಸಿಗಳು ಕೂಡಲೇ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.
ಇದಾದ ಕೆಲವೇ ಕ್ಷಣದಲ್ಲಿ ಮನೆಯ ಚಾವಣಿ ಕುಸಿದು ಬಿದ್ದಿದ್ದು, ಘಟನೆಯಲ್ಲಿ ಮನೆಯಲ್ಲಿದ್ದ ಪೀಠೊಪಕರಣಗಳು ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಹಾನಿಯಾಗಿವೆ. ವಿಷಯ ತಿಳಿದು ಸ್ಥಳಕ್ಕಾಮಿಸಿದ ಪಾಲಿಕೆ ಅಭಯ ತಂಡದ ಸಿಬ್ಬಂದಿ ತೆರವು ಕಾರ್ಯಾಚರಣೆ ನಡೆಸಿದರು.
ನೆಲಕ್ಕುರುಳಿದ ಮನೆ: ನಗರದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯ ಅಬ್ಬರ ಸೋಮವಾರವೂ ಮುಂದುವರಿಯಿತು. ಮಧ್ಯಾಹ್ನ 2 ಗಂಟೆ ವೇಳೆಗೆ ಆರಂಭಗೊಂಡ ಮಳೆ ಅರ್ಧಗಂಟೆಗೂ ಹೆಚ್ಚು ಕಾಲ ನಿರಂತರವಾಗಿ ಸುರಿಯಿತು. ಪರಿಣಾಮ ಕೆಲವು ರಸ್ತೆಗಳು ಜಲಾವೃತಗೊಂಡು ವಾಹನ ಸಂಚಾರಕ್ಕೆ ಅಡ್ಡಿಯಾಯಿತು.
ಈ ನಡುವೆ ಸೋಮವಾರ ಮಧ್ಯಾಹ್ನ ಸುರಿದ ಮಳೆಗೆ ನಗರದ ಎಂ.ಜಿ.ರಸ್ತೆಯ ವಾಟರ್ ಟ್ಯಾಂಕ್ ಬಳಿಯ ಬೃಹತ್ ಗಾತ್ರದ ಮರವೊಂದು ಧರೆಗುರುಳಿ ಬಿದ್ದಿದೆ. ಘಟನೆಯಿಂದ ಹಲವು ಹೊತ್ತಿನವರೆಗೂ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಳಿಕ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪಾಲಿಕೆಯ ಅಭಯ ತಂಡ, ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರವನ್ನು ತೆರವುಗೊಳಿಸಿ, ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿದರು.